ಅಗ್ರಸ್ಥಾನಕ್ಕೇರುವ ಡೆಲ್ಲಿ ಆಸೆಗೆ ಕೆಕೆಆರ್‌ ತಡೆ!

| Published : Apr 30 2025, 12:35 AM IST

ಸಾರಾಂಶ

ಡೆಲ್ಲಿ ಕ್ಯಾಪಿಟಲ್ಸ್‌ ತವರಿನಲ್ಲಿ ಸತತ 2ನೇ ಸೋಲು ಅನುಭವಿಸಿದ್ದು, ಪ್ಲೇ-ಆಫ್‌ನಲ್ಲಿ ಸ್ಥಾನಕ್ಕಾಗಿ ಪೈಪೋಟಿ ಹೆಚ್ಚಾಗುತ್ತಿರುವ ಸಮಯದಲ್ಲಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ತಂಡದ ಕನಸಿಗೆ ಅಡ್ಡಿಯಾಗಿದೆ.

- ಕೆಕೆಆರ್‌ಗೆ 14 ರನ್‌ ಗೆಲುವು । ಸತತ 2ನೇ ಸೋಲು ಅನುಭವಿಸಿ 4ನೇ ಸ್ಥಾನದಲ್ಲೇ ಉಳಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ

- ಕೆಕೆಆರ್‌ 204/9 । ಡೆಲ್ಲಿ 190/9, ಡು ಪ್ಲೆಸಿ, ಅಕ್ಷರ್‌ ಹೋರಾಟ ವ್ಯರ್ಥ । ಗೆದ್ದರೂ 7ನೇ ಸ್ಥಾನದಲ್ಲೇ ಉಳಿದ ಕೆಕೆಆರ್‌ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್‌ ತವರಿನಲ್ಲಿ ಸತತ 2ನೇ ಸೋಲು ಅನುಭವಿಸಿದ್ದು, ಪ್ಲೇ-ಆಫ್‌ನಲ್ಲಿ ಸ್ಥಾನಕ್ಕಾಗಿ ಪೈಪೋಟಿ ಹೆಚ್ಚಾಗುತ್ತಿರುವ ಸಮಯದಲ್ಲಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ತಂಡದ ಕನಸಿಗೆ ಅಡ್ಡಿಯಾಗಿದೆ.

ಮಂಗಳವಾರ ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ಸ್‌ ತಂಡವು, ಡೆಲ್ಲಿ ಕ್ಯಾಪಿಟಲ್ಸ್‌ ಪಡೆಯನ್ನು 14 ರನ್‌ಗಳಿಂದ ಬಗ್ಗುಬಡಿಯಿತು. ಈ ಆವೃತ್ತಿಯಲ್ಲಿ 4ನೇ ಜಯ ಸಾಧಿಸಿದ ಹಾಲಿ ಚಾಂಪಿಯನ್‌ ತಂಡ, ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲೇ ಬಾಕಿಯಾಗಿದೆ.

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಕೆಕೆಆರ್‌, 20 ಓವರಲ್ಲಿ 9 ವಿಕೆಟ್‌ಗೆ 204 ರನ್‌ ಕಲೆಹಾಕಿತು. ಅಂಗ್‌ಕೃಷ್‌ ರಘುವಂಶಿ ಹಾಗೂ ರಿಂಕು ಸಿಂಗ್‌ರ ಹೋರಾಟ, ಕೊನೆಯಲ್ಲಿ ಆ್ಯಂಡ್ರೆ ರಸೆಲ್‌ 9 ಎಸೆತದಲ್ಲಿ 17 ರನ್‌ ಕೊಡುಗೆ ನೀಡಿದ್ದು, ತಂಡ ದೊಡ್ಡ ಮೊತ್ತ ಕಲೆಹಾಕಲು ಕಾರಣವಾಯಿತು. ಮಿಚೆಲ್‌ ಸ್ಟಾರ್ಕ್‌ 3 ವಿಕೆಟ್‌ ಕಿತ್ತರೂ, 4 ಓವರಲ್ಲಿ 43 ರನ್‌ ನೀಡಿ ದುಬಾರಿಯಾದರು. ಕಠಿಣ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರಲ್ಲಿ 9 ವಿಕೆಟ್‌ ನಷ್ಟಕ್ಕೆ 190 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಅಭಿಷೇಕ್‌ ಪೊರೆಲ್‌ (4), ಕರುಣ್‌ ನಾಯರ್‌ (15), ಕೆ.ಎಲ್‌.ರಾಹುಲ್‌ (7) ವೈಫಲ್ಯ ಕಂಡರೂ, ಫಾಫ್‌ ಡು ಪ್ಲೆಸಿ ಹಾಗೂ ನಾಯಕ ಅಕ್ಷರ್‌ ಪಟೇಲ್‌ರ ಹೋರಾಟ ತಂಡದ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿತ್ತು. ಡು ಪ್ಲೆಸಿ 45 ಎಸೆತದಲ್ಲಿ 62 ರನ್‌ ಸಿಡಿಸಿದರೆ, ಅಕ್ಷರ್‌ 23 ಎಸೆತದಲ್ಲಿ 43 ರನ್‌ ಕಲೆಹಾಕಿದರು.

ಕೊನೆಯಲ್ಲಿ ವಿಪ್ರಜ್‌ ನಿಗಂ 19 ಎಸೆತದಲ್ಲಿ 38 ರನ್‌ ಗಳಿಸಿ ಹೋರಾಟ ಪ್ರದರ್ಶಿಸಿದರೂ, ಹಾಲಿ ಚಾಂಪಿಯನ್ನರನ್ನು ಗೆಲುವಿನಿಂದ ದೂರವಿಡಲು ಸಾಧ್ಯವಾಗಲಿಲ್ಲ. ನರೇನ್‌ 3, ವರುಣ್‌ 2 ವಿಕೆಟ್‌ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸ್ಕೋರ್‌: ಕೆಕೆಆರ್‌ 20 ಓವರಲ್ಲಿ 204/9 (ಅಂಗ್‌ಕೃಷ್‌ 44, ರಿಂಕು 36, ಸ್ಟಾರ್ಕ್‌ 3-43), ಡೆಲ್ಲಿ 20 ಓವರಲ್ಲಿ 190/9 (ಡು ಪ್ಲೆಸಿ 62, ಅಕ್ಷರ್‌ 43, ವಿಪ್ರಜ್‌ 38, ನರೇನ್‌ 3-29, ವರುಣ್‌ 2-39)