ಸಾರಾಂಶ
ಶಿವಮೊಗ್ಗ: ಭಾರತ ಇಂದು ಸಂದಿಗ್ಧ ಸ್ಥಿತಿಯಲ್ಲಿದೆ. ಯುದ್ಧದ ಕಾರ್ಮೋಡ ಕವಿದಿದೆ. ಯುದ್ಧ ಎನ್ನುವುದು ಕೊನೆಯ ಅಸ್ತ್ರ ಎಂದು ತುಮಕೂರು ವಿವಿ ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ.ಕೆ.ಪ್ರಸನ್ನಕುಮಾರ್ ಹೇಳಿದರು.
ಶಿವಮೊಗ್ಗ: ಭಾರತ ಇಂದು ಸಂದಿಗ್ಧ ಸ್ಥಿತಿಯಲ್ಲಿದೆ. ಯುದ್ಧದ ಕಾರ್ಮೋಡ ಕವಿದಿದೆ. ಯುದ್ಧ ಎನ್ನುವುದು ಕೊನೆಯ ಅಸ್ತ್ರ ಎಂದು ತುಮಕೂರು ವಿವಿ ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ.ಕೆ.ಪ್ರಸನ್ನಕುಮಾರ್ ಹೇಳಿದರು.
ಇಲ್ಲಿನ ಸಹ್ಯಾದ್ರಿ ಕಲಾ ಕಾಲೇಜಿನ ಸಹ್ಯಾದ್ರಿ ಕಲಾ ಪರಿಷತ್, ಐಕ್ಯೂಎಸಿ ಇವರ ಸಹಯೋಗದಲ್ಲಿ ಅನಿಕೇತನ 2ಕೆ25 ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಪಾಕಿಸ್ತಾನ ವಿರುದ್ಧ ಕದನ ವಿರಾಮವಾಗಿದೆ ನಿಜ. ಆದರೆ, ಇದು ಶಾಶ್ವತವಲ್ಲ. ಭಾರತ ಅಲಿಪ್ತ ನೀತಿಯನ್ನು ಅನುಸರಿಸುತ್ತಿದೆ ನಿಜ. ಆದರೆ ಅದು ತಟಸ್ಥ ಅಲ್ಲ, ಸ್ವಾಭಿಮಾನದ ಗೌರವ ನಮ್ಮ ದೇಶಕ್ಕೆ ಇದ್ದೇ ಇದೆ. ಗಾಂಧಿಯಷ್ಟು ಶಾಂತಿ ನಮಗೆ ಬೇಕಾಗಿಲ್ಲ. ಯುದ್ಧ ಕೆಟ್ಟದ್ದು ಎಂದು ಎಲ್ಲರಿಗೂ ಗೊತ್ತು. ಆದರೆ, ಅನಿವಾರ್ಯ ಸ್ಥಿತಿಯಲ್ಲಿ ಯುದ್ಧ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ ಯುವಕರು ದೇಶಕ್ಕಾಗಿ ಸೇವೆ ಮಾಡಲು ಸಿದ್ಧರಾಗಿರಬೇಕು ಎಂದು ಕರೆ ನೀಡಿದರು.ಪಠ್ಯೇತರ ಚಟುವಟಿಕೆಗಳು ವ್ಯಕ್ತಿತ್ವದ ವಿಕಸನ ರೂಪಿಸುತ್ತವೆ. ರಾಷ್ಟ್ರೀಯತೆ ಬೆಳೆಸುತ್ತವೆ. ಸುಪ್ತ ಪ್ರತಿಭೆಗಳನ್ನು ಮುಕ್ತವಾಗಿ ವ್ಯಕ್ತಗೊಳಿಸುತ್ತವೆ. ಯುವಕರೇ ನಾಡಿನ ಸಂಪತ್ತು. ಓದಿನ ಜೊತೆಗೆ ಕೌಶಾಲ್ಯಾಭಿವೃದ್ಧಿ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ಲೇಖಕಿ, ಹಿರಿಯ ಸಾಹಿತಿ ವಿಜಯಾ ಶ್ರೀಧರ್ ಮಾತನಾಡಿ, ಲಲಿತಕಲೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು. ಸಾಹಿತ್ಯ ಮತ್ತು ಸಂಗೀತಕ್ಕೆ ಶಾಂತಿ ನೀಡುವ ಗುಣವಿದೆ. ಮನೋ ವಿಪ್ಲವ, ತಲ್ಲಣಗಳಿಗೆ ಮದ್ದಾಗುತ್ತದೆ. ಅದರಲ್ಲೂ ನೃತ್ಯದಂತಹ ಕಾರ್ಯಕ್ರಮಗಳು ಆತ್ಮದ ಉದ್ಧಾರವಾಗುತ್ತವೆ. ಭರತನಾಟ್ಯವನ್ನು ನಮ್ಮ ಮಕ್ಕಳು ಕಲಿಯಬೇಕು. ದೇವಾನುದೇವತೆಗಳೇ ಸಂಗೀತಕ್ಕೆ ಶರಣಾಗಿದ್ದಾರೆ. ಅಬ್ದುಲ್ ಕಲಾಂ, ಸಿ.ವಿ. ರಾಮನ್ ನಂತಹ ವಿಜ್ಞಾನಿಗಳು ಕೂಡ ಸಂಗೀತದ ಕಡೆ ಆಸ್ತಿ ವಹಿಸುತ್ತಿದ್ದರು. ವಿಜ್ಞಾನ ಮತ್ತು ಸಂಗೀತ ಅವಿನಾಭಾವ ಸಂಬಂಧ ಹೊಂದಿವೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹೃದಯತೆಯನ್ನು ತಂದುಕೊಡುತ್ತವೆ ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ವಿದ್ಯಾರ್ಥಿ ಕ್ಷೇಮಾಧಿಕಾರಿ ಕೆ.ಎನ್.ಮಂಜುನಾಥ್ ಮಾತನಾಡಿದರು. ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಸೈಯದ್ ಸನಾವುಲ್ಲಾ ಅಧ್ಯಕ್ಷತೆ ವಹಿಸಿದ್ದರು.ಇದೇ ವೇಳೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಆರುಂಡಿ ಶ್ರೀನಿವಾಸಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕುವೆಂಪು ವಿ.ವಿ. ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಜಿ.ಎಸ್.ನಾಗರಾಜ್, ಹಣಕಾಸು ಅಧಿಕಾರಿ ಜಿ.ಬಂಗಾರಪ್ಪ, ಸಹಾಯಕ ಕುಲ ಸಚಿವ ಎಚ್.ರಂಗನಾಥ್, ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಕೆ.ಚಂದ್ರಪ್ಪ, ಐಕ್ಯೂಎಸಿ ಮುಖ್ಯಸ್ಥ ಎಚ್.ಪಿ.ಮಂಜುನಾಥ್, ಸಹ್ಯಾದ್ರಿ ಕಲಾ ಪರಿಷತ್ ಉಪಾಧ್ಯಕ್ಷ ರಾಧಾಕೃಷ್ಣ ಇದ್ದರು.