ಕಂಚಿಯ ಚಿನ್ನ, ಬೆಳ್ಳಿ ಹಲ್ಲಿ ನಾಪತ್ತೆಯಾಗಿಲ್ಲ: ದೇಗುಲ ಸ್ಪಷ್ಟನೆ

| N/A | Published : Nov 08 2025, 01:45 AM IST

Kanchi
ಕಂಚಿಯ ಚಿನ್ನ, ಬೆಳ್ಳಿ ಹಲ್ಲಿ ನಾಪತ್ತೆಯಾಗಿಲ್ಲ: ದೇಗುಲ ಸ್ಪಷ್ಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಚೀಪುರಂನ ಶ್ರೀ ವರದರಾಜ ಪೆರುಮಾಳ ದೇವಸ್ಥಾನದಲ್ಲಿರುವ ಚಿನ್ನ ಮತ್ತು ಬೆಳ್ಳಿಯ ಹಲ್ಲಿಗಳು ನಾಪತ್ತೆಯಾಗಿಲ್ಲ, ಆ ಆರೋಪ ಸುಳ್ಳು ಎಂದು ದೇಗುಲದ ಆಡಳಿತ ಮಂಡಳಿ ಶುಕ್ರವಾರ ಸ್ಪಷ್ಟಪಡಿಸಿದೆ.

 ಚೆನ್ನೈ :  ಕಾಂಚೀಪುರಂನ ಶ್ರೀ ವರದರಾಜ ಪೆರುಮಾಳ ದೇವಸ್ಥಾನದಲ್ಲಿರುವ ಚಿನ್ನ ಮತ್ತು ಬೆಳ್ಳಿಯ ಹಲ್ಲಿಗಳು ನಾಪತ್ತೆಯಾಗಿಲ್ಲ, ಆ ಆರೋಪ ಸುಳ್ಳು ಎಂದು ದೇಗುಲದ ಆಡಳಿತ ಮಂಡಳಿ ಶುಕ್ರವಾರ ಸ್ಪಷ್ಟಪಡಿಸಿದೆ. ವರದರಾಜ ದೇವಸ್ಥಾನದ ಛಾವಣಿಯಲ್ಲಿ ಚಿನ್ನ ಮತ್ತು ಬೆಳ್ಳಿಯಲ್ಲಿ ಕೆತ್ತಿದ 2 ಹಲ್ಲಿಗಳಿವೆ. ಇವುಗಳನ್ನು ಮುಟ್ಟಿ, ನಮಸ್ಕರಿಸಿದರೆ ಪಾಪ ಪರಿಹಾರವಾಗುತ್ತದೆ ಎಂಬ ನಂಬಿಕೆ ಭಕ್ತರದ್ದು. 

ಈ ನಡುವೆ ದೇಗುಲದ ನವೀಕರಣ ಕಾರ್ಯ ಮಾಡಲಾಗಿತ್ತು. ಈ ವೇಳೆ ಅಕ್ರಮ ನಡೆದಿದ್ದು, ಹಲ್ಲಿಗಳನ್ನು ನಾಪತ್ತೆ ಮಾಡಲಾಗಿದೆ ಎಂದು ಧಾರ್ಮಿಕ ಹೋರಾಟಗಾರರೊಬ್ಬರು ಗಂಭೀರ ಆರೋಪ ಮಾಡಿದ್ದರು. ಈ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಆಡಳಿತ ಮಂಡಳಿ, ‘ದೇಗುಲದ ಹಲ್ಲಿಯ ವಿಗ್ರಹಗಳನ್ನು ತೆಗೆದುಹಾಕಲಾಗಿಲ್ಲ ಅಥವಾ ಬದಲಾಯಿಸಲಾಗಿಲ್ಲ. ಕಾರ್ಯಕರ್ತನೊಬ್ಬ ಮಾಡಿರುವ ಆರೋಪ ಸುಳ್ಳು ಮತ್ತು ಕ್ಷುಲ್ಲಕವಾದದ್ದು. ದೇವಾಲಯ ಮಂಡಳಿತಯ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತದೆ’ ಎಂದು ತಿಳಿಸಿದೆ.

ಕೇರಳ ಬಿಜೆಪಿಯಿಂದ ಮುಸ್ಲಿಂ ಸಂಪರ್ಕ ಕಾರ್ಯಕ್ರಮ

ತಿರುವನಂತಪುರಂ: ಮುಸ್ಲಿಮರ ನಂಬಿಕೆ ಗಳಿಸುವ ಹಾಗೂ ವೃದ್ಧಿಸುವ ಉದ್ದೇಶದಿಂದ ಕೇರಳ ಬಿಜೆಪಿ, ‘ಮುಸ್ಲಿಂ ಸಂಪರ್ಕ ಕಾರ್ಯಕ್ರಮ’ ಹಮ್ಮಿಕೊಳ್ಳಲು ನಿರ್ಧರಿಸಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ರಾಜೀವ್‌ ಚಂದ್ರಶೇಖರ್‌ ಘೋಷಿಸಿದ್ದಾರೆ. ಜತೆಗೆ, ಇದರ ಹಿಂದೆ ರಾಜಕಾರಣ ಅಥವಾ ಮುಸಲ್ಮಾನರ ಮತ ಸೆಳೆಯುವ ಗುರಿಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.‘ಈ ಕಾರ್ಯಕ್ರಮದ ಪ್ರಕಾರ, ಬಿಜೆಪಿ ಕಾರ್ಯಕರ್ತರು ಪ್ರತಿ ಮುಸಲ್ಮಾನರ ಮನೆಗೆ ತೆರಳಿ ಎನ್‌ಡಿಎ ಸರ್ಕಾರ ಕೈಗೊಂಡ ಅಭಿವೃದ್ಧಿಯ ಸಂದೇಶ ನೀಡಲಿದ್ದಾರೆ ಹಾಗೂ ಕಾಂಗ್ರೆಸ್‌ ಸುಳ್ಳಿಗೆ ಬಲಿಯಾಗದಂತೆ ಎಚ್ಚರಿಸುವ ಕರಪತ್ರವನ್ನು ನೀಡುತ್ತಾರೆ’ ಎಂದು ರಾಜೀವ್‌ ಹೇಳಿದ್ದಾರೆ.

‘ಬಿಜೆಪಿ ಮುಸಲ್ಮಾನ ವಿರೋಧಿಯಾಗಿದ್ದು, ಆ ಸಮುದಾಯಕ್ಕಾಗಿ ಕೆಲಸ ಮಾಡುವುದಿಲ್ಲ ಎಂಬ ಸುಳ್ಳುಗಳನ್ನು ಕೇರಳದಲ್ಲಿ ಕಳೆದ 20-25 ವರ್ಷಗಳಲ್ಲಿ ಹರಡಲಾಗಿದೆ. ಅದನ್ನು ತೊಡೆಯಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪಕ್ಷದ ಉನ್ನತ ನಾಯಕರು ಮತ್ತು ರಾಜ್ಯದ ಉಪಾಧ್ಯಕ್ಷ ಅಬ್ದುಲ್‌ ಸಲಾಂ ಅವರ ನೇತೃತ್ವದಲ್ಲಿ ಇದು ನಡೆಯಲಿದೆ’ ಎಂದಿದ್ದಾರೆ.

ನನ್ನ ತೂಕದಿಂದ ನಿಮಗೇನು ತೊಂದರೆ?: ಯೂಟ್ಯೂಬರ್‌ ವಿರುದ್ಧ ನಟಿ ಗೌರಿ ಕಿಡಿ

ಚೆನ್ನೈ: ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ನಟಿ ಗೌರಿ ಕಿಶನ್‌ ಅವರ ತೂಕದ ಬಗ್ಗೆ ಓರ್ವ ಯೂಟ್ಯೂಬರ್‌ ಆಕ್ಷೇಪಾರ್ಹ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ನಟಿ ಕಿಡಿ ಕಾರಿದ್ದು, ‘ನನ್ನ ತೂಕದ ವಿಚಾರ ನಿಮಗ್ಯಾಕೆ?’ಎಂದು ತಿರುಗೇಟು ನೀಡಿದ್ದಾರೆ.ನ.6ರಂದು ನಡೆದ ಅದರ್ಸ್‌ ಸಿನಿಮಾದ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ತಮಿಳು, ಮಲಯಾಳಂ ಸಿನಿಮಾದಲ್ಲಿ ಜನಪ್ರಿಯತೆ ಗಳಿಸಿರುವ ಗೌರಿಗೆ ಯೂಟ್ಯೂಬರ್‌ ಆಕ್ಷೇಪಾರ್ಹ ಪ್ರಶ್ನೆ ಕೇಳಿದ್ದ. ಈ ಬಾಡಿ ಶೇಮಿಂಗ್‌ನಿಂದ ಸಿಡಿದೆದ್ದ ನಟಿ ಪ್ರಶ್ನೆ ಕೇಳಿದವರ ಚಳಿ ಬಿಡಿಸಿದ್ದಾರೆ.‘ನನ್ನ ತೂಕದಿಂದ ನಿಮಗೆ ಯಾವ ರೀತಿ ತೊಂದರೆಯಾಗಿದೆ? ಇದು ಚಿತ್ರಕ್ಕೆ ಹೇಗೆ ಪ್ರಸ್ತಾಪಿಸಿದೆ ಮತ್ತು ಹೇಗೆ ಪ್ರಸ್ತುತ? ನನ್ನ ತೂಕ ನನ್ನ ಆಯ್ಕೆ. ಅದು ಪ್ರತಿಭೆಗೆ ಅಡ್ಡಿಯಾಗುವುದಿಲ್ಲ. ದೇಹದ ತೂಕದ ಬಗ್ಗೆ ಇಂತಹ ಮೂರ್ಖತನದ ಪ್ರಶ್ನೆ ಕೇಳುವುದು ಬಾಡಿ ಶೇಮಿಂಗ್‌ ಅಲ್ಲದೆ ಮತ್ತೇನೂ ಅಲ್ಲ’ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಈ ವಿಡಿಯೋ ವೈರಲ್‌ ಆಗಿದ್ದು, ನೆಟ್ಟಿಗರು ನಟಿಯ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿಗೆ ಮಹಾ ಧೋಖಾ 

ಕೋಲ್ಕತಾ: ಪಶ್ಚಿಮ ಬಂಗಾಳದ ಟಿಎಂಸಿ ಸಂಸದ ಕಲ್ಯಾಣ್‌ ಬ್ಯಾನರ್ಜಿ ಅವರು ದೊಡ್ಡ ಸೈಬರ್‌ ವಂಚನೆಯೊಂದಕ್ಕೆ ಬಲಿಪಶುವಾಗಿದ್ದಾರೆ. ಸೈಬರ್‌ ವಂಚಕರು ಕಲ್ಯಾಣ್‌ ಅವರ ಆಧಾರ್‌, ಪಾನ್‌ ಮತ್ತು ಫೋನ್‌ ಸಂಖ್ಯೆಯನ್ನು ಬಳಸಿಕೊಂಡು ನಕಲಿ ಕೆವೈಸಿ ಸೃಷ್ಟಿಸಿ ಡಾರ್ಮಾಂಟ್‌ (ತಾತ್ಕಾಲಿಕ ಸ್ಥಗಿತ) ಆಗಿದ್ದ ಖಾತೆಯಿಂದ 55 ಲಕ್ಷ ರು.ವನ್ನು ಎಗರಿಸಿದ್ದಾರೆ.2001-06ರವರೆಗೆ ಕಲ್ಯಾಣ್‌ ಬ್ಯಾನರ್ಜಿ ಬಂಗಾಳದಲ್ಲಿ ಶಾಸಕರಾಗಿದ್ದಾಗ ವೇತನ ಜಮೆಗೆ ಕೋಲ್ಕತಾದ ಕಾಳಿಘಾಟ್‌ನಲ್ಲಿನ ಎಸ್‌ಬಿಐ ಶಾಖೆಯಲ್ಲಿ ಖಾತೆ ತೆರೆದಿದ್ದರು. ಬಳಿಕ ಅದನ್ನು ಹಾಗೆಯೇ ಬಿಟ್ಟು ಖಾತೆಯು ಡಾರ್ಮಾಂಟ್‌ ಆಗಿ ಪರಿವರ್ತನೆಗೊಂಡಿತ್ತು. ಅದರಲ್ಲಿ ಮೊತ್ತವೂ ಹಾಗೆಯೇ ಉಳಿದಿತ್ತು. ಇದನ್ನು ಕಂಡುಕೊಂಡ ವಂಚಕರು, ಕಲ್ಯಾಣ್ ಅವರ ಆಧಾರ್‌, ಪಾನ್‌ ಕಾರ್ಡ್‌ ಬಳಸಿ ನಕಲಿ ಕೆವೈಸಿ ಸೃಷ್ಟಿ ಮಾಡಿಕೊಂಡಿದ್ದಾರೆ. ಆಧಾರ್‌ನಲ್ಲಿ ಕಲ್ಯಾಣ್ ಅವರ ಫೋಟೋವನ್ನು ಸಹ ಬದಲಿಸಿದ್ದಾರೆ. ನೋಂದಾಯಿತ ಮೊಬೈಲ್‌ ನಂಬರ್‌ ಬದಲಿಸಿ ಹೊಸ ನಂಬರ್‌ ನೋಂದಣಿ ಮಾಡಿದ್ದಾರೆ.

ಬಳಿಕ ಖಾತೆಯಿಂದ 56,39,767 ರು.ಗಳನ್ನು ಹಲವು ನಕಲಿ ಖಾತೆಗಳಿಗೆ ವರ್ಗಾಯಿಸಿ, ಚಿನ್ನದಂಗಡಿಯಲ್ಲಿ ಖರೀದಿ ಮಾಡಿ, ಎಟಿಎಂಗಳಲ್ಲಿ ನಗದು ಪಡೆದುಕೊಂಡಿದ್ದಾರೆ. ಇದೆಲ್ಲಾ ಘಟಿಸಿದ ಬಳಿಕ ಎಚ್ಚೆತ್ತ ಸಂಸದರು ಕೂಡಲೇ ಎಸ್‌ಬಿಐ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಬಳಿಕ ಅಧಿಕಾರಿಗಳು ಸೈಬರ್‌ ಕ್ರೈಂ ಘಟಕಕ್ಕೆ ದೂರಿತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read more Articles on