ಸಾರಾಂಶ
ಚಂಡೀಗಢ: ಒಂದೆಡೆ ಪಾಕಿಸ್ತಾನ ಬೆಂಬಲಿತ ಉಗ್ರರು ಅಮಾಯಕ ಭಾರತೀಯರನ್ನು ಹತ್ಯೆ ಮಾಡುತ್ತಿದ್ದರೆ, ಇನ್ನೊಂದೆಡೆ ಹಣದ ಆಸೆಗೆ ಶತ್ರು ದೇಶ ಪಾಕಿಸ್ತಾನಕ್ಕೆ ಭಾರತದ ರಹಸ್ಯ ಮಾಹಿತಿ ನೀಡುತ್ತಿದ್ದ ಮಹಿಳಾ ಯೂಟ್ಯೂಬರ್ ಸೇರಿದಂತೆ 6 ಜನರನ್ನು ಹರ್ಯಾಣದಲ್ಲಿ ಬಂಧಿಸಲಾಗಿದೆ. ಬಂಧಿತರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ, ಭಾರತದಲ್ಲಿನ ಪಾಕಿಸ್ತಾನದ ರಾಯಭಾರ ಕಚೇರಿ ಜೊತೆ ನಂಟು ಹೊಂದಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಹರ್ಯಾಣ, ಪಂಜಾಬ್‌ನಾದ್ಯಂತ ಈ ಜಾಲ ವ್ಯಾಪಿಸಿದ್ದು, ಇವರು ಪಾಕ್ ಏಜೆಂಟ್‌ಗಳಿಗೆ, ಐಎಸ್‌ಐಗೆ ಹಣ, ಇತರ ಆಮಿಷಗಳಿಗೆ ಒಳಗಾಗಿ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಬಂಧಿತರನ್ನು ಟ್ರಾವೆಲ್ ವಿತ್ ಜೋ ಎಂಬ ಯೂಟ್ಯೂಬ್ ಚಾನಲ್ ನಡೆಸುತ್ತಿದ್ದ ಜ್ಯೋತಿ ಮಲ್ಹೋತ್ರಾ, ಗುಜಲಾ, ಬಾನು ನಸ್ರೀನಾ, ಯಮೀನ್ ಮೊಹಮ್ಮದ್, ನೂಹ್ ಅರ್ಮಾನ್, ದೇವೇಂದ್ರ ಸಿಂಗ್ ಬಂಧಿತರು.
ಯೂಟ್ಯೂಬರ್:
ಬಂಧಿತ ಯೂಟ್ಯೂಬರ್ ಜ್ಯೋತಿ 2023ರಲ್ಲಿ ಕಮಿಷನ್ ಏಜೆಂಟ್‌ಗಳ ಮೂಲಕ ವೀಸಾ ಪಡೆದು ಪಾಕಿಸ್ತಾನಕ್ಕೆ ತೆರಳಿದ್ದಳು. ಅಲ್ಲಿ ಆಕೆಗೆ ಪಾಕಿಸ್ತಾನ ಹೈಕಮಿಷನ್ ಸಿಬ್ಬಂದಿ ಡ್ಯಾನಿಶ್ ಎಂಬಾತನ ಪರಿಚಯವಾಗಿತ್ತು. ಬಳಿಕ ಆಕೆ ಪಾಕಿಸ್ತಾನಿ ಗುಪ್ತಚರ ಇಲಾಖೆಯೊಂದಿಗೆ ನಿರಂತರ ಸಂಪರ್ಕ ಬೆಳೆಸಿಕೊಂಡು ಬೇಹುಗಾರಿಕೆ ನಡೆಸುತ್ತಿದ್ದಳು. ವಾಟ್ಸಾಪ್, ಟೆಲಿಗ್ರಾಮ್, ಸ್ನ್ಯಾಪ್‌ಚಾಟ್‌ನಂತಹ ಫ್ಲಾಟ್‌ಫಾರ್ಮ್ ಮೂಲಕ ಪಾಕಿಸ್ತಾನದ ಏಜೆಂಟ್‌ಗಳ ಜೊತೆ ಜ್ಯೋತಿ ನಿರಂತರ ಸಂಪರ್ಕದಲ್ಲಿದ್ದಳು. ಭಾರತದ ಸ್ಥಳಗಳ ಬಗ್ಗೆ ಅವರೊಂದಿಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿದ್ದಳು. ಪಾಕ್ ಗುಪ್ತಚರ ಅಧಿಕಾರಿಗಳೊಂದಿಗೆ ಆಕೆ ಬಾಲಿಗೆ ಕೂಡ ಹೋಗಿ ಬಂದಿದ್ದಳು ಎನ್ನಲಾಗಿದೆ.
ಮದುವೆ, ಹಣಕಾಸಿನ ಆಮಿಷ:
ಪಂಜಾಬ್‌ನ ಗುಜಲಾ ಎಂಬಾಕೆಯನ್ನು ಡ್ಯಾನಿಷ್ ಪ್ರೀತಿಸಿ ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಅನಂತರ ಆಕೆಗೆ ಹಲವು ಸಲ ಆನ್‌ಲೈನ್ ಮೂಲಕ ಹಣ ವರ್ಗಾಯಿಸಿದ್ದ. ಏ.23ರಂದು ಆಕೆಯ ತನ್ನ ಸ್ನೇಹಿತೆಯೊಂದಿಗೆ ಪಾಕಿಸ್ತಾನ ಹೈಕಮಿಷನ್‌ಗೆ ತೆರಳಿ ಡ್ಯಾನಿಶ್‌ನನ್ನು ಭೇಟಿಯಾಗಿ, ವೀಸಾ ಕೆಲಸವನ್ನು ಮಾಡಿಸಿಕೊಂಡಿದ್ದಳು ಎನ್ನುವುದು ಬಯಲಾಗಿದೆ. ಈ ಸಂಬಂಧ ಆಕೆಯ ಸ್ನೇಹಿತೆ ಬಾನು ನಸ್ರೀನಾಳನ್ನು ಕೂಡ ಬಂಧಿಸಲಾಗಿದೆ.
ಇನ್ನು ಡ್ಯಾನಿಶ್ ಜೊತೆ ಹಣಕಾಸು ನಂಟು ಹೊಂದಿದ್ದ ಯಮೀನ್ ಮೊಹಮ್ಮದ್ ಮತ್ತು ಪಾಕಿಸ್ತಾನಕ್ಕೆ ಭಾರತದ ಸಿಮ್ ಕಾರ್ಡ್ ಪೂರೈಸಿದ್ದ, ಪಾಕ್ ಸೂಚನೆ ಮೇರೆಗೆ ರಕ್ಷಣಾ ಎಕ್ಸ್ ಪೋ 2025ಗೆ ಭೇಟಿ ನೀಡಿದ ಆರೋಪ ಎದುರಿಸುತ್ತಿರುವ ನುಹ್ ಅರ್ಮಾನ್‌ನನ್ನು ಕೂಡ ಬಂಧಿಸಲಾಗಿದೆ.
ಇನ್ನೊಂದೆಡೆ ಪಾಣಿಪತ್‌ನ ವಿದ್ಯಾರ್ಥಿ ದೇವೇಂದ್ರ ಸಿಂಗ್ ಧಿಲ್ಲೋನ್‌ನ್ನು ಬಂಧಿಸಲಾಗಿದೆ. ಆತ ನವೆಂಬರ್‌ನಲ್ಲಿ ಕರ್ತಾರ್‌ಪುರ ಕಾರಿಡಾರ್ ಮೂಲಕ ಪಾಕಿಸ್ತಾನಕ್ಕೆ ಹೋಗಿದ್ದ. ಅಲ್ಲಿ ಪಾಕಿಸ್ತಾನದ ಐಎಸ್‌ಐ ಅಧಿಕಾರಿಗಳೊಂದಿಗೆ ಸೂಕ್ಷ್ಮ ಮಾಹಿತಿ ಹಂಚಿಕೊಂಡಿದ್ದನು. ಜೊತೆಗೆ ಪಟಿಯಾಲ ಕಂಟೋನ್ಮೆಂಟ್ ವಿಡಿಯೋಗಳನ್ನು ಕಳುಹಿಸಿದ್ದ ಇದಕ್ಕಾಗಿಯೇ ಧಿಲ್ಲೋನ್‌ಗೆ ಐಎಸ್‌ಐ ಹಣ ಖರ್ಚು ಮಾಡುತ್ತಿತ್ತು ಎನ್ನುವುದು ಬಯಲಾಗಿದೆ.