ಸಾರಾಂಶ
ಬೆಂಗಳೂರು : ಪಹಲ್ಗಾಂ ಉಗ್ರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂದೂರ’ದ ವೇಳೆ ಪಾಕಿಸ್ತಾನದ 5 ಯುದ್ಧ ವಿಮಾನಗಳು ಮತ್ತು ಒಂದು ದೊಡ್ಡ ವಿಮಾನವನ್ನು ಹೊಡೆದುರುಳಿಸಲಾಗಿತ್ತು. ಈ ಪೈಕಿ ಒಂದು ವಿಮಾನವನ್ನು ಭಾರತೀಯ ಸೇನೆ 300 ಕಿ.ಮೀ. ದೂರದಿಂದಲೇ ದಾಳಿ ಮಾಡಿ ಧ್ವಂಸ ಮಾಡಿತ್ತು ಎಂಬ ಅಚ್ಚರಿಯ ಮಾಹಿತಿಯನ್ನು ಭಾರತೀಯ ವಾಯುಪಡೆ ಮುಖ್ಯಸ್ಥ ಅಮರ್‌ಪ್ರೀತ್ ಸಿಂಗ್ ಬಹಿರಂಗಪಡಿಸಿದ್ದಾರೆ.
ಭಾರತದ ದಾಳಿಗೆ ಪಾಕ್‌ನ ವಿಮಾನಗಳು ಧ್ವಂಸ ಆಗಿದ್ದನ್ನು ಸೇನೆ ಈ ಹಿಂದೆಯೇ ಖಚಿತಪಡಿಸಿತ್ತಾದರೂ ಅವುಗಳ ನಿಖರ ಅಂಕಿ- ಅಂಶಗಳನ್ನು ಇದೇ ಮೊದಲ ಬಾರಿಗೆ ವಾಯುಪಡೆಯ ಮುಖ್ಯಸ್ಥರು ಬಯಲು ಮಾಡಿದ್ದಾರೆ.
ಜೊತೆಗೆ ಆಪರೇಷನ್ ಸಿಂದೂರದ ವೇಳೆ ಭಾರತೀಯ ಸೇನೆಗೆ ಪೂರ್ಣ ಸ್ವಾತಂತ್ರ್ಯ ನೀಡಿರಲಿಲ್ಲ ಎಂಬ ಆರೋಪಗಳ ಬಗ್ಗೆಯೂ ಸ್ಪಷ್ಟನೆ ನೀಡಿರುವ ಅವರು, ‘ರಾಜಕೀಯ ಇಚ್ಛಾಶಕ್ತಿ ಮತ್ತು ನಾಯಕರ ಸ್ಪಷ್ಟ ನಿರ್ದೇಶನಗಳಿಂದಲೇ ಆಪರೇಷನ್ ಸಿಂದೂರ ಯಶಸ್ವಿಯಾಗಿತ್ತು’ ಎಂದು ಹೇಳಿದ್ದಾರೆ. ಅಲ್ಲದೆ ಈ ಹಿಂದಿನ ಬಾಲಾಕೋಟ್ ದಾಳಿಗೆ ಸಾಕ್ಷ್ಯ ಕೇಳಿದ್ದ ವಿಪಕ್ಷಗಳ ಬಗ್ಗೆಯೂ ಪರೋಕ್ಷವಾಗಿ ಪ್ರಸ್ತಾಪಿಸಿದ ಅವರು ‘ಆಗ ಪಾಕಿಸ್ತಾನಕ್ಕಾದ ನಷ್ಟದ ಸಾಕ್ಷ್ಯವನ್ನು ಒದಗಿಸಲು ಆಗಿರಲಿಲ್ಲ. ಆದರೆ ಈ ಬಾರಿ ನಾವು ಆ ತಪ್ಪು ಮಾಡಿಲ್ಲ’ ಎಂದು ಹೇಳಿದ್ದಾರೆ.
ಈ ನಡುವೆ ‘ಇತ್ತೀಚಿನ ಸಂಘರ್ಷದಲ್ಲಿ ಭಾರತೀಯ ಸೇನೆಯಿಂದ ನಮ್ಮ ಒಂದೂ ಯುದ್ಧವಿಮಾನಕ್ಕೆ ಹಾನಿಯಾಗಿಲ್ಲ’ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿದ್ದಾರೆ.
6 ವಿಮಾನ ನಷ್ಟ:
ಶನಿವಾರ ಬೆಂಗಳೂರಿನಲ್ಲಿ ನಡೆದ 16ನೇ ಏರ್ ಚೀಫ್ ಮಾರ್ಷಲ್ ಎಲ್.ಎಂ. ಕತ್ರೆ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡಿದ ವಾಯುಪಡೆ ಮುಖ್ಯಸ್ಥ ಸಿಂಗ್ ‘ಆಪರೇಷನ್ ಸಿಂದೂರದ ವೇಳೆ ಹ್ಯಾಂಗರ್‌ನಲ್ಲಿ ನಿಲ್ಲಿಸಲಾಗಿದ್ದ 1 ಕಣ್ಗಾವಲು ಅಥವಾ ದೊಡ್ಡ ವಿಮಾನ ಹಾಗೂ ಎಫ್-16 ಯುದ್ಧವಿಮಾನ ಸೇರಿದಂತೆ ಇತರೆ 5 ಯುದ್ಧ ವಿಮಾನಗಳನ್ನು ನಾಶ ಮಾಡಿದೆವು. ಈ ಪೈಕಿ ದೊಡ್ಡ ವಿಮಾನವನ್ನು ನಾವು 300 ಕಿ.ಮೀ. ದೂರದಿಂದಲೇ ನಿಖರವಾಗಿ ದಾಳಿ ಮಾಡಿ ಧ್ವಂಸಗೊಳಿಸಿದೆವು. ಇದು ಈವರೆಗೆ ದಾಖಲಾದ ಅತಿದೊಡ್ಡ ನೆಲದಿಂದ ಆಕಾಶದತ್ತ ನಡೆದ ಭಾರತದ ಅತಿದೊಡ್ಡ ದಾಳಿಯಾಗಿತ್ತು ’ ಎಂದು ಹೇಳಿದರು.
ಸೇನೆಗೆ ಕಟ್ಟುಪಾಡು ಇರಲಿಲ್ಲ:
ಇದೇ ವೇಳೆ ‘ರಾಜಕೀಯ ಇಚ್ಛಾಶಕ್ತಿ ಮತ್ತು ನಾಯಕರಿಂದ ಸ್ಪಷ್ಟ ನಿರ್ದೇಶನಗಳಿಂದಲೇ ಆಪರೇಷನ್ ಸಿಂದೂರ ಯಶಸ್ವಿಯಾಗಿದ್ದು. ನಮಗೆ ಯಾವುದೇ ನಿರ್ಬಂಧನೆಗಳು ಇರಲಿಲ್ಲ. ನಮಗೆ ಯಾವುದೇ ಕಟ್ಟುಪಾಡುಗಳಿದ್ದರೂ ಅವು ನಾವೇ ಮಾಡಿಕೊಂಡಿದ್ದು. ದಾಳಿಯ ತೀವ್ರತೆಯ ನಿಯಂತ್ರಣ ನಮ್ಮ ಕೈಲಿತ್ತು. ಅದನ್ನು ಯೋಜಿಸಿ ಕಾರ್ಯರೂಪಕ್ಕೆ ತರಲು ಸಂಪೂರ್ಣ ಸ್ವಾತಂತ್ರ್ಯವಿತ್ತು’ ಎಂದು ಸಿಂಗ್ ಸ್ಪಷ್ಟಪಡಿಸಿದ್ದಾರೆ.
ನಮ್ಮವರನ್ನೇ ನಂಬಿಸಲು ಸಾಧ್ಯವಾಗಿರಲಿಲ್ಲ:
ಈ ನಡುವೆ, ‘2019ರಲ್ಲಿ ಪುಲ್ವಾಮಾ ಉಗ್ರದಾಳಿಗೆ ಪ್ರತಿಯಾಗಿ ನಾವು ನಡೆಸಿದ ಬಾಲಾಕೋಟ್ ವಾಯುದಾಳಿಯಿಂದ ಪಾಕಿಸ್ತಾನಕ್ಕಾದ ನಷ್ಟದ ಸಾಕ್ಷ್ಯವನ್ನು ಒದಗಿಸಲು ಆಗಿರಲಿಲ್ಲ. ಆದರೆ ಈ ಬಾರಿ ನಾವು ಆ ತಪ್ಪು ಮಾಡಿಲ್ಲ. ಈ ಬಾರಿ ಇಡೀ ವಿಶ್ವಕ್ಕೇ ನಾವೇನು ಸಾಧಿಸಿದ್ದೇವೆ ಎಂಬುದನ್ನು ತೋರಿಸಿದ್ದೇವೆ. ವಿಡಿಯೋಗಳು ಲಭ್ಯವಿರದಿದ್ದರೆ ಆಪರೇಷನ್ ಸಿಂದೂರದ ಬಗ್ಗೆಯೂ ಅಂತಹ ಪ್ರಶ್ನೆಗಳು ಉದ್ಭವಿಸುತ್ತಿತ್ತು’ ಎಂದು ಸಿಂಗ್ ಹೇಳಿದರು.