ಸ್ವಾತಂತ್ರ್ಯದ ಕುರಿತ ಮೋಹನ್‌ ಭಾಗವತ್‌ ಹೇಳಿಕೆ ರಾಷ್ಟ್ರದ್ರೋಹದ್ದು : ರಾಹುಲ್‌ ಗಾಂಧಿ

| Published : Jan 16 2025, 01:30 AM IST / Updated: Jan 16 2025, 04:38 AM IST

Rahul Gandhi

ಸಾರಾಂಶ

ನವದೆಹಲಿ: ಅಯೋಧ್ಯೆ ರಾಮಮಂದಿರ ಉದ್ಘಾಟನೆಯಾದ ದಿನವೇ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು ಎಂಬ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿಕೆ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಅಯೋಧ್ಯೆ ರಾಮಮಂದಿರ ಉದ್ಘಾಟನೆಯಾದ ದಿನವೇ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು ಎಂಬ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿಕೆ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬುಧವಾರ ಇಲ್ಲಿ ನಡೆದ ಕಾಂಗ್ರೆಸ್‌ನ ನೂತನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಈ ಕುರಿತು ಮಾತನಾಡಿದ ರಾಹುಲ್‌ ಗಾಂಧಿ, ‘ಭಾಗವತ್‌ರದ್ದು ದೇಶದ್ರೋಹದ ಹೇಳಿಕೆ. ಇದು ಭಾರತೀಯರಿಗೆ ಮಾಡಿದ ಅವಮಾನ. ಇಂಥ ಹೇಳಿಕೆ ಮೂಲಕ ಅವರು ಸಂವಿಧಾನ ಹಾಗೂ ಬ್ರಿಟಿಷರ ವಿರುದ್ಧದ ಹೋರಾಟವನ್ನು ಅಮಾನ್ಯ ಎಂದಂತಾಯಿತು. ಇಂಥವುಗಳಿಗೆ ಕಿವಿಗೊಡಬಾರದು’ ಎಂದ ರಾಹುಲ್‌ ಗಾಂಧಿ, ‘ಅನ್ನಿಸಿದ್ದನ್ನು ಹೇಳುವ ದಿಟ್ಟತನ ಭಾಗವತ್‌ರಿಗಿದೆ. ಬೇರೆ ದೇಶದಲ್ಲಾಗಿದ್ದರೆ ಅವರನ್ನು ಬಂಧಿಸಲಾಗುತ್ತಿತ್ತು’ ಎಂದು ಕಿಡಿಕಾರಿದರು.

ಇನ್ನು ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಖರ್ಗೆ, ‘1947ರಲ್ಲಿ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ ಎಂದು ಹೇಳುವವರು ಅದಕ್ಕಾಗಿ ಹೋರಾಡಿರಲಿಲ್ಲ, ಜೈಲಿಗೆ ಹೋಗಲಿಲ್ಲ. ನಮ್ಮ ಜನರು ಸ್ವಾತಂತ್ರ್ಯಕ್ಕಾಗಿ ಸೆಣಸಿದ್ದರಿಂದ ನಮಗದು ನೆನಪಿದೆ’ ಎಂದರು. ಅಂತೆಯೇ, ‘ಇಂತಹ ಹೇಳಿಕೆಗಳನ್ನು ಕೋಡುತ್ತಿದ್ದರೆ ಭಾಗವತ್‌ ದೇಶದಲ್ಲಿ ಓಡಾಡುವುದೇ ಕಷ್ಟವಾದೀತು’ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ದೋಷವಿದೆ: ರಾಹುಲ್‌ ಆರೋಪನವದೆಹಲಿ: ‘ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಗಂಭೀರ ದೋಷವಿದ್ದು, ಚುನಾವಣೆ ಪಾರದರ್ಶಕವಾಗಿ ನಡೆಯುವಂತೆ ಚುನಾವಣಾ ಆಯೋಗ ನೋಡಿಕೊಳ್ಳಬೇಕು’ ಎಂದು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.ಕಾಂಗ್ರೆಸ್‌ನ ನೂತನ ಕಚೇರಿ ಉದ್ಘಾಟನೆ ಬಳಿಕ ಮಾತನಾಡಿದ ಅವರು, ‘ಮಹಾರಾಷ್ಟ್ರದಲ್ಲಿ ಲೋಕಸಭೆ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆ ನಡುವೆ ಬರೋಬ್ಬರಿ 1 ಕೋಟಿ ಮತದಾರರು ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಇದನ್ನು ಪರಿಶೀಲಿಸಲು ರಾಜ್ಯದ ಮತದಾರರ ಪಟ್ಟಿ ಕೇಳಿದರೆ, ಅದನ್ನು ಕೊಡಲು ಚುನಾವಣಾ ಆಯೋಗ ನಿರಾಕರಿಸುತ್ತಿದೆ’ ಎಂದು ಆರೋಪಿಸಿದ್ದಾರೆ.

ಅಂತೆಯೇ, ‘ಚುನಾವಣೆಯ ಪಾರದರ್ಶಕತೆಯನ್ನು ಖಚಿತಪಡಿಸುವುದು ಆಯೋಗದ ಕೆಲಸ ಹಾಗೂ ಪವಿತ್ರ ಜವಾಬ್ದಾರಿ. ಆದರೆ, ಹರ್ಯಾಣ ಹಾಗೂ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮತದಾರರ ಪಟ್ಟಿ ನೀಡಲು ಅದು ನಿರಾಕರಿಸುತ್ತಿದೆ’ ಎಂದರು.