ತಡರಾತ್ರಿ ಸಿಂದೂರ ದಾಳಿಗೆಎರಡು ವಿಶೇಷ ಕಾರಣಗಳು!

| Published : Sep 20 2025, 01:00 AM IST

ಸಾರಾಂಶ

ಪಹಲ್ಗಾಂ ಉಗ್ರದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ವಿರುದ್ಧ ಭಾರತ ಕೈಗೊಂಡ ಆಪರೇಷನ್‌ ಸಿಂದೂರವನ್ನು ಮೇ 7ರ ಮಧ್ಯರಾತ್ರಿ 1 ಗಂಟೆಗೇ ಏಕೆ ಕೈಗೊಳ್ಳಲಾಯಿತು ಎಂಬ ಅಚ್ಚರಿಯ ವಿಷಯವನ್ನು ಸಶಸ್ತ್ರ ಪಡೆಗಳ ಮುಖ್ಯಸ್ಥ ಜ. ಅನಿಲ್‌ ಚೌಧರಿ ಬಹಿರಂಗಪಡಿಸಿದ್ದಾರೆ.

ನವದೆಹಲಿ: ಪಹಲ್ಗಾಂ ಉಗ್ರದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ವಿರುದ್ಧ ಭಾರತ ಕೈಗೊಂಡ ಆಪರೇಷನ್‌ ಸಿಂದೂರವನ್ನು ಮೇ 7ರ ಮಧ್ಯರಾತ್ರಿ 1 ಗಂಟೆಗೇ ಏಕೆ ಕೈಗೊಳ್ಳಲಾಯಿತು ಎಂಬ ಅಚ್ಚರಿಯ ವಿಷಯವನ್ನು ಸಶಸ್ತ್ರ ಪಡೆಗಳ ಮುಖ್ಯಸ್ಥ ಜ. ಅನಿಲ್‌ ಚೌಧರಿ ಬಹಿರಂಗಪಡಿಸಿದ್ದಾರೆ.

ದೆಹಲಿಯ ರಾಜಭವನದಲ್ಲಿ ಗುರುವಾರ ಸಂವಾದ ನಡೆಸಿದ ಅವರು, ‘2019ರಲ್ಲಿ ನಾವು ಬಾಲಾಕೋಟ್‌ ದಾಳಿ ನಡೆಸಿದಾಗ ನಮ್ಮ ಬಳಿ ಉಪಗ್ರಹ ಚಿತ್ರ ಅಥವಾ ಫೋಟೋಗಳಿರಲಿಲ್ಲ. ಆದರೆ ಆಪರೇಷನ್‌ ಸಿಂದೂರವನ್ನು ಮೇ 7ರ ಮಧ್ಯರಾತ್ರಿ ಕೈಗೊಳ್ಳಲು 2 ಮುಖ್ಯ ಕಾರಣಗಳಿದ್ದವು. ಮೊದಲನೆಯದಾಗಿ, ದಾಳಿಯ ಚಿತ್ರ ತೆಗೆದುಕೊಳ್ಳಬಲ್ಲ ನಮ್ಮ ಸಾಮರ್ಥ್ಯಗಳಲ್ಲಿ ನಮಗೆ ವಿಶ್ವಾಸವಿತ್ತು. ಎರಡನೆಯದಾಗಿ, ಬೆಳಗಿನ ಜಾವ ನಮಾಜ್‌ ಸಮಯವಾದ್ದರಿಂದ ಆಗ ನಾಗರಿಕರು ಹೊರಗೆ ಬರುವ ಸಾಧ್ಯತೆಯಿತ್ತು. ಆಗ ದಾಳಿ ನಡೆಸಿದರೆ ನಾಗರಿಕರು ಅಪಾಯಕ್ಕೆ ಸಿಲುಕುತ್ತಿದ್ದರು. ಅವರ ಸಾವುನೋವುಗಳನ್ನು ತಪ್ಪಿಸುವ ಉದ್ದೇಶದಿಂದ ರಾತ್ರಿ 1 ಗಂಟೆಗೇ ದಾಳಿ ನಡೆಸಿದೆವು’ ಎಂದಿದ್ದಾರೆ.

‘ದಾಳಿಗೆ ಬೆಳಿಗ್ಗೆ 5.30 ಅಥವಾ 6 ಗಂಟೆಯ ಸಮಯ ಉತ್ತಮ ಆಯ್ಕೆ ಆಗುತ್ತಿತ್ತು. ಆದರೆ ಅದು ಮೊದಲ ಅಜಾನ್ ಅಥವಾ ನಮಾಜ್ ಸಮಯ. ಅನೇಕ ನಾಗರಿಕ ಜೀವಗಳು ಬಲಿಯಾಗುತ್ತಿದ್ದವು. ನಾವು ಅದನ್ನು ಸಂಪೂರ್ಣವಾಗಿ ತಪ್ಪಿಸಲು ಬಯಸಿದ್ದೆವು’ ಎಂದು ತಿಳಿಸಿದ್ದಾರೆ.

==

ಸೌದಿ ರೀತಿ ಕೊಲ್ಲಿ ದೇಶದ ಜತೆಗೆ ಒಪ್ಪಂದ ಅವಕಾಶ ಮುಕ್ತ: ಪಾಕ್‌

ಇಸ್ಲಾಮಾಬಾದ್‌: ಸೌದಿ ಅರೇಬಿಯಾ ಜೊತೆಗೆ ಮಾಡಿಕೊಂಡ ರೀತಿಯಲ್ಲೇ ಇತರೆ ಕೊಲ್ಲಿ ದೇಶಗಳ ಜೊತೆಗೆ ರಕ್ಷಣಾ ಒಪ್ಪಂದದ ಅವಕಾಶ ಮುಕ್ತವಾಗಿದೆ ಎಂದು ಪಾಕಿಸ್ತಾನದ ಹೇಳಿದೆ. ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿರುವ ಪಾಕ್‌ ರಕ್ಷಣಾ ಸಚಿವ ಖ್ವಾಜಾ ಆಸೀಫ್‌, ‘ ಇನ್ನಷ್ಟು ದೇಶಗಳ ಜತೆಗೆ ಈ ಮಾದರಿಯ ಒಪ್ಪಂದಕ್ಕೆ ಬಾಗಿಲುಗಳು ತೆರೆದಿದೆ. ವಿಶೇಷವಾಗಿ ಮುಸ್ಲಿಂ ಬಾಹುಳ್ಯವುಳ್ಳ ದೇಶಗಳು ತಮ್ಮನ್ನು ಒಟ್ಟಾಗಿ ರಕ್ಷಿಸಿಕೊಳ್ಳುವುದು ಮೂಲಭೂತ ಹಕ್ಕು ಎಂದು ನಾನು ಭಾವಿಸುತ್ತೇನೆ. ಈ ಒಪ್ಪಂದದಲ್ಲಿ ಬೇರೆ ಯಾವುದೇ ರಾಷ್ಟ್ರದ ಪ್ರವೇಶವನ್ನು ತಳ್ಳಿ ಹಾಕಲು ಸಾಧ್ಯವಿಲ್ಲ’ ಎಂದಿದ್ದಾರೆ.

==

ಸೂಕ್ಷ್ಮ ವಿಷಯ ನೆನಪಲ್ಲಿರಲಿ: ಸೌದಿಗೆ ಭಾರತ ಸಲಹೆ

ನವದೆಹಲಿ: ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಬುಧವಾರ ಹೊಸ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿರುವುದಕ್ಕೆ ಭಾರತ ಪ್ರತಿಕ್ರಿಯಿಸಿದ್ದು, ‘ಸೌದಿ ಅರೇಬಿಯಾ ಪರಸ್ಪರ ಹಿತಾಸಕ್ತಿ ಮತ್ತು ಸೂಕ್ಷ್ಮ ವಿಚಾರಗಳನ್ನು ಗಮನದಲ್ಲಿಟ್ಟುಕೊಟ್ಟಕೊಳ್ಳಬೇಕು’ ಎಂದಿದೆ.ಈ ಸಂಬಂಧ ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆ ವಕ್ತಾರ ರಣದೀರ್ ಜೈಸ್ವಾಲ್‌, ‘ ಭಾರತ ಮತ್ತು ಸೌದಿ ಅರೇಬಿಯಾ ಹಲವು ವರ್ಷಗಳಿಂದ ಕಾರ್ಯತಂತ್ರ ಪಾಲುದಾರಿಕೆ ಹೊಂದಿದ್ದು, ಕಳೆದ ಕೆಲವು ವರ್ಷಗಳಲ್ಲಿ ಇದು ಆಳವಾಗಿದೆ. ಪಾಕ್‌ ಜತೆಗಿನ ಪಾಲುದಾರಿಕೆ ವಿಚಾರದಲ್ಲಿ ಸೌದಿ ಅರೇಬಿಯಾ ಪರಸ್ಪರ ಹಿತಾಸಕ್ತಿಗಳು ಮತ್ತು ಸೂಕ್ಷ್ಮತೆಗಳನ್ನು ಗಮನದಲ್ಲಿಟ್ಟುಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ’ ಎಂದಿದ್ದಾರೆ.