ನಾಮಪತ್ರ ಸಲ್ಲಿಕೆ । ಬಿಹಾರದ ಸುದೀರ್ಘ ರಾಜ್ಯ ರಾಜಕೀಯಕ್ಕೆ ತೆರೆ
ಮೊದಲ ಬಿಜೆಪಿ ಸರ್ಕಾರಕ್ಕೆ ಕ್ಷಣಗಣನೆ । ನಿತೀಶ್ ಪುತ್ರಗೆ ಡಿಸಿಎಂ ಪಟ್ಟಪಟನಾ: ಕಳೆದ 2 ದಶಕಗಳ ಅವಧಿಯಲ್ಲಿ 10 ಸಲ ಬಿಹಾರ ಮುಖ್ಯಮಂತ್ರಿಯಾಗಿ ದಾಖಲೆ ಬರೆದಿದ್ದ ನಿತೀಶ್ ಕುಮಾರ್ ತಮ್ಮ ಸುದೀರ್ಘ ರಾಜ್ಯ ರಾಜಕೀಯ ಜೀವನಕ್ಕೆ ಗುರುವಾರ ವಿದಾಯ ಹೇಳಿದ್ದಾರೆ. ಸದ್ಯದಲ್ಲೇ ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಅವರು, ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುತ್ತಿರುವುದಾಗಿ ಘೋಷಿಸಿದ್ದಾರೆ.ಈ ಮೂಲಕ ಒಂದೆಡೆ ಬಿಹಾರದಲ್ಲಿ ನಿತೀಶ್ ಕುಮಾರ್ ರಾಜಕೀಯ ಪರ್ವ ಅಂತ್ಯ ಕಾಣುತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ಮೊದಲ ಬಾರಿ ಸರ್ಕಾರ ರಚಿಸಲು ಸಿದ್ಧತೆ ನಡೆಸಿದೆ. ಇತ್ತ ನಿತೀಶ್ ಅವರ ಪುತ್ರ ನಿಶಾಂತ್‌ರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಿ, ಜೆಡಿಯು ಸಾರಥ್ಯ ವಹಿಸುವ ನಿಟ್ಟಿನಲ್ಲಿಯೂ ಬೆಳವಣಿಗೆಗಳು ಆರಂಭವಾಗಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರದ ಉನ್ನತ ನಾಯಕರ ಸಮ್ಮುಖದಲ್ಲಿ ನಿತೀಶ್ ರಾಜ್ಯಸಭೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ದಲಿತ ಸಿಎಂಗೆ ನಿತೀಶ್ ಇಂಗಿತ:ತಮ್ಮಿಂದ ತೆರವಾದ ಮುಖ್ಯಮಂತ್ರಿ ಸ್ಥಾನವನ್ನು ದಲಿತ ವ್ಯಕ್ತಿಯೊಬ್ಬರಿಗೆ ನೀಡಬೇಕು ಎಂದು ನಿತೀಶ್ ಕುಮಾರ್ ಬಿಜೆಪಿ ನಾಯಕರ ಬಳಿ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಕ್ಷವು ಪರಿಶಿಷ್ಟ ಜಾತಿಯ ವ್ಯಕ್ತಿಯನ್ನು ತಮ್ಮ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಬೇಕು ಅಥವಾ ಜೆಡಿಯುನಿಂದ ಒಬ್ಬರನ್ನು ಉಪಮುಖ್ಯಮಂತ್ರಿಯಾಗಿಸಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.
ಆರ್‌ಜೆಡಿ ಲೇವಡಿ: ರಾಜ್ಯ ರಾಜಕಾರಣದಲ್ಲಿ ನಡೆದ ದಿಢೀರ್ ಬೆಳವಣಿಗೆ ಕುರಿತು ವಿಪಕ್ಷ ಆರ್‌ಜೆಡಿ ವ್ಯಂಗ್ಯವಾಡಿದೆ. ಈ ಕುರಿತು ಮಾತನಾಡಿದ ಪಕ್ಷದ ಅಧ್ಯಕ್ಷ ತೇಜಸ್ವಿ ಯಾದವ್, ‘ಬಿಹಾರದಲ್ಲಿ ಬಿಜೆಪಿ ಮಹಾರಾಷ್ಟ್ರದಲ್ಲಿ ಮಾಡಿದ ಕೆಲಸವನ್ನೇ ಮಾಡಿದೆ. ಆದರೆ ನಿತೀಶ್ ಕುಮಾರ್ ಅವರ ಮೇಲೆ ಮಾತ್ರ ಆರೋಪ ಹೊರಿಸಬೇಕು. ಮೈತ್ರಿಕೂಟದಲ್ಲಿದ್ದಾಗ ಹೆಚ್ಚಿನ ಶಾಸಕರಿದ್ದರೂ ನಾವು ಅವರನ್ನು ಮುಖ್ಯಮಂತ್ರಿಯಾಗಿ ಬೆಂಬಲಿಸಿದೆವು, ಆದರೆ ಅವರು 2 ಬಾರಿ ನಮ್ಮನ್ನು ಬಿಟ್ಟು ಹೊರನಡೆದರು’ ಎಂದು ಟೀಕಿಸಿದ್ದಾರೆ.
==
ರಾಜ್ಯಸಭೆಗೆ ನಿತಿನ್, ಶರದ್ ಅವಿರೋಧ ಆಯ್ಕೆ ಖಚಿತ37 ಸ್ಥಾನಗಳಿಗೆ 40 ನಾಮಪತ್ರಗಳುನವದೆಹಲಿ: ರಾಜ್ಯಸಭೆಯಲ್ಲಿ ಖಾಲಿ ಇರುವ 10 ರಾಜ್ಯಗಳ 37 ಸ್ಥಾನಗಳಿಗೆ 40 ಅಭ್ಯರ್ಥಿಗಳು ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಅವರ ಪೈಕಿ ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿರುವ ನಿತಿನ್ ನವೀನ್, ಬಿಹಾರದ ಮುಖ್ಯಮಂತ್ರಿಯಾಗಿದ್ದ ನಿತೀಶ್ ಕುಮಾರ್ ಮತ್ತು ಎನ್‌ಸಿಪಿಯ ಶರದ್ ಪವಾರ್ ಅವರ ವಿರುದ್ಧ ಯಾವುದೇ ಅರ್ಜಿಗಳು ಸಲ್ಲಿಕೆಯಾಗದ ಕಾರಣ, ಅವಿರೋಧವಾಗಿ ಮೇಲ್ಮನೆ ಪ್ರವೇಶ ಖಚಿತವಾಗಿದೆ. ಶುಕ್ರವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅವುಗಳನ್ನು ಹಿಂಪಡೆಯಲು ಮಾ.9ರ(ಸೋಮವಾರ) ವರೆಗೆ ಅವಕಾಶವಿದೆ.
ಬಿಹಾರದಿಂದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ಕೇಂದ್ರ ಸಚಿವ ರಾಮ್‌ನಾಥ್ ಠಾಕೂರ್, ಆರ್‌ಎಲ್‌ಎಂ ನಾಯಕ ಉಪೇಂದ್ರ ಕುಶ್ವಾಹಾ, ಮಹಾರಾಷ್ಟ್ರದಿಂದ ಶರದ್ ಪವಾರ್, ರಾಮದಾಸ್ ಅಠಾವಳೆ, ವಿನೋದ್ ತಾವ್ಡೆ, ತೆಲಂಗಾಣದಿಂದ ಕಾಂಗ್ರೆಸ್‌ನ ಅಭಿಷೇಕ್ ಮನು ಸಿಂಘ್ವಿ, ವೇಮ್ ನರೇಂದರ್ ರೆಡ್ಡಿ, ತಮಿಳುನಾಡಿನಲ್ಲಿ ಎಐಎಡಿಎಂಕೆಯಿಂದ ಎಂ.ತಂಬಿದೊರೈ, ಪಿಎಂಕೆಯ ಅನ್ಬುಮಣಿ ರಾಮದಾಸ್, ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಬಾಬುಲ್ ಸುಪ್ರಿಯೋ, ಬಂಗಾಳದ ಮಾಜಿ ಡಿಜಿಪಿ ರಾಜೀವ್ ಕುಮಾರ್, ಸುಪ್ರೀಂಕೋರ್ಟ್ ವಕೀಲೆ ಮೇನಕಾ ಗುರುಸ್ವಾಮಿ, ನಟ ಕೋಯಲ್ ಮಲ್ಲಿಕ್, ಬಿಜೆಪಿ ರಾಜ್ಯಾಧ್ಯಕ್ಷ ರಾಹುಲ್ ಸಿನ್ಹಾ ಸೇರಿದಂತೆ ಅನೇಕರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
==ಬಂಗಾಳ ರಾಜ್ಯಪಾಲ ಆನಂದ ಬೋಸ್ ದಿಢೀರ್ ರಾಜೀನಾಮೆ
ಚುನಾವಣೆ ಹೊಸ್ತಿಲಲ್ಲಿ ಅಚ್ಚರಿ ಬೆಳವಣಿಗೆ
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಘೋಷಣೆಗೆ ದಿನಗಣನೆ ಆರಂಭವಾಗಿರುವ ನಡುವೆಯೇ, ರಾಜ್ಯಪಾಲ ಸಿ. ವಿ. ಆನಂದ ಬೋಸ್ ಗುರುವಾರ ಸಂಜೆ ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಚುನಾವಣೆಗೆ ಸಜ್ಜಾಗಿರುವ ರಾಜ್ಯ ರಾಜಕೀಯದಲ್ಲಿ ಈ ಬೆಳವಣಿಗೆ ಸಂಚಲನ ಸೃಷ್ಟಿಸಿದೆ.
ಬೋಸ್ ಬಂಗಾಳದ ರಾಜ್ಯಪಾಲರಾಗಿ 2022ರ ನ.17ರಂದು ಅಧಿಕಾರಕ್ಕೇರಿದ್ದರು. 2027ರ ನವೆಂಬರ್ ವರೆಗೂ ಅವರ ಅವಧಿಯಿತ್ತು. ಸುಮಾರು 20 ತಿಂಗಳು ಮುಂಚಿತವಾಗಿಯೇ ದಿಢೀರನೆ ಪದತ್ಯಾಗ ಮಾಡಿದ್ದಾರೆಅಮಿತ್ ಶಾ ಕುತಂತ್ರ:ರಾಜೀನಾಮೆ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಈ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಆಘಾತ ಮತ್ತು ಕಳವಳವಾಗಿದೆ. ರಾಜ್ಯಪಾಲರು ಗೃಹ ಸಚಿವ ಅಮಿತ್ ಶಾ ಅವರ ಒತ್ತಡಕ್ಕೆ ಒಳಗಾಗಿರಬಹುದು. ಶಾ, ಬೋಸ್ ಅವರ ಬದಲಿಗೆ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರನ್ನು ಬಂಗಾಳದ ರಾಜ್ಯಪಾಲರನ್ನಾಗಿ ನೇಮಿಸಲಿದ್ದಾರೆ’ ಎಂದು ಆರೋಪಿಸಿದರು.