ಬೇರೆ ದೇಶಗಳಲ್ಲಿ ಅಲ್ಪಸಂಖ್ಯಾತರ ಕತೆ ಏನಾಗುತ್ತಿದೆ? : ಮೋಹನ್‌ ಭಾಗವತ್‌ ಪ್ರಶ್ನೆ

| Published : Dec 20 2024, 12:47 AM IST / Updated: Dec 20 2024, 04:18 AM IST

ಸಾರಾಂಶ

ಭಾರತದ ಅಲ್ಪಸಂಖ್ಯಾರತರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಬಗ್ಗೆ ನಮಗೆ ಬುದ್ಧಿವಾದ ಹೇಳಲಾಗುತ್ತಿತ್ತು. ಆದರೆ ಈಗ ಬೇರೆ ದೇಶದ ಅಲ್ಪಸಂಖ್ಯಾತರ ಅವಸ್ಥೆ ಏನಾಗಿದೆ ಎಂಬುದನ್ನು ನೋಡುತ್ತಿದ್ದೇವೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

ಪುಣೆ: ಭಾರತದ ಅಲ್ಪಸಂಖ್ಯಾರತರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಬಗ್ಗೆ ನಮಗೆ ಬುದ್ಧಿವಾದ ಹೇಳಲಾಗುತ್ತಿತ್ತು. ಆದರೆ ಈಗ ಬೇರೆ ದೇಶದ ಅಲ್ಪಸಂಖ್ಯಾತರ ಅವಸ್ಥೆ ಏನಾಗಿದೆ ಎಂಬುದನ್ನು ನೋಡುತ್ತಿದ್ದೇವೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

ಹಿಂದೂ ಸೇವಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ವಿಶ್ವಶಾಂತಿಯ ಬಗ್ಗೆ ದೊಡ್ಡದೊಡ್ಡ ಮಾತುಗಳನ್ನು ಆಡಲಾಗುತ್ತಿದೆ. ನಮಗೂ ಆ ಬಗ್ಗೆ ಸಲಹೆಗಳನ್ನು ಕೊಡಲಾಗುತ್ತಿದೆ. ವಿಪರ್ಯಾಸವೆಂದರೆ ಅತ್ತ ಯುದ್ಧಗಳು ನಿಲ್ಲುತ್ತಿಲ್ಲ’ ಎಂದು ಹೇಳಿದರು.

ಈ ವೇಳೆ ಪರೋಕ್ಷವಾಗಿ ಬಾಂಗ್ಲಾದೇಶದ ಬಗ್ಗೆಯೂ ಮಾತನಾಡಿದ ಭಾಗವತ್‌, ‘ಮಾನವತಾ ಧರ್ಮವು ಶಾಶ್ವತ ಧರ್ಮವಾಗಿದೆ. ಅದು ವಿಶ್ವ ಧರ್ಮವೂ ಆಗಿದ್ದು, ಹಿಂದೂ ಧರ್ಮವೆಂದು ಕರೆಸಿಕೊಳ್ಳುತ್ತದೆ. ಆದರೆ ಜಗತ್ತು ಈ ಧರ್ಮವನ್ನು ಮರೆತಿದೆ. ಆದ್ದರಿಂದಲೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಭಾರತದ ಪಾತ್ರವಿಲ್ಲದೆ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದು ಜಗತ್ತು ನಂಬಿದೆ. ಜಗತ್ತಿನ ಅಗತ್ಯತೆಗಳನ್ನು ಪೂರೈಸುವುದು ನಮ್ಮ ಜವಾಬ್ದಾರಿ’ ಎಂದರು.

ಈ ಮೊದಲು, ಬಾಂಗ್ಲಾದಲ್ಲಿ ಹಸೀನಾ ಸರ್ಕಾರ ಪಥನವಾದ ಬಳಿಕದ ಪರಿಸ್ಥಿತಿಯ ಬಗ್ಗೆ ಸಂಘ ಕಳವಳ ವ್ಯಕ್ತಪಡಿಸಿತ್ತು.

ದಲ್ಲೆವಾಲ್ ಆರೋಗ್ಯ ಪರೀಕ್ಷೆ: ಪಂಜಾಬ್ ಸರ್ಕಾರಕ್ಕೆ ಸುಪ್ರೀಂ ಖಡಕ್‌ ಸೂಚನೆ

ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪಂಜಾಬ್- ಹರಿಯಾಣ ಖನೌರಿ ಗಡಿಯಲ್ಲಿ 21 ದಿನದಿಂದ ಅಮರಣಾಂತ ಉಪವಾಸ ಕೈಗೊಂಡಿರುವ ಜಗಜ್ಜಿತ್ ಸಿಂಗ್ ದಲ್ಲೆವಾಲ್ ಅವರ ಆರೋಗ್ಯ ತಪಾಸಣೆಯನ್ನು ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ಪಂಜಾಬ್ ಸರ್ಕಾರಕ್ಕೆ ಖಡಕ್ಕಾಗಿ ನಿರ್ದೇಶನ ನೀಡಿದೆ.

ದಲ್ಲೆವಾಲ್ ಆರೋಗ್ಯ ತಪಾಸಣೆಯನ್ನು ನಡೆಸದ ಪಂಜಾಬ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕೋರ್ಟ್‌, ‘70 ವರ್ಷದ ವ್ಯಕ್ತಿ 21 ದಿನದಿಂದ ಉಪವಾಸ ಮಾಡುತ್ತಿದ್ದಾರೆ ವಿವಿಧ ಕಾಯಿಲೆಯಿಂದ ಬಳಲುತ್ತಿರುವ ಅವರ ಆರೋಗ್ಯ ಚೆನ್ನಾಗಿರಲು ಹೇಗೆ ಸಾಧ್ಯ? ಅವರ ರಕ್ತ , ಇಸಿಜಿ, ಅಗತ್ಯ ಪರೀಕ್ಷೆಗಳನ್ನು ನಡೆಸಿದ್ದೀರಾ?’ ಎಂದು ಪ್ರಶ್ನಿಸಿತು.

‘ನಾಗರಿಕ ಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಪ್ರಕರಣವನ್ನು ತೆಗೆದುಕೊಳ್ಳಿ. ಅವರು ವೈದ್ಯಕೀಯ ಮೇಲ್ವಿಚಾರಣೆಯ ಮೇರೆಗೆ ವರ್ಷಗಳವರೆಗೆ ಪ್ರತಿಭಟನೆಯನ್ನು ಮುಂದುವರೆಸಿದರು. ಅದೇ ರೀತಿ ದಲ್ಲೆವಾಲ್ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಪ್ರತಿಭಟನೆಯನ್ನು ಮುಂದುವರೆಸಬಹುದು’ ಎಂದರು.

ಇರೋಮ್‌ ಚಾನು ಶರ್ಮಿಳಾ ಎನ್ನುವ ಮಣಿಪುರದ ಮಹಿಳೆ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯಿದೆ ಹಿಂಪಡೆಯಬೇಕು ಎಂದು ಆಗ್ರಹಿಸಿ 2000 ನೇ ಇಸವಿಯಿಂದ 2016ರವರೆಗೆ ಉಪವಾಸ ಕೈಗೊಂಡಿದ್ದರು.