ಸಾರಾಂಶ
ಪಂದ್ಯ ರದ್ದಾದಾಗ ಪಂಜಾಬ್ ವಿರುದ್ಧ ಆಡುತ್ತಿದ್ದ ತಂಡ ಡೆಲ್ಲಿ ಕ್ಯಾಪಿಟಲ್ಸ್. 1 ವಾರ ಬಿಡುವಿನಿಂದ ಯಾವುದಾದರೂ ತಂಡಕ್ಕೆ ಅತಿಹೆಚ್ಚು ನಷ್ಟವಾಗಿದ್ದರೆ ಅಥವಾ ಆಗುವುದಿದ್ದರೆ ಅದು ಡೆಲ್ಲಿಗೆ. ತಂಡಕ್ಕೆ ಭಾನುವಾರ ಗುಜರಾತ್ ಟೈಟಾನ್ಸ್‌ನ ಸವಾಲು ಎದುರಾಗಲಿದೆ.
ನವದೆಹಲಿ: ಭಾರತ-ಪಾಕ್ ಯುದ್ಧ ಪರಿಸ್ಥಿತಿಯಿಂದಾಗಿ ಧರ್ಮಶಾಲಾದಲ್ಲಿ ಪಂದ್ಯ ರದ್ದಾದಾಗ ಪಂಜಾಬ್ ವಿರುದ್ಧ ಆಡುತ್ತಿದ್ದ ತಂಡ ಡೆಲ್ಲಿ ಕ್ಯಾಪಿಟಲ್ಸ್. 1 ವಾರ ಬಿಡುವಿನಿಂದ ಯಾವುದಾದರೂ ತಂಡಕ್ಕೆ ಅತಿಹೆಚ್ಚು ನಷ್ಟವಾಗಿದ್ದರೆ ಅಥವಾ ಆಗುವುದಿದ್ದರೆ ಅದು ಡೆಲ್ಲಿಗೆ. ತಂಡಕ್ಕೆ ಭಾನುವಾರ ಗುಜರಾತ್ ಟೈಟಾನ್ಸ್‌ನ ಸವಾಲು ಎದುರಾಗಲಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆದ್ದರೆ, ಗುಜರಾತ್ ಅಧಿಕೃತವಾಗಿ ಪ್ಲೇ-ಆಫ್‌ಗೆ ಪ್ರವೇಶಿಸಲಿದೆ.
ತಂಡ ಕಳೆದ 5 ಪಂದ್ಯದಲ್ಲಿ ಕೇವಲ 1ರಲ್ಲಿ ಗೆದ್ದಿದ್ದು, ತನ್ನ ಪ್ಲೇ-ಆಫ್ ಹಾದಿಯನ್ನು ಕಠಿಣಗೊಳಿಸಿಕೊಂಡಿದೆ. 11 ಪಂದ್ಯಗಳಿಂದ 13 ಅಂಕ ಗಳಿಸಿರುವ ಡೆಲ್ಲಿ, ಪ್ಲೇ-ಆಫ್‌ನಲ್ಲಿ ಸ್ಥಾನ ಪಡೆಯಲು ಬಾಕಿ ಇರುವ ಮೂರೂ ಪಂದ್ಯಗಳಲ್ಲಿ ಗೆಲ್ಲಬೇಕು. ಆದರೆ, ತಂಡ ಕೆಲ ಸಮಸ್ಯೆಗಳನ್ನು ಹೊಂದಿದ್ದು, ಸೂಕ್ತ ಪರಿಹಾರ ಸಿಗದಿದ್ದರೆ ರೇಸ್‌ನಿಂದ ಹೊರಬೀಳುವುದು ಖಚಿತ.
ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಿ ಆಸ್ಟ್ರೇಲಿಯಾಗೆ ವಾಪಸಾದ ತಾರಾ ವೇಗಿ ಮಿಚೆಲ್ ಸ್ಟಾರ್ಕ್ ಭಾರತಕ್ಕೆ ವಾಪಸಾಗಿಲ್ಲ. ಇನ್ನು ಟ್ರಿಸ್ಟನ್ ಸ್ಟಬ್ಸ್ ಪ್ಲೇ-ಆಫ್‌ಗೆ ಲಭ್ಯರಿಲ್ಲ. ಇನ್ನು, ಸ್ಟಾರ್ಕ್ ಬದಲು ತಂಡಕ್ಕೆ ಆಯ್ಕೆಯಾಗಿರುವ ಬಾಂಗ್ಲಾದ ಮುಸ್ತಾಫಿಜುರ್ ರಹಮಾನ್, ಭಾನುವಾದ ಪಂದ್ಯಕ್ಕೆ ಲಭ್ಯರಿರುವುದು ಅನುಮಾನ. ಹೀಗಾಗಿ, ಡೆಲ್ಲಿ ಕೇವಲ 3 ವಿದೇಶಿ ಆಟಗಾರರೊಂದಿಗೆ ಆಡಿದರೆ ಅಚ್ಚರಿಯಿಲ್ಲ.
ಮತ್ತೊಂದೆಡೆ ಗುಜರಾತ್ ಸ್ಥಿರ ಪ್ರದರ್ಶನ ಕಾಯ್ದುಕೊಂಡಿದೆ. ತಂಡದ ಅಗ್ರ-3 ಬ್ಯಾಟರ್‌ಗಳಾದ ಶುಭ್‌ಮನ್ ಗಿಲ್, ಸಾಯಿ ಸುದರ್ಶನ್ ಹಾಗೂ ಜೋಸ್ ಬಟ್ಲರ್ ತಲಾ 500 ರನ್ ಗಳಿಸಿದ್ದಾರೆ. ತಂಡ ಆಡಿರುವ 11 ಪಂದ್ಯಗಳಲ್ಲಿ ಗಳಿಸಿರುವ ಒಟ್ಟು ರನ್‌ಗಳಲ್ಲಿ ಈ ಮೂವರೇ ಶೇ.70ಕ್ಕಿಂತ ಹೆಚ್ಚು ಕೊಡುಗೆ ನೀಡಿದ್ದಾರೆ. ಈ ಮೂವರ ಮೇಲೆಯೇ ತಂಡ ಹೆಚ್ಚು ಅವಲಂಬಿತಗೊಳ್ಳಲಿದೆ. ಈ ಪಂದ್ಯದಲ್ಲಿ ವೇಗಿ ರಬಾಡ ಕೂಡ ಆಡುವ ನಿರೀಕ್ಷೆ ಇದೆ.
ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್