ಮಾಲೇಗಾಂವ್‌ ಕೇಸಲ್ಲಿ ಭಾಗವತ್‌ ಸೆರೆಗೆ ಒತ್ತಡ : ಗಂಭೀರ ಆರೋಪ

| N/A | Published : Aug 01 2025, 11:45 PM IST / Updated: Aug 02 2025, 05:00 AM IST

ಸಾರಾಂಶ

 ಮಾಲೇಗಾಂವ್‌ ಸ್ಫೋಟ ಪ್ರಕರಣದಲ್ಲಿ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರನ್ನೂ ಬಂಧಿಸುವಂತೆ ಹಿರಿಯ ಅಧಿಕಾರಿಗಳು ನನ್ನ ಮೇಲೆ ಒತ್ತಡ ಹೇರಿದ್ದರು ಎಂದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಮಾಜಿ ಅಧಿಕಾರಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.

 ಮುಂಬೈ: ಗುರುವಾರಷ್ಟೇ ತೀರ್ಪು ಪ್ರಕಟವಾದ ಮಾಲೇಗಾಂವ್‌ ಸ್ಫೋಟ ಪ್ರಕರಣದಲ್ಲಿ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರನ್ನೂ ಬಂಧಿಸುವಂತೆ ಹಿರಿಯ ಅಧಿಕಾರಿಗಳು ನನ್ನ ಮೇಲೆ ಒತ್ತಡ ಹೇರಿದ್ದರು ಎಂದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಮಾಜಿ ಅಧಿಕಾರಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ನಿವೃತ್ತ ಅಧಿಕಾರಿ ಮೆಹಬೂಬ್ ಮುಜಾವರ್, ‘ಭಾರತದಲ್ಲಿ ‘ಕೇಸರಿ ಭಯೋತ್ಪಾದನೆ’ಯ ನಿರೂಪಣೆಯನ್ನು ಸೃಷ್ಟಿಸುವ ಗುರಿ ಹೊಂದಲಾಗಿತ್ತು. ಆಗ ನನ್ನ ಮೇಲಧಿಕಾರಿಯಾಗಿದ್ದ ಈ ಹಿಂದಿನ ಮುಂಬೈ ಪೊಲೀಸ್‌ ಆಯುಕ್ತ ಮತ್ತು ಅಂದಿನ ಮಾಲೇಗಾಂವ್‌ ಪ್ರಕರಣದ ತನಿಖಾಧಿಕಾರಿ ಪರಮ್ ಬೀರ್ ಸಿಂಗ್ ಅವರಿಂದ ಮೋಹನ್‌ ಭಾಗವತ್‌ ಅವರನ್ನು ಬಂಧಿಸುವಂತೆ ನಿರ್ದೇಶನ ಬಂದಿತ್ತು ’ಎಂದು ಆರೋಪಿಸಿದರು.‘ಆದರೆ ವಿನಾಕಾರಣ ಭಾಗವತ್ ಅವರಂಥ ಪ್ರಭಾವಿ ವ್ಯಕ್ತಿಯನ್ನು ಬಂಧಿಸುವುದು ನನ್ನ ಕೈ ಮೀರಿ ಆಗಿತ್ತು. ಇದಕ್ಕೆ ನಾನು ನಿರಾಕರಿಸಿದೆ. ಬಳಿಕ ನನ್ನನ್ನು ಸುಳ್ಳು ಆರೋಪ ಮಾಡಿ ಹುದ್ದೆಯಿಂದ ತೆಗೆದು ಹಾಕಲಾಗಿತ್ತು. ಆದೆಲ್ಲ ಈಗ ಸುಳ್ಳೆಂದು ಸಾಬೀತಾಗಿದೆ’ ಎಂದರು.

ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌, ಲೆ।ಕ। ಶ್ರೀಕಾಂತ ಪುರೋಹಿತ್ ಸೇರಿ ಮಾಲೇಗಾಂವ್‌ ಸ್ಫೋಟದ ಎಲ್ಲ 7 ಆಪಾದಿತರು ಗುರುವಾರ ಖುಲಾಸೆ ಆಗಿದ್ದರು.

ಫಡ್ನವೀಸ್‌ ಕಿಡಿ:

ಈ ಹಿಂದಿನ ಸರ್ಕಾರಗಳು ಹಾಗೂ ಅಧಿಕಾರಿಗಳು ಹಿಂದೂಗಳನ್ನು ಸಿಲುಕಿಸಲು ನಡೆಸಿದ್ದ ಯತ್ನ ಮುಜಾವರ್‌ ಹೇಳಿಕೆಯಿಂದ ಸಾಬೀತಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಹೇಳಿದ್ದಾರೆ.

Read more Articles on