ಸಾರಾಂಶ
ಮುಂಬೈ: ಕಳೆದ ವಾರ ಮೈಸೂರಿನಲ್ಲಿ ಪತ್ತೆಯಾದ ಡ್ರಗ್ಸ್ ಫ್ಯಾಕ್ಟರಿ ಪ್ರಕರಣ ಸಂಬಂಧ ಮುಂಬೈ ಪೊಲೀಸರು ಮತ್ತೆ 43.97 ಕೋಟಿ ರು.ಮೌಲ್ಯದ 21.9 ಕೆಜಿ ತೂಕದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಇದರೊಂದಿಗೆ ಇದುವರೆಗೆ ಪ್ರಕರಣದಲ್ಲಿ ವಶಪಡಿಸಿಕೊಂಡ ಮಾದಕ ವಸ್ತುವಿನ ಪ್ರಮಾಣ 210 ಕೆಜಿಗೆ ತಲುಪಿದ್ದು, ಡ್ರಗ್ಸ್ ಮೌಲ್ಯ 435 ಕೋಟಿ ರು.ಗೆ ತಲುಪಿದೆ. ಪ್ರಕರಣದಲ್ಲಿ ಬಂಧಿತರು ನೀಡಿದ ಸುಳಿವಿನ ಮೇರೆಗೆ ಗುರುವಾರ ಮುಂಬೈನ ಪೊವೈ ಪ್ರದೇಶದ ಮೇಲೆ ದಾಳಿ ನಡೆಸಿದ ಪೊಲೀಸರು 21.9 ಕೆಜಿ ತೂಕದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಕರ್ನಾಟಕ ಸೇರಿ ಹಲವೆಡೆ 100 ಕೋಟಿ ವಂಚನೆ: ದಿಲ್ಲಿಯಲ್ಲಿ ನಾಲ್ವರ ಸೆರೆ
ನವದೆಹಲಿ: ನಕಲಿ ವೆಬ್‌ಸೈಟ್ ಮತ್ತು ಬ್ಯಾಂಕ್ ಖಾತೆಗಳ ಮೂಲಕ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 100 ಕೋಟಿ ರು. ವಂಚಿಸಿದ ಆರೋಪದಲ್ಲಿ ದೆಹಲಿ ಪೊಲೀಸರು 4 ಜನರನ್ನು ಬಂಧಿಸಿದ್ದಾರೆ.
‘ಬಂಧಿತರು ನಕಲಿ ಟ್ರೇಡಿಂಗ್ ವೇದಿಕೆಗಳನ್ನು ಸೃಷ್ಟಿಸಿಕೊಂಡು, ಲಾಭದ ಭರವಸೆ ನೀಡಿ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದರು. ಈ ಬಗ್ಗೆ 34 ಪ್ರಕರಣಗಳು ದಾಖಲಾಗಿದ್ದು, 100 ಕೋಟಿ ರು.ಗೂ ಅಧಿಕ ಮೊತ್ತವನ್ನು ದೋಚಲಾಗಿದೆ’ ಎಂದು ಉಪ ಪೊಲೀಸ್ ಆಯುಕ್ತ ಆದಿತ್ಯ ಗೌತಮ್ ತಿಳಿಸಿದ್ದಾರೆ.
ದಾಳಿ ವೇಳೆ, 7 ಮೊಬೈಲ್ ಮತ್ತು ನಕಲಿ ಖಾತೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಶೆಲ್ ಕಂಪನಿಗೆ ಸಂಬಂಧಿಸಿದ ಒಂದೇ ಖಾತೆಯ ವಿರುದ್ಧ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಮತ್ತು ದೆಹಲಿಯಲ್ಲಿ ಡಿಜಿಟಲ್ ಬಂಧನ, ನಕಲಿ ಹೂಡಿಕೆ ಸೇರಿದಂತೆ 22 ದೂರುಗಳು ದಾಖಲಾಗಿವೆ.
ಇವಿಎಂ ದೋಷ ಕುರಿತ ಕೈ ಆರೋಪ ಸಾಬೀತಿಲ್ಲ: ಚು.ಆಯೋಗದ ಸ್ಪಷ್ಟನೆ
ನವದೆಹಲಿ: ಕಳೆದ ವರ್ಷ ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಕಾಂಗ್ರೆಸ್‌ನ 10 ಅಭ್ಯರ್ಥಿಗಳು ಇವಿಎಂ ದೋಷದ ಬಗ್ಗೆ ಪರಿಶೀಲಿಸಲು ಕೋರಿದ್ದರು. ಆದರೆ ಪರಿಶೀಲನೆ ಬಳಿಕ ಅದರಲ್ಲಿ ಯಾವುದೇ ದೋಷದ ಅಂಶ ಕಂಡುಬಂದಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.
ಸೋತಿದ್ದ ಅಭ್ಯರ್ಥಿಗಳು ಇವಿಎಂನ ಬ್ಯಾಲೆಟ್, ಕಂಟ್ರೋಲ್ ಯೂನಿಟ್ ಮತ್ತು ಎಣಿಕೆ ಯಂತ್ರವನ್ನು ಪರೀಕ್ಷೆಗೊಳಪಡಿಸಬೇಕು ಮನವಿ ಮಾಡಿದ್ದರು. ಈ ಹಿನ್ನೆಲೆ ಇವಿಎಂ ಪರೀಕ್ಷೆ ನಡೆಸಿ ಆಯೋಗ ಸ್ಪಷ್ಟನೆ ನೀಡಿದೆ. ‘ಇವಿಎಂನಲ್ಲಿ ಯಾವುದೇ ದೋಷ ಪತ್ತೆಯಾಗಿಲ್ಲ. ವಿವಿಪ್ಯಾಟ್ ಮತ ಎಣಿಕೆಯಲ್ಲಿಯೂ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಇದು ಮತ್ತೊಮ್ಮೆ ಇವಿಎಂ ತಿರುಚುವಿಕೆ ಆರೋಪ ಸುಳ್ಳು ಎನ್ನುವುದನ್ನು ಸಾಬೀತು ಮಾಡಿದೆ’ ಎಂದಿದೆ.