ತಿರುಪತಿ ಲಡ್ಡು ತಯಾರಿಕೆ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಪತ್ತೆ ಕೇಸ್ ಕುರಿತು ಎಸ್‌ಐಟಿ ತನಿಖೆಗೆ ಸುಪ್ರೀಂಕೋರ್ಟ್ ಆದೇಶ

| Published : Oct 05 2024, 07:36 AM IST / Updated: Oct 05 2024, 07:37 AM IST

tirupathi kovil
ತಿರುಪತಿ ಲಡ್ಡು ತಯಾರಿಕೆ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಪತ್ತೆ ಕೇಸ್ ಕುರಿತು ಎಸ್‌ಐಟಿ ತನಿಖೆಗೆ ಸುಪ್ರೀಂಕೋರ್ಟ್ ಆದೇಶ
Share this Article
  • FB
  • TW
  • Linkdin
  • Email

ಸಾರಾಂಶ

ತಿರುಪತಿ ಲಡ್ಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಪತ್ತೆಯಾಗಿತ್ತು ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಸುಪ್ರೀಂಕೋರ್ಟ್ ಶುಕ್ರವಾರ 5 ಸದಸ್ಯರ ಸ್ವತಂತ್ರ ಎಸ್‌ಐಟಿಯನ್ನು ರಚಿಸಿದೆ

ನವದೆಹಲಿ : ತಿರುಪತಿ ಲಡ್ಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಪತ್ತೆಯಾಗಿತ್ತು ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಸುಪ್ರೀಂಕೋರ್ಟ್ ಶುಕ್ರವಾರ 5 ಸದಸ್ಯರ ಸ್ವತಂತ್ರ ಎಸ್‌ಐಟಿಯನ್ನು ರಚಿಸಿದೆ. ಆದರೆ ಕೋರ್ಟ್ ಮೇಲು ಸ್ತುವಾರಿ ತನಿಖೆಗೆ ನಿರಾಕರಿಸಿರುವ ಅದು, ಕೋರ್ಟುಗಳನ್ನು 'ರಾಜಕೀಯ ಯುದ್ಧಭೂಮಿ'ಗಳನ್ನಾಗಿ ಬಳಸಲು ಅವಕಾಶ ನೀಡುವುದಿಲ್ಲ ಎಂದಿದೆ. ಈಗಾಗಲೇ ಆಂಧ್ರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡವನ್ನು (ಎಸ್ ಐಟಿ) ರಚಿಸಿ ತನಿಖೆ ಆರಂಭಿಸಿತ್ತು. ಆದರೆ ಆ ಎಸ್‌ಐಟಿ ಬದಲು ಸುಪ್ರೀಂ ಕೋರ್ಟ್ ಸಿಬಿಐ ನಿರ್ದೇಶಕರಮೇಲು ಸ್ತುವಾರಿಯ ಎಸ್‌ಐಟಿ ರಚನೆಗೆ ಆದೇಶಿಸಿದೆ.

ಇದರಲ್ಲಿ ಒಬ್ಬ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ ಎಐ) ಹಿರಿಯ ಅಧಿಕಾರಿ, ಇಬ್ಬರು ಸಿಬಿಐ ಅಧಿಕಾರಿಗಳು ಮತ್ತು ಇಬ್ಬರು ಆಂಧ್ರಪ್ರದೇಶ ಪೊಲೀಸ್ ಅಧಿಕಾರಿಗಳು ಇರಲಿದ್ದಾರೆ ಎಂದು ನ್ಯಾ| ಬಿ.ಅರ್. ಗವಾಯಿ ಮತ್ತು ನ್ಯಾ| ಕೆ.ವಿ. ವಿಶ್ವನಾಥನ್ ಅವರ ಪೀಠ ಹೇಳಿದೆ. ಕೋರ್ಟ್ ಮೇಲುಸ್ತುವಾರಿಯ ತನಿಖೆ ನಡೆಯಬೇಕು ಎಂದು ರಾಜಕಾರಣಿ ಸುಬ್ರಮ ಣಿಯನ್ ಸ್ವಾಮಿ ಹಾಗೂ ಇತರ ಕೆಲವರು ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃಮಾನ್ಯ ಮಾಡಿದ ಪೀಠ, 'ಸ್ವತಂತ್ರ ಎಸ್‌ಐಟಿ ರಚನೆಗೆ ಸೂಚಿಸುತ್ತೇವೆ. ಆದರೆ ನ್ಯಾಯಾಲಯವನ್ನು ರಾಜಕೀಯ ರಣಾಂಗಣವಾಗಿ ಬಳಸಲು ನಾವು ಅನುಮತಿಸುವುದಿಲ್ಲ

ಹಾಗೂ ಇದನ್ನು ರಾಜ ಕೀಯ ನಾಟಕವಾಗಿ ಪರಿವರ್ತಿಸಲು ಬಯಸುವುದಿಲ್ಲ. ಪ್ರಪಂಚದಾದ್ಯಂತ ಕೋಟ್ಯಂತರ ಜನರ ಭಾವನೆಗಳು ಇದರಲ್ಲಿ ಅಡಗಿವೆ. ಈ ತನಿಖೆ ಸಿಬಿಐ ನಿರ್ದೇಶಕರ ಮೇಲ್ವಿಚಾರಣೆಯಲ್ಲಿ ತನಿಖೆ ಸೂಕ್ತ' ಎಂದಿತು. ಈ ನಡುವೆ, 'ಉಭಯ ಪಕ್ಷಗಾರರು ಮಾಡಿದ ಆರೋಪ-ಪ್ರತ್ಯಾರೋಪಗಳನ್ನು ನಾವು ಗಮನಿಸಿಲ್ಲ. ದೇವರಲ್ಲಿ ನಂಬಿಕೆಯಿರುವ ಕೋಟ್ಯಂತರ ಜನರ ಭಾವನೆಗಳನ್ನು ತಣಿಸುವ ಸಲುವಾಗಿಯೇ ಸುಪ್ರೀಂ ಕೋರ್ಟ್ ಸ್ವತಂತ್ರ ಸಂಸ್ಥೆಗೆ ತನಿಖೆಯನ್ನು ವಹಿಸುವ ಆದೇಶವನ್ನು ನೀಡುತ್ತಿದೆ' ಎಂದ ಪೀಠ, 'ಹಾಗೆಂದ ಮಾತ್ರಕ್ಕೆ ಆಂಧ್ರ ಸರ್ಕಾರ ರಚಿಸಿದ್ದ ಎಸ್‌ಐಟಿ ಮೇಲೆ ನಮಗೆ ಅನುಮಾನವಿದೆ ಎಂದರ್ಥ ಅಲ್ಲ' ಎಂದು ಸ್ಪಷ್ಟಪಡಿಸಿತು.

ರಾಜ್ಯದಲ್ಲಿ ಹಿಂದಿನ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಡಳಿತದಲ್ಲಿ ತಿರುಪತಿ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬು ಇದ್ದ ತುಪ್ಪ ಬಳಸಲಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಕಳೆದ ತಿಂಗಳ ಮಧ್ಯದಲ್ಲಿ ಹೇಳಿಕೊಂಡಿದ್ದರು. ಈ ಆರೋಪ ವನ್ನು ಜಗನ್ ನಿರಾಕರಿಸಿದ್ದರು. ಇದು ಭಾರೀ ರಾಜಕೀಯ ಗದ್ದಲಕ್ಕೆ ಕಾರಣವಾಗಿತ್ತು. ಈ ವಿಷಯ ಮೊದಲ ಬಾರಿ ಸುಪ್ರೀಂ ಕೋರ್ಟ್‌ಗೆ ಬಂದಾಗ, 'ತುಪ್ಪದಲ್ಲಿ ಪ್ರಾಣಿಯ ಕೊಬ್ಬು ಇದೆ ಎಂಬ ಲ್ಯಾಬ್ ವರದಿ ಅಸ್ಪಷ್ಟವಾಗಿದೆ. ಪೂರ್ಣ ತನಿಖೆಯನ್ನೇ ನಡೆಸದೇ ನಾಯ್ಡು ಅವರು ಹೇಗೆ ಈ ಹೇಳಿಕೆ ನೀಡಿದರು? ಕನಿಷ್ಠ ಪಕ್ಷ ದೇವರನ್ನಾದರೂ ರಾಜಕೀಯದಿಂದ ದೂರ ಇಡಬೇಕು' ಎಂದಿತ್ತು.

ನಾಯ್ಡು, ಜಗನ್ ಸ್ವಾಗತ: ಈ ನಡುವೆ ಸುಪ್ರೀಂಕೋರ್ಟ್ ಆದೇಶವನ್ನು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಅವರ ರಾಜಕೀಯ ವೈರಿ, ಮಾಜಿ ಮುಖ್ಯಮಂತ್ರಿ ಜಗಮೋಹನ ರೆಡ್ಡಿ ಸ್ವಾಗತಿಸಿದ್ದಾರೆ. ಆದರೆ, 'ನಾಯ್ಡು ರಚಿಸಿದ್ದ ಎಸ್‌ಐಟಿ ತನಿಖೆಯನ್ನು ಕೋರ್ಟ್ ರದ್ದು ಮಾಡಿದೆ. ಹೀಗಾಗಿ ನಾಯ್ಡು ಕ್ಷಮೆ ಕೇಳಲಿ' ಎಂದು ಜಗನ್ ಆಗ್ರಹಿಸಿದ್ದಾರೆ.