ಹೈದರಾಬಾದ್‌/ವಿಜಯವಾಡ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಕಾರಣ ಕಳೆದ 3 ದಿನಗಳಿಂದ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ 31 ಮಂದಿ ಸಾವನ್ನಪ್ಪಿದ್ದಾರೆ. ಎರಡೂ ರಾಜ್ಯಗಳು ವರುಣನ ಆರ್ಭಟಕ್ಕೆ ತತ್ತರಿಸಿವೆ.

ತೆಲಂಗಾಣದಲ್ಲಿ ವಿವಿಧ ಮಳೆ ಸಂಬಂಧಿತ ಘಟನೆಗಳಲ್ಲಿ 16 ಜನರು ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಆಂಧ್ರಪ್ರದೇಶದಲ್ಲಿ 15 ಮಂದಿ ಬಲಿಯಾಗಿದ್ದಾರೆ. ಉಭಯ ರಾಜ್ಯಗಳಲ್ಲಿ ಪ್ರವಾಹ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ 26 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳನ್ನು ನಿಯೋಜಿಸಲಾಗಿದೆ. 

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರೊಂದಿಗೆ ಮಾತನಾಡಿದ್ದು, ಕೇಂದ್ರ ಸರ್ಕಾರದಿಂದ ಸಾಧ್ಯವಿರುವ ಎಲ್ಲ ಸಹಾಯದ ಭರವಸೆ ನೀಡಿದ್ದಾರೆ.ಮಳೆಯ ಅಬ್ಬರದಿಂದ ಹಲವು ಕಡೆ ರೈಲು ಹಳಿಗಳು ಕೊಚ್ಚಿ ಹೋಗಿವೆ. ಅನೇಕ ಕಡೆ ಹಳಿಗಳು ಜಲಾವೃತ ಆಗಿವೆ. ಹೀಗಾಗಿ 140ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಲಾಗಿದೆ ಮತ್ತು ಎರಡೂ ರಾಜ್ಯಗಳ ಹಲವಾರು ಸ್ಥಳಗಳಲ್ಲಿ ಹಳಿಗಳ ಮೇಲೆ ನೀರು ನಿಂತಿರುವುದರಿಂದ ಬಹು ರೈಲುಗಳನ್ನು ತಿರುಗಿಸಲಾಗಿದೆ.


ಆಂಧ್ರ ತೀರಾ ಬಾಧಿತ:

ಮಳೆಯಿಂದ ಆಂಧ್ರಪ್ರದೇಶದ 4.5 ಲಕ್ಷ ಜನರು ಬಾಧಿತರಾಗಿದ್ದಾರೆ ಹಾಗೂ 31,238 ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರವು ಮಾಡಿ 166 ಪರಿಹಾರ ಕ್ಯಾಂಪ್‌ನಲ್ಲಿ ಇರಿಸಲಾಗಿದೆ.ವಿಜಯವಾಡ, ಎನ್‌ಟಿಆರ್, ಗುಂಟೂರು, ಕೃಷ್ಣಾ, ಏಲೂರು, ಪಲ್ನಾಡು, ಬಾಪಟ್ಲ ಮತ್ತು ಪ್ರಕಾಶಂ ಜಿಲ್ಲೆಗಳು ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಾಗಿವೆ. 1067 ಕಿ.ಮೀ.ನಷ್ಟು ರಸ್ತೆಗಳು ಭಾರಿ ನಾಶಕ್ಕೊಳಗಾಗಿವೆ.

ವಿಜಯವಾಡ ತತ್ತರ: ಆಂಧ್ರದಲ್ಲಿ ಮಳೆಗೆ ಅತೀ ಹೆಚ್ಚು ತತ್ತರಿಸಿರುವ ನಗರ ವಿಜಯವಾಡ ಆಗಿದೆ. ‘ವಿಜಯವಾಡದ ದುಃಖ'''''''' ಎಂದು ಕರೆಯಲ್ಪಡುವ ಬುಡಮೇರು ನದಿಯು 20 ವರ್ಷಗಳ ನಂತರ ಉಕ್ಕೇರಿದೆ. ಹೀಗಾಗಿ ನದಿ ಪಾತ್ರದ ಸುಮಾರು 2.76 ಲಕ್ಷ ಜನರು ಬಾಧಿತರಾಗಿದ್ದಾರೆ. ಅನೇಕ ಪ್ರದೇಶಗಳು ಮುಳುಗಡೆ ಆಗಿವೆ.ಪ್ರವಾಹ ಪೀಡಿತ ವಿಜಯವಾಡದಲ್ಲಿ ಸೋಮವಾರ ಹಾಲು ಮತ್ತು ಆಹಾರದ ಪ್ಯಾಕೆಟ್‌ಗಳಿಗಾಗಿ ಜನರು ಹರಸಾಹಸ ಪಡುತ್ತಿದ್ದಾರೆ.

 ‘ನಾನು ಪ್ರವಾಹದಲ್ಲಿ ಆಹಾರದ ಪ್ಯಾಕೆಟ್‌ ಪಡೆಯಲು ಈಜಿ ಬಂದೆ. ಪ್ಯಾಕೆಟ್‌ ಸಿಗಲಿಲ್ಲ’ ಎಂದು ಸಂತ್ರಸ್ತನೊಬ್ಬ ಕಣ್ಣೀರು ಹಾಕಿದ. ನಗರದಲ್ಲಿ 24 ತಾಸಿನಿಂದ ವಿದ್ಯುತ್‌ ಇಲ್ಲ.ತೆಲಂಗಾಣದಲ್ಲಿ 117 ಹಳ್ಳಿ ಸಂಪರ್ಕ ಕಟ್:ತೆಲಂಗಾಣದಾದ್ಯಂತ 117 ಹೆಚ್ಚು ಹಳ್ಳಿಗಳಿಗೆ ಹೋಗುವ ರಸ್ತೆಗಳು ಮಳೆಯಿಂದ ಸಂಪೂರ್ಣ ಹಾಳಾಗಿವೆ. ಹೀಗಾಗಿ ಈ ಹಳ್ಳಿಗಳಿಗೆ ಹೊರ ಪ್ರಪಂಚದಿಂದ ಸಂಪರ್ಕ ಕಡಿತಗೊಂಡಿದೆ. ಮಳೆಯು ಇಡೀ ರಾಜ್ಯವನ್ನು ಬಾಧಿತ ಮಾಡಿದ್ದು, ಅದರಲ್ಲೂ ಖಮ್ಮಂ ಮತ್ತು ವರಂಗಲ್ ಜಿಲ್ಲೆಗಳು ಹೆಚ್ಚು ಹಾನಿಗೊಳಗಾಗಿವೆ ತಿರುಮಲಯಪಾಲೆಂ ಮಂಡಲದಲ್ಲಿ ಕೇವಲ 24 ಗಂಟೆಗಳಲ್ಲಿ 52.2 ಸೆಂ.ಮೀ ಭಾರಿ ಮಳೆ ಬಿದ್ದಿದ್ದು, ಮಳೆಯ ಅಬ್ಬರಕ್ಕೆ ಸಾಕ್ಷಿ.

ಮಳೆಯಿಂದ ರಾಜ್ಯಕ್ಕೆ 5000 ಕೋಟಿ ರು. ಹಾನಿ ಆದ ಪ್ರಾಥಮಿಕ ಅಂದಾಜಿದೆ. 1.5 ಲಕ್ಷ ಹೆಕ್ಟೇರ್‌ ಬೆಳೆ ಹಾನಿ ಆಗಿದೆ.ಖಮ್ಮಂನಲ್ಲಿ, ಮುನ್ನೇರು ನದಿಯು 30 ವರ್ಷಗಳ ಅಂತರದ ನಂತರ ಈ ಋತುವಿನಲ್ಲಿ ಮತ್ತೆ ಸಂಪೂರ್ಣ ಉಕ್ಕಿ ಹರಿಯುತ್ತಿದ್ದು, ಹಲವಾರು ಜನರು ಪ್ರವಾಹದಲ್ಲಿ ಸಿಲುಕಿದ್ದಾರೆ. ಸೂರ್ಯಪೇಟ್ ಜಿಲ್ಲೆಯಲ್ಲಿ ನಾಗಾರ್ಜುನಸಾಗರ ಎಡದಂಡೆ ಕಾಲುವೆ ಒಡೆದ ಪರಿಣಾಮ ಸುಮಾರು 300 ಎಕರೆ ಬೆಳೆಗೆ ನೀರು ನುಗ್ಗಿದೆ . ಖಮ್ಮಂ ಜಿಲ್ಲೆಯಲ್ಲಿನ ಎಡದಂಡೆ ಕಾಲುವೆಯೂ ಒಡೆದಿದೆ.

ಮುಂಜಾಗ್ರತಾ ಕ್ರಮವಾಗಿ ಹೈದರಾಬಾದ್‌ ಹಾಗೂ ತೆಲಂಗಾಣದ ಇತರ ಕಡೆ ಸೋಮವಾರ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ಸಿಎಂಗಳಿಂದ ಖುದ್ದು ಮುತುವರ್ಜಿ: ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೋಮವಾರ ಪ್ರವಾಹ ಪೀಡಿತ ಜಿಲ್ಲೆಗಳಿಗೆ ತಕ್ಷಣದ 5 ಕೋಟಿ ರು. ಪ್ರವಾಹದಲ್ಲಿ ಮಡಿದವರ ಕುಟುಂಬಗಳಿಗೆ 5 ಲಕ್ಷ ರು. ಪರಿಹಾರವನ್ನು ಘೋಷಿಸಿದ್ದಾರೆ. ಈ ನಡುವೆ 5 ಸಾವಿರ ಕೋಟಿ ರು. ಹಾನಿ ಆಗಿದ್ದು, ಕೇಂದ್ರ ಸರ್ಕಾರ 2000 ಕೋಟಿ ರು. ನೀಡಬೇಕು ಎಂದು ಆಗ್ರಹಿಸಿದ್ದಾರೆ.ಇನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಭಾನುವಾರದಿಂದಲೇ ಖುದ್ದು ಪ್ರವಾಹಪೀಡಿತ ಸ್ಥಳಗಳಲ್ಲಿ ಸಂಚರಿಸುತ್ತಿದ್ದು, ಪರಿಹಾರ ಹಾಗೂ ರಕ್ಷಣಾ ಕಾರ್ಯದ ಮೇಲುಸ್ತುವಾರಿ ಹೊತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಕೂಡ ವಿಜಯವಾಡ ಹಾಗೂ ಇತರ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಜನರಿಗೆ ನೆರವು ನೀಡುತ್ತಿದ್ದಾರೆ.

==

ಹಿಮಾಚಲ ಉತ್ತರಾಖಂಡದಲ್ಲಿ 100ಕ್ಕೂ ಹೆಚ್ಚು ರಸ್ತೆಗಳ ಸಂಪರ್ಕ ಕಡಿತ

ಶಿಮ್ಲಾ/ ಗೋಪೆಶ್ವರ್‌(ಉತ್ತರಾಖಂಡ): ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಮುಂದುವರೆದಿದ್ದು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಸುಮಾರು 109 ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ರಾಜ್ಯದ ಚಂಬಾ, ಕಾಂಗ್ರಾ, ಮಂಡಿ, ಸಿರ್ಮೌರ್‌, ಸೋಲನ್, ಕುಲು ಮತ್ತು ಕಿನ್ನೂರ್‌ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಹಲವು ರಸ್ತೆ ಸಂಪರ್ಕ ಕಡಿತಗೊಂಡಿದೆ. ಇಲ್ಲಿಯವರೆಗೂ ಮಳೆ ಸಂಬಂಧಿತ ಅವಘಡದಲ್ಲಿ ಹಿಮಾಚಲ ಪ್ರದೇಶದಲ್ಲಿ 151ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 1265 ಕೋಟಿ.ರುಗಳಷ್ಟು ನಷ್ಟ ಸಂಭವಿಸಿದೆ. ಈ ನಡುವೆ ಉತ್ತರಾಖಂಡದಲ್ಲಿಯೂ ಮಳೆ ಆರ್ಭಟ ಮುಂದುವರೆದಿದ್ದು, ಚಮೋಲಿ ಜಿಲ್ಲೆಯ ಬದರೀನಾಥ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದ್ದು, ಭಾರತ- ಚೀನಾ ಗಡಿ ಸಂಪರ್ಕಿಸುವ ರಸ್ತೆ ಸೇರಿದಂತೆ ಹಲವು ರಸ್ತೆಗಳ ಸಂಪರ್ಕ ಕಡಿತಗೊಂಡಿದೆ.

==

ಮರಾಠವಾಡ ಭಾರೀ ಮಳೆಗೆ 4 ಸಾವು

ಛತ್ರಪತಿ ಸಂಭಾಜಿನಗರ: ಸತತ 24 ಗಂಟೆಯಿಂದ ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಗ್ರಾಮೀಣ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಪರ್ಭಾನಿ ಜಿಲ್ಲೆಯ ಪತ್ರಿ ಗ್ರಾಮದಲ್ಲಿ 314 ಮಿ.ಮೀ ದಾಖಲೆ ಮಳೆಯಾಗಿದೆ. ಭಾರೀ ಮಳೆಗೆ ಬಹುತೇಕ ಅಣೆಕಟ್ಟುಗಳು ತುಂಬಿವೆ. ನಾಂದೇಡ್‌ನ ವಿಷ್ಣುಪುರಿ ಅಣೆಕಟ್ಟಿನ ಗೇಟ್‌ಗಳನ್ನು ತೆರೆಯಲಾಗಿದೆ. ಅದೇ ರೀತಿ ಜಯಕ್ವಾಡಿ ಅಣೆಕಟ್ಟಿನ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಗೋದಾವರಿ ನದಿಯ ಕೆಳಭಾಗದ ಹಳ್ಳಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.