ಸಾರಾಂಶ
ಕಾಂಗ್ರೆಸ್ ಈಶಾನ್ಯಕ್ಕೆ ಏನು ಮಾಡಿದೆ ಎಂದು ಪ್ರಶ್ನಿಸಿ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ 20 ವರ್ಷದಲ್ಲಿ ಮಾಡದ್ದನ್ನು 5 ವರ್ಷದಲ್ಲಿ ನಾವು ಮಾಡಿದ್ದೇವೆ. ಅರುಣಾಚಲ ಪ್ರದೇಶ ಮತ್ತು ಅಸ್ಸಾಂನಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಪ್ರಧಾನಿ ಪ್ರಹಾರ ನಡೆಸಿದ್ದಾರೆ.
ಇಟಾನಗರ/ಗುವಾಹಟಿ: ‘ನಮ್ಮ ಸರ್ಕಾರ ಈಶಾನ್ಯದಲ್ಲಿ ಕಳೆದ 5 ವರ್ಷಗಳಲ್ಲಿ ಮಾಡಿದ ಅಭಿವೃದ್ಧಿಯನ್ನು ಮಾಡಲು ಕಾಂಗ್ರೆಸ್ ಪಕ್ಷ 20 ವರ್ಷ ತೆಗೆದುಕೊಳ್ಳುತ್ತದೆ’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಹಾರ ನಡೆಸಿದ್ದಾರೆ.
ಶನಿವಾರ ಅರುಣಾಚಲ ಪ್ರದೇಶದಲ್ಲಿನ 55,000 ಕೋಟಿ ರು.ಗಳ ವಿವಿಧ ಯೋಜನೆಗಳನ್ನು ಹಾಗೂ ಅಸ್ಸಾಂನಲ್ಲಿ 17, 500 ಕೋಟಿ ರು.ಗಳ ಯೋಜನೆಗಳನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಈಶಾನ್ಯವು ಭಾರತದ ವ್ಯಾಪಾರದಲ್ಲಿ ಬಲವಾದ ಕೊಂಡಿಯಾಗಲಿದೆ. ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡದರೆ ಮೋದಿ ಗ್ಯಾರಂಟಿ ಏನೆಂಬುದನ್ನು ಸ್ಪಷ್ಟವಾಗಿ ನೋಡಬಹುದು ಎಂದು ಹೇಳದರು.ನಂತರ ಅಸ್ಸಾಂನಲ್ಲಿ ವಿವಿಧ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ದಶಕಗಳಿಂದ ಕಾಂಗ್ರೆಸ್ ಸರ್ಕಾರ ಈಶಾನ್ಯ ಭಾಗವನ್ನು ಕಡೆಗಣಿಸಿದೆ. ಆದರೆ ನಮ್ಮ ವಿಕಸಿತ ಭಾರತ ಯೋಜನೆಯಿಂದ ಈಶಾನ್ಯ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ಅವೈಜ್ಞಾನಿಕ ಮತ್ತು ಸುರಕ್ಷಿತವಲ್ಲದ ಕಾರ್ಯತಂತ್ರದಿಂದ ವಿಶ್ವಪರಂಪರೆ ತಾಣಕ್ಕೆ ಸೇರಿದ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ 2013ರಲ್ಲಿ 27 ಘೇಂಡಾಮೃಗಗಳ ಬೇಟೆಯಾಡಲು ಅವಕಾಶ ಸಿಕ್ಕಿತ್ತು. ಆದರೆ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಬೇಟೆಯಾಡುವವರ ಸಂಖ್ಯೆ ಶೂನ್ಯವಾಗಿದೆ ಎಂದು ಹೇಳಿದರು.