ಸಾರಾಂಶ
ಪಿಟಿಐ ನವದೆಹಲಿ
‘ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸುತ್ತೇವೆ. ಜನರ ಆರ್ಥಿಕ ಸ್ಥಿತಿಯನ್ನು ಅಳೆದು, ಮೀಸಲಾತಿಗೆ ಇರುವ ಶೇ.50ರ ಮಿತಿಯನ್ನೇ ಬುಡಮೇಲು ಮಾಡುತ್ತೇವೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಣೆ ಮಾಡಿದ್ದಾರೆ.
ಕಾಂಗ್ರೆಸ್‌ನ ಘೋಷಣೆಯೇ ‘ಎಣಿಕೆ’. ಏಕೆಂದರೆ, ನ್ಯಾಯ ಒದಗಿಸುವ ನಿಟ್ಟಿನಲ್ಲಿ ಇದೇ ಮೊದಲ ಹೆಜ್ಜೆ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
‘ಯಾರು ಬಡವರು ಎಂದು ನಮಗೆ ಗೊತ್ತಿದೆಯೇ? ಅವರು ಎಷ್ಟು ಜನ ಇದ್ದಾರೆ, ಅವರ ಪರಿಸ್ಥಿತಿ ಏನಿದೆ? ಇದನ್ನೆಲ್ಲಾ ಎಣಿಕೆ ಮಾಡಬೇಕಿಲ್ಲವೇ? ಬಿಹಾರದಲ್ಲಿ ನಡೆದ ಜಾತಿ ಗಣತಿ ವೇಳೆ ಶೇ.88ರಷ್ಟು ಬಡವರು ದಲಿತರು, ಬುಡಕಟ್ಟು ಜನರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಇದ್ದಾರೆ ಎಂಬುದು ಬಹಿರಂಗವಾಗಿತ್ತು’ ಎಂದಿದ್ದಾರೆ.
ಬಿಹಾರದ ಅಂಕಿ-ಅಂಶಗಳು ದೇಶದ ನೈಜ ಚಿತ್ರದ ತುಣುಕು ಅಷ್ಟೆ. ಭಾರತದಲ್ಲಿನ ಬಡವರು ಯಾವ ಸ್ಥಿತಿಯಲ್ಲಿ ಜೀವಿಸುತ್ತಿದ್ದಾರೆ ಎಂಬ ಅರಿವೂ ನಮಗಿಲ್ಲ. ಹೀಗಾಗಿ ನಾವು ಅಧಿಕಾರಕ್ಕೆ ಬಂದರೆ ಎರಡು ಐತಿಹಾಸಿಕ ಹೆಜ್ಜೆ ಇಡುತ್ತೇವೆ.
ಮೊದಲನೆಯದ್ದು, ಜಾತಿ ಗಣತಿ. ಎರಡನೆಯದ್ದು, ಆರ್ಥಿಕ ಸ್ಥಿತಿ ಅಳೆಯುವಿಕೆ. ಇವುಗಳ ಆಧಾರದಲ್ಲಿ ಶೇ.50ರ ಮೀಸಲು ಮಿತಿಯನ್ನು ಕಿತ್ತೊಗೆಯುತ್ತೇವೆ ಎಂದು ಅವರು ಹೇಳಿದ್ದಾರೆ.