ಸಾರಾಂಶ
ನವದೆಹಲಿ: ಆಪರೇಷನ್ ಸಿಂದೂರದ ವೇಳೆ ಛಿದ್ರವಾಗಿರುವ ತನ್ನ ವಾಯುನೆಲೆಗಳ ದುರಸ್ತಿ ಕಾರ್ಯ ಕೈಗೊಳ್ಳಲು ಪಾಕಿಸ್ತಾನ ಮುಂದಾಗಿದೆ. ಈ ಹಿನ್ನೆಲೆಯಲ್ಲಿ, ರಾವಲ್ಪಿಂಡಿ, ಕಲ್ಲಾರ್ ಕಹರ್, ರಿಸಲ್ಪುರ್ ಸೇರಿದಂತೆ ವಿವಿಧ ವಾಯುನೆಲೆಗಳ ರಿಪೇರಿಗೆ ಪಾಕಿಸ್ತಾನದ ವಾಯುಪಡೆ ಟೆಂಡರ್ ಆಹ್ವಾನಿಸಿದೆ.
ಭಾರತ ಭೀಕರ ದಾಳಿ ನಡೆಸಿದರೂ ತನ್ನ ವಾಯುನೆಲೆಗೆ ಯಾವುದೇ ಹಾನಿಯಾಗಿಲ್ಲ. ಬದಲಾಗಿ ತನ್ನ ದಾಳಿಗೆ ಭಾರತದ ವಾಯುನೆಲೆಗಳು ಭಾರೀ ಹಾನಿಗೊಳಗಾಗಿದೆ. ಇನ್ನು ಹಲವು ವರ್ಷಗಳ ಕಾಲ ಅದು ಬಳಕೆಗೆ ಬರುವುದಿಲ್ಲ ಎಂದೆಲ್ಲಾ ಸುಳ್ಳು ಹೇಳಿ ಪಾಕಿಸ್ತಾನ ಸರ್ಕಾರ ತನ್ನ ನಾಗರಿಕರಿಗೆ ಮಂಕುಬೂದಿ ಎರಚಿತ್ತು. ಆದರೆ ಇದೀಗ ಸುಳ್ಳು ಮುಚ್ಚಿಟ್ಟುಕೊಳ್ಳಲಾಗದೇ, ಸೇನಾನೆಲೆಗಳ ದುರಸ್ತಿಗೆ ಮತ್ತು ವಿವಿಧ ಉಪಕರಣಗಳ ಪೂರೈಕೆಗಾಗಿ ಅರ್ಹರಿಂದ ಟೆಂಡರ್ ಅಹ್ವಾನಿಸಿದೆ.
‘ಎಲ್ಲಿ ದಾಳಿ ಮಾಡಿದರೆ ಪಾಕಿಸ್ತಾನಕ್ಕೆ ಅತಿ ಹೆಚ್ಚು ಹಾನಿಯಾಗುವುದೋ ಅಲ್ಲಿಗೆ ಪೆಟ್ಟು ನೀಡಿದ್ದೇವೆ’ ಎಂದು ಆಪರೇಷನ್ ಸಿಂದೂರದ ಬಳಿಕ ವೈರಿರಾಷ್ಟ್ರದ ವಾಯುನೆಲೆಗಳನ್ನು ಉಲ್ಲೇಖಿಸಿ ಭಾರತ ಹೇಳಿತ್ತು. ಬಾಹ್ಯಾಕಾಶ ಚಿತ್ರಗಳಿಂದ ಕೂಡ, ಪಾಕಿಸ್ತಾನದ ವಾಯುನೆಲೆಗಳು ಪೂರ್ಣ ನಾಶವಾಗಿರುವುದು ಕಂಡುಬಂದಿತ್ತು.
ಹೆಡ್ ಆಫೀಸ್ ಬದಲು?:
ಈ ನಡುವೆ ರಾವಲ್ಪಿಂಡಿಯನ್ನು ಸೇನೆಯ ಕೇಂದ್ರ ಕಚೇರಿಯ ಬಳಿಯೇ ಭಾರತ ದಾಳಿ ನಡೆಸಿದ್ದರಿಂದ ಭಾರೀ ಮುಜುಗರಕ್ಕೆ ಒಳಗಾಗಿರುವ ಪಾಕಿಸ್ತಾನ, ತನ್ನ ಸೇನೆಯ ಕೇಂದ್ರ ಕಚೇರಿಯನ್ನೇ ರಾಜಧಾನಿ ಇಸ್ಲಾಮಾಬಾದ್‌ಗೆ ವರ್ಗಾಯಿಸಲು ಚಿಂತಿಸಿದೆ ಎನ್ನಲಾಗಿದೆ. ರಾವಲ್ಪಿಂಡಿಗೆ ಹೋಲಿಸಿದರೆ ರಾಜಧಾನಿ ಇಸ್ಲಾಮಾಬಾದ್ ವಾಯುರಕ್ಷಣಾ ವ್ಯವಸ್ಥೆ ಸೇರಿದಂತೆ ಹೆಚ್ಚಿನ ರಕ್ಷಣೆ ಹೊಂದಿರುವ ಕಾರಣ ಸರ್ಕಾರ ಇಂಥದ್ದೊಂದು ಚಿಂತನೆ ನಡೆಸಿದೆ ಎನ್ನಲಾಗಿದೆ.