ಸಾರಾಂಶ
- ತಾನೇ ಥಳಿಸಿ ಹಲ್ಲೆಗೆ ಒಳಗಾದ ಕತೆ ಕಟ್ಟಿದ್ದ ಅಧಿಕಾರಿ
- ಕನ್ನಡಿಗರ ಹೆಸರಿಗೆ ಮಸಿ ಬಳಿಯಲು ಶಿಲಾದಿತ್ಯ ಯತ್ನ- ಆನ್‌ಲೈನಲ್ಲಿ ಕನ್ನಡಿಗರ ಅಭಿಯಾನ । ಸವಾರ ಬಿಡುಗಡೆ
==ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ್ದ ರಸ್ತೆ ಹೊಡೆದಾಟ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಕನ್ನಡಿಗ ಬೈಕ್ ಸವಾರನಿಂದ ತನ್ನ ಮೇಲೆ ಹಲ್ಲೆಯಾಯಿತು ಎಂದು ವಾಯುಪಡೆಯಲ್ಲಿ ವಿಂಗ್ ಕಮಾಂಡರ್ ಆಗಿರುವ ಕೋಲ್ಕತಾ ಮೂಲದ ಶಿಲಾದಿತ್ಯ ಬೋಸ್ ಮಾಡಿದ್ದ ಆರೋಪ ಸುಳ್ಳು ಎಂದು ಸಿಸಿಟೀವಿ ದೃಶ್ಯಾವಳಿಗಳಲ್ಲಿ ಬಹಿರಂಗವಾಗಿದೆ.ಕನ್ನಡಿಗ ಬೈಕ್ ಸವಾರನ ಮೇಲೆ ಅತ್ಯಂತ ಕ್ರೂರವಾಗಿ ವಿಂಗ್ ಕಮಾಂಡರೇ ಹಲ್ಲೆ ಮಾಡಿರುವುದು ದೃಶ್ಯಗಳಿಂದ ಸಾಬೀತಾದ ಹಿನ್ನೆಲೆಯಲ್ಲಿ ಕನ್ನಡಿಗರು ಆನ್‌ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಅತಿದೊಡ್ಡ ಅಭಿಯಾನವನ್ನೇ ನಡೆಸಿದ್ದಾರೆ. ಕನ್ನಡಿಗರ ಘನತೆಗೆ ಮಸಿ ಬಳಿಯಲು ಯತ್ನಿಸಿದ ಶಿಲಾದಿತ್ಯ ಬೋಸ್‌ನನ್ನು ಬಂಧಿಸಬೇಕು ಎಂಬ ಆಗ್ರಹ ಮುಗಿಲುಮುಟ್ಟಿದೆ. ಇದರ ಬೆನ್ನಲ್ಲೇ ಎಫ್‌ಐಆರ್ ದಾಖಲಾಗಿದೆ. ಆದರೆ ಅದರಲ್ಲಿ ವಿಂಗ್ ಕಮಾಂಡರ್ ಹೆಸರಿನ ಬದಲು ಕಾರಿನ ಸಂಖ್ಯೆ ಆಧರಿಸಿ ದಾಖಲಿಸದಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಈ ನಡುವೆ, ಠಾಣಾ ಜಾಮೀನಿನ ಮೇರೆಗೆ ಬಂಧಿತ ಬೈಕ್ ಸವಾರ, ಕನ್ನಡಿಗ ವಿಕಾಸ್ ಕುಮಾರ್ ಮಂಗಳವಾರ ಬಿಡುಗಡೆಗೊಂಡಿದ್ದಾರೆ. ಇದೇ ವೇಳೆ ಕನ್ನಡಿಗ ಬೈಕ್ ಸವಾರನ ಮೇಲೆ ಗೂಂಡಾಗಿರಿ ನಡೆಸಿದ ಆರೋಪ ಹೊತ್ತಿರುವ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಪತ್ನಿ ಮಧುಮಿತಾ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.ಇನ್ನೊಂದೆಡೆ ಕನ್ನಡಿಗನ ಮೇಲೆ ಭಾಷಾ ತಾರತಮ್ಯದ ಸುಳ್ಳು ಆರೋಪ ಮಾಡಿದ್ದ ವಿಂಗ್ ಕಮಾಂಡರ್ ಶಿಲಾದಿತ್ಯ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿವಿಧ ಪಕ್ಷಗಳ ಹಲವು ಮುಖಂಡರು ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಕನ್ನಡಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಗಲಾಟೆ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವಿಂಗ್ ಕಮಾಂಡರ್ ಶಿಲಾದಿತ್ಯ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಖುದ್ದು ನಗರ ಪೊಲೀಸ್ ಆಯುಕ್ತ ದಯಾನಂದ್ ಕೂಡ ಸ್ಪಷ್ಟಪಡಿಸಿದ್ದಾರೆ.ನನ್ನ ಮೇಲೆ ವಿಂಗ್ ಕಮಾಂಡರ್ ಸುಳ್ಳು ಆರೋಪ ಹೊರಿಸಿದ್ದಾರೆ. ಇದರಿಂದ ನಾನು ಕೆಲಸ ಕಳೆದುಕೊಳ್ಳುವ ಸಂಕಷ್ಟ ಎದುರಾಗಿದೆ ಎಂದು ಸಂತ್ರಸ್ತ ವಿಕಾಸ್ ಕುಮಾರ್ ನೊಂದು ನುಡಿದ್ದಾರೆ. ವಿಂಗ್ ಕಮಾಂಡರ್‌ಗೂ ಸಾಮಾನ್ಯ ಜನರಿಗೆ ಒಂದೇ ಕಾನೂನಿರೋದು. ನನ್ನ ಮಗನ ಮೇಲೆ ಹಲ್ಲೆ ನಡೆಸಿರುವ ವಿಂಗ್ ಕಮಾಂಡರ್‌ನನ್ನು ಬಂಧಿಸಬೇಕು ಎಂದು ವಿಕಾಸ್ ಕುಮಾರ್ ತಾಯಿ ಜ್ಯೋತಿ ಆಗ್ರಹಿಸಿದ್ದಾರೆ.
ಆಗಿದ್ದೇನು?:ಹಳೇ ಮದ್ರಾಸ್ ರಸ್ತೆಯ ಗ್ರ್ಯಾಂಡ್ ಗೋಪಾಲನ್ ಮಾಲ್ ಬಳಿ ವಾಹನ ಹಿಂದಿಕ್ಕುವ ವಿಚಾರವಾಗಿ ವಿಂಗ್ ಕಮಾಂಡರ್ ಶಿಲಾದಿತ್ಯ ದಂಪತಿ ಹಾಗೂ ಖಾಸಗಿ ಕಂಪನಿ ಉದ್ಯೋಗಿ ವಿಕಾಸ್ ಮಧ್ಯೆ ಸೋಮವಾರ ಗಲಾಟೆಯಾಗಿತ್ತು. ಈ ವೇಳೆ ಬೈಕ್ ಸವಾರನ ಮೇಲೆ ಮನಬಂದಂತೆ ಥಳಿಸಿ ವಿಂಗ್ ಕಮಾಂಡರ್ ರೋಷಾವೇಷ ತೋರಿಸಿದ್ದರು. ಈ ಹಲ್ಲೆಯ ಸಿಸಿಟಿವಿ ಕ್ಯಾಮೆರಾದ ವಿಡಿಯೋಗಳು ಬಹಿರಂಗವಾಗಿ ಕಮಾಂಡರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
ತಮ್ಮ ತಂದೆಯ ಶಸ್ತ್ರಚಿಕಿತ್ಸೆ ನಿಮಿತ್ತ ಕೋಲ್ಕತ್ತಾಕ್ಕೆ ವಿಮಾನದಲ್ಲಿ ಕಮಾಂಡರ್ ಶಿಲಾದಿತ್ಯ ತೆರಳಬೇಕಿತ್ತು. ಹೀಗಾಗಿ ತಮ್ಮ ಪತಿಯನ್ನು ಹಳೇ ಮದ್ರಾಸ್ ರಸ್ತೆಯ ಗೋಪಾಲನ್ ಮಾಲ್ ಸಮೀಪದ ಬಸ್ ನಿಲ್ದಾಣಕ್ಕೆ ಡ್ರಾಪ್ ಮಾಡಲು ಸೋಮವಾರ ಬೆಳಗ್ಗೆ 6.30ರ ವೇಳೆ ಕಾರಿನಲ್ಲಿ ಮಧುಮಿತಾ ಬಂದಿದ್ದರು. ಅದೇ ವೇಳೆ ಹಳೇ ಮದ್ರಾಸ್ ರಸ್ತೆಯಲ್ಲಿ ಖಾಸಗಿ ಕಂಪನಿ ಉದ್ಯೋಗಿ ವಿಕಾಸ್ ಕುಮಾರ್ ಅವರು ಬೈಕ್‌ನಲ್ಲಿ ಬಂದಿದ್ದಾರೆ. ತಮ್ಮ ಕಾರಿಗೆ ಡಿಕ್ಕಿ ಹೊಡೆಯುವಂತೆ ಅತಿವೇಗವಾಗಿ ಬೈಕ್ ಓಡಿಸಿಕೊಂಡು ಬಂದಿದ್ದಾನೆ ಎಂದು ಆರೋಪಿಸಿ ಶಿಲಾದಿತ್ಯ ಪತ್ನಿ ಆಕ್ಷೇಪಿಸಿದ್ದಾರೆ. ಈ ಮಾತಿಗೆ ಬೈಕ್ ಸವಾರ ವಿಕಾಸ್ ತಿರುಗೇಟು ನೀಡಿದ್ದಾರೆ. ಈ ಹಂತದಲ್ಲಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಆಗ ಕೆರಳಿದ ವಿಂಗ್ ಕಮಾಂಡ್ ಶಿಲಾದಿತ್ಯ, ಕಾರಿನಿಂದಿಳಿದು ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿದ್ದಾರೆ. ಕಾಲಿನಿಂದ ಒದ್ದು ಮುಖಕ್ಕೆ ಗುದ್ದಿದ್ದಲ್ಲದೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ದೂರಲಾಗಿದೆ.ಇದಕ್ಕೆ ಸವಾರ ಸಹ ಪ್ರತಿರೋಧ ತೋರಿದ್ದಾರೆ. ಕೊನೆಗೆ ಸ್ಥಳೀಯರ ಮಧ್ಯಪ್ರವೇಶದಿಂದ ಪರಿಸ್ಥಿತಿ ಶಾಂತವಾಗಿದೆ. ಈ ಹಲ್ಲೆ ಸಂಬಂಧ ದೂರು-ಪ್ರತಿ ದೂರು ದಾಖಲಾಗಿದ್ದವು. ವಿಂಗ್ ಕಮಾಂಡರ್ ದೂರು ಆಧರಿಸಿ ಬೈಕ್ ಸವಾರ ವಿಕಾಸ್ ಕುಮಾರ್ ನನ್ನು ಸೋಮವಾರ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು. ಇತ್ತ ಬೈಕ್ ಸವಾರನ ದೂರು ಆಧರಿಸಿ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಆರೋಪಿ ವಿಂಗ್ ಕಮಾಂಡರ್ ದಂಪತಿ ತಲೆಮರೆಸಿಕೊಂಡಿದ್ದಾರೆ.
ಬೈಕ್ ಸವಾರನ ಪರವಾಗಿ ರೂಪೇಶ್ ರಾಜಣ್ಣ ಸೇರಿದಂತೆ ಕನ್ನಡ ಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಸೋಮವಾರ ಸಂಜೆಯಿಂದಲೇ ನಿರಂತರವಾಗಿ ಕಾನೂನು ಹೋರಾಟ ನಡೆಸಿದ್ದರು. ಕೊನೆಗೆ ಠಾಣಾ ಮಂಜೂರು ಮಾಡಿ ವಿಕಾಸ್‌ನನ್ನು ಮಂಗಳವಾರ ಪೊಲೀಸರು ಬಿಡುಗಡೆಗೊಳಿಸಿದ್ದಾರೆ.ವಿಂಗ್ ಕಮಾಂಡ್ ಪತ್ನಿಗೆ ನೋಟಿಸ್:
ಬೈಕ್ ಸವಾರನ ಮೇಲಿನ ಹಲ್ಲೆ ಪ್ರಕರಣ ಸಂಬಂಧ ವಿಂಗ್ ಕಮಾಂಡರ್ ಶಿಲಾದಿತ್ಯ ಪತ್ನಿ ಮಧುಮಿತಾ ಅವರಿಗೆ ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರ ತನಿಖೆ ಬಿಸಿ ತಟ್ಟಿದೆ.ಈ ಗಲಾಟೆ ಸಂಬಂಧ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿ ಹಾಗೂ ತಾವು ಮೊಬೈಲ್ ಚಿತ್ರೀಕರಿಸಿದ್ದರೆ ದೃಶ್ಯಾವಳಿ ಸೇರಿದಂತೆ ಕೆಲ ಮಾಹಿತಿ ಕೋರಿ ಮಧುಮಿತಾ ಅವರಿಗೆ ನೋಟಿಸ್ ನೀಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಬಳಿಕ ಶಿಲಾದಿತ್ಯ ದಂಪತಿ ನಾಪತ್ತೆಯಾಗಿಲ್ಲ. ಸಿ.ವಿ.ರಾಮನ್ ನಗರದಲ್ಲೇ ಮನೆಯಲ್ಲೇ ಶಿಲಾದಿತ್ಯ ಪತ್ನಿ ಮಧುಮಿತಾ ಇದ್ದಾರೆ. ತಮ್ಮ ತಂದೆ ಶಸ್ತ್ರ ಚಿಕಿತ್ಸೆ ಸಲುವಾಗಿ ಕೋಲ್ಕತ್ತಾಗೆ ವಿಂಗ್ ಕಮಾಂಡರ್ ತೆರಳಿದ್ದಾರೆ. ಕೋಲ್ಕತ್ತಾದಿಂದ ಮರಳಿದ ನಂತರ ಅವರನ್ನು ವಿಚಾರಣೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.