ಸಾರಾಂಶ
ಜೈಪುರ: ಭಾರತ-ಪಾಕಿಸ್ತಾನ ನಡುವಿನ ಯುದ್ಧ ಪರಿಸ್ಥಿತಿಯಿಂದಾಗಿ ದಿಢೀರ್ ಪಂದ್ಯ ರದ್ದುಗೊಂಡಾಗ ಆತಂಕದಿಂದ ಕ್ರೀಡಾಂಗಣ ತೊರೆದಿದ್ದ ಪಂಜಾಬ್ ಕಿಂಗ್ಸ್, ಭಾನುವಾರ 1 ವಾರದ ಬಳಿಕ ಮೈದಾನಕ್ಕಿಳಿಯಲಿದೆ. ಈಗಾಗಲೇ ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದಿರುವ ರಾಜಸ್ಥಾನ ರಾಯಲ್ಸ್ ವಿರುದ್ಧ ಸೆಣಸಲಿರುವ ಪಂಜಾಬ್, ಪ್ಲೇ-ಆಫ್ ಸ್ಥಾನದ ಮೇಲೆ ಕಣ್ಣಿಟ್ಟಿದೆ.
11 ಪಂದ್ಯಗಳಿಂದ 15 ಅಂಕ ಹೊಂದಿರುವ ಪಂಜಾಬ್, 2 ಗೆಲುವು ಸಾಧಿಸಿದರೆ ನಿಸ್ಸಂದೇಹವಾಗಿ ಪ್ಲೇ-ಆಫ್‌ಗೇರಲಿದೆ. ಒಂದು ಗೆಲುವು ಸಾಧಿಸಿದರೂ ನಾಕೌಟ್ ಹಂತಕ್ಕೆ ಪ್ರವೇಶಿಸುವ ಅವಕಾಶ ಸಿಗಬಹುದು. ಆದರೆ ಇತರ ಪಂದ್ಯಗಳ ಫಲಿತಾಂಶ ತನ್ನ ಪರವಾಗಿ ದಾಖಲಾಗಬೇಕಿದೆ.
ಪಂಜಾಬ್‌ಗೆ ಈ ಪಂದ್ಯದಲ್ಲಿ ಇಬ್ಬರು ಪ್ರಮುಖ ವಿದೇಶಿ ಆಟಗಾರರ ಅನುಪಸ್ಥಿತಿ ಕಾಡಲಿದೆ. ಮಾರ್ಕಸ್ ಸ್ಟೋಯ್ನಿಸ್ ಹಾಗೂ ಜೋಶ್ ಇಂಗ್ಲಿಸ್ ಭಾರತಕ್ಕೆ ವಾಪಸ್ ಬರುವುದಾಗಿ ಹೇಳಿದ್ದಾರಾದರೂ, ಈ ಪಂದ್ಯಕ್ಕೆ ಅವರು ಆಯ್ಕೆಗೆ ಲಭ್ಯರಿಲ್ಲ. ಹೀಗಾಗಿ, ಬಿಗ್‌ಬ್ಯಾಶ್‌ನಲ್ಲಿ ಅಬ್ಬರಿಸಿದ್ದ ಮಿಚ್ ಓವನ್ ಪಾದಾರ್ಪಣೆ ಮಾಡಬಹುದು. ನ್ಯಾಂಡ್ರೆ ಬರ್ಗರ್ ಸಹ ಆಡುವ ನಿರೀಕ್ಷೆ ಇದೆ.
ಮತ್ತೊಂದೆಡೆ ರಾಜಸ್ಥಾನ ಆಡಿರುವ 12 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ತಂಡಕ್ಕೆ ಇದು ತವರಿನಲ್ಲಿ ಈ ವರ್ಷ ಕೊನೆಯ ಪಂದ್ಯ. ಸಂಜು ಸ್ಯಾಮ್ಸನ್ ಗಾಯದಿಂದ ಚೇತರಿಸಿಕೊಂಡಿದ್ದು, ತಂಡಕ್ಕೆ ಮರಳಿದ್ದಾರೆ. ಅವರೇ ತಂಡ ಮುನ್ನಡೆಸಲಿದ್ದಾರೆ. ರಾಜಸ್ಥಾನ ಬಾಕಿ ಇರುವ ಪಂದ್ಯಗಳಲ್ಲಿ ಗೆದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿಯುವುದನ್ನು ತಪ್ಪಿಸಿಕೊಳ್ಳಲು ಎದುರು ನೋಡುತ್ತಿದೆ. ಪಂದ್ಯ: ಮಧ್ಯಾಹ್ನ 3.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸ್ಟಾರ್