ಸಾರಾಂಶ
ಪಹಲ್ಗಾಂ ನರಮೇಧದ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆಗೆ ಭಾರತೀಯರು ಮಾತ್ರವಲ್ಲ ವಿದೇಶಗಳಲ್ಲಿಯೂ ಬೆಂಬಲ ವ್ಯಕ್ತವಾಗಿದೆ
ನವದೆಹಲಿ: ಪಹಲ್ಗಾಂ ನರಮೇಧದ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆಗೆ ಭಾರತೀಯರು ಮಾತ್ರವಲ್ಲ ವಿದೇಶಗಳಲ್ಲಿಯೂ ಬೆಂಬಲ ವ್ಯಕ್ತವಾಗಿದೆ. ಅಮೆರಿಕ, ಬ್ರಿಟನ್, ಫ್ರಾನ್ಸ್, ಇಸ್ರೇಲ್, ಯುರೋಪ್ ಒಕ್ಕೂಟ ಸೇರಿದಂತೆ ಹಲವು ದೇಶಗಳು ಉಗ್ರವಾದ ನಿರ್ಮೂಲನೆಗೆ ಭಾರತ ಕೈಗೊಂಡ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷದ ಪರಿಸ್ಥಿತಿ ನಿರ್ಮಾಣವಾಗಿರುವ ನಡುವೆಯೇ ಭಾರತಕ್ಕೆ ಜಾಗತಿಕ ಬೆಂಬಲ ಸಿಗುತ್ತಿರುವುದು ಬಹು ದೊಡ್ಡ ವಿಚಾರ. ಏಕೆಂದರೆ ಸಾಮಾನ್ಯವಾಗಿ ಪರಮಾಣು ಶಸ್ತ್ರಜ್ಜಿತ ರಾಷ್ಟ್ರಗಳ ನಡುವಿನ ಗಡಿಗಳಲ್ಲಿ ಇಂತಹ ಪ್ರಮುಖ ಕಾರ್ಯಾಚರಣೆಗಳು ನಡೆದಾಗ ವಿದೇಶಗಳು ಉದ್ವಿಗ್ನತೆ ಕಡಿಮೆ ಮಾಡಲು ಎರಡು ರಾಷ್ಟ್ರಗಳನ್ನು ಕೇಳುವುದು ಸಹಜ.
ಆದರೆ ವಿದೇಶಗಳು ಅಂತಹ ನಡೆಯನ್ನು ಅನುಸರಿಸುತ್ತಿಲ್ಲ. ಅದಕ್ಕೆ ಕಾರಣವೂ ಇದೆ. ಭಾರತವು ಜಗತ್ತಿನ ವಿವಿಧ ದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದಿರುವುದರಿಂದ ಮತ್ತು ಪಾಕಿಸ್ತಾನದಲ್ಲಿ ಭಯೋತ್ಪಾದಕತೆ ಹೆಚ್ಚುತ್ತಿರುವುದರಿಂದ ಪಾಶ್ಚಿಮಾತ್ಯ ದೇಶಗಳು ಭಾರತ ದಾಳಿಯನ್ನು ಬೆಂಬಲಿಸುವುದಕ್ಕೆ ಮುಂದಾಗಿವೆ.
ಅಮೆರಿಕ ಬೆಂಬಲ ವಿಶ್ವದ ದೊಡ್ಡಣ್ಣ ಅಮೆರಿಕ ಭಾರತದ ಬೆನ್ನಿಗೆ ನಿಂತಿದೆ. ಅಮೆರಿಕ ಸಂಸದ, ಕನ್ನಡಿಗ ಥಾಣೇದಾರ್ ಭಾರತವನ್ನು ಬೆಂಬಲಿಸಿದ್ದು ‘ಭಯೋತ್ಪಾ ದಕತೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಅದಕ್ಕೆ ಶಿಕ್ಷೆಯಾಗದೆ ಮುಂದುವರೆಯಲು ಸಾಧ್ಯವಿಲ್ಲ. ಭಾರತವು ತನ್ನ ಜನರನ್ನು ರಕ್ಷಿಸುವ ಹಕ್ಕನ್ನು ಹೊಂದಿದೆ’ ಎಂದಿದ್ದಾರೆ.
ಬ್ರಿಟನ್ ಶ್ಲಾಘನೆ
ಬ್ರಿಟನ್ ಹಲವು ನಾಯಕರು ಭಾರತದ ನಡೆಯನ್ನು ಬೆಂಬಲಿಸಿದ್ದಾರೆ. ಮಾಜಿ ಪ್ರಧಾನಿ, ಸಂಸದ ರಿಷಿ ಸುನಕ್ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ‘ ಯಾವುದೇ ದೇಶವು ಬೇರೆ ದೇಶ ತನ್ನ ವಿರುದ್ಧ ನಡೆಸುವ ಭಯೋತ್ಪಾದಕ ದಾಳಿಯನ್ನು ಒಪ್ಪಿಕೊಳ್ಳಬೇಕಾಗಿಲ್ಲ’ ಎಂದಿದ್ದಾರೆ.
ವಿದೇಶಾಂಗ ಸಚಿವ ಕೂಡ ಬೆಂಬಲಿಸಿದ್ದು ‘ಏ.22ರಂದು ನಡೆದ ದಾಳಿಯ ಬಗ್ಗೆ ಭಾರತ ಆಕ್ರೋಶ ವ್ಯಕ್ತಪಡಿಸಿದ್ದು ಸರಿಯಾಗಿದೆ. ಪಾಕಿಸ್ತಾನ ತನ್ನ ಗಡಿಯೊಳಗೆ ಭಯೋತ್ಪಾದನೆಯ ಬೆದರಿಕೆಯನ್ನು ನಿಭಾಯಿಸಲು ಇನ್ನು ಹೆಚ್ಚಿದನ್ನು ಮಾಡಬೇಕು’ ಎಂದು ಕರೆ ನೀಡಿದರು.ಸಂಸದೆ ಪ್ರೀತಿ ಪಟೇಲ್ ಆಪರೇಷನ್ ಸಿಂದೂರವನ್ನು ಶ್ಲಾಘಿಸಿದ್ದು , ‘ ಭಾರತವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಮತ್ತು ತನಗೆ ಬೆದರಿಕೆಯೊ ಡ್ಡುವ ಭಯೋತ್ಪಾದಕರ ಮೂಲ ಸೌಕರ್ಯವನ್ನು ಕೆಡವಲು ಸೂಕ್ತವಾದ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಹೊಂದಿದೆ’ ಎಂದರು.
ಭಾರತಕ್ಕೆ ಬೆಂಬಲ: ಫ್ರಾನ್ಸ್
ಫ್ರಾನ್ಸ್ ಕೂಡ ಭಾರತ ಬೆಂಬಲಿಸಿದ್ದು, ಭಯೋತ್ಪಾದನೆಯಿಂದ ತನ್ನನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಭಾರತದ ಕ್ರಮ ತಮಗೆ ಅರ್ಥವಾಗುತ್ತಿದೆ ಎಂದು ಫ್ರಾನ್ಸ್ ವಿದೇಶಾಂಗ ಸಚಿವರು ಹೇಳಿದ್ದಾರೆ. ಈ ಬಗ್ಗೆ ವಿದೇಶಾಂಗ ಕಚೇರಿ ಪ್ರಕಟಣೆ ಹೊರಡಿಸಿದ್ದು, ‘ಭಯೋತ್ಪಾದಕ ಗುಂಪುಗಳ ವಿರುದ್ಧದ ಹೋರಾಟದಲ್ಲಿ ಫ್ರಾನ್ಸ್ ಭಾರತವನ್ನು ಬೆಂಬಲಿಸುತ್ತದೆ’ ಎಂದಿದೆ.
ಇಸ್ರೇಲ್, ನೆದರ್ಲೆಂಡ್, ಪನಾಮ ಮೆಚ್ಚುಗೆ
ಇಸ್ರೇಲ್ ಕೂಡ ಭಾರತದ ಬೆನ್ನಿಗೆ ನಿಂತಿದ್ದು , ಈ ಬಗ್ಗೆ ಇಸ್ರೇಲ್ ರಾಯಭಾರಿ ಮಾತನಾಡಿದ್ದು, ‘ಭಾರತದ ಆತ್ಮರಕ್ಷಣೆಯ ಹಕ್ಕನ್ನು ಇಸ್ರೇಲ್ ಬೆಂಬಲಿಸುತ್ತದೆ. ಭಯೋತ್ಪಾದಕರು ಅಮಾಯಕರ ಮೇಲೆ ಮಾಡುವ ಘೋರ ಅಪರಾಧಗಳಿಂದ ಅಡಗಿಕೊಳ್ಳಲು ಯಾವುದೇ ಸ್ಥಳವಿಲ್ಲ ಎಂದು ಅವರು ಅರಿತಿರಬೇಕು’ ಎಂದರು. ನೆದರ್ಲ್ಯಾಂಡ್ಸ್ ಭಾರತದ ಪರ ನಿಂತಿದ್ದು, ಈ ಬಗ್ಗೆ ಸಂಸದ ಗ್ರೀಟ್ ವೈಲ್ಡರ್ಸ್ ಟ್ವೀಟ್‌ನಲ್ಲಿ ‘ಕಾಶ್ಮೀರ ನೂರಕ್ಕೆ ನೂರರಷ್ಟು ಭಾರತದ್ದು’ ಎನ್ನುವ ಮೂಲಕ ಬೆಂಬಲಿಸಿದ್ದಾರೆ. ಪನಾಮವೂ ಭಾರತ ಬೆಂಬಲಿಸಿದ್ದು, ‘ಈ ದುರಂತ ನಷ್ಟದಲ್ಲಿ ಭಯೋತ್ಪಾದನೆ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಪನಾಮ ಗಣರಾಜ್ಯವು ಭಾರತದ ಜೊತೆ ನಿಲ್ಲುತ್ತದೆ’ ಎಂದು ಪನಾಮ ವಿದೇಶಾಂಗ ಸಚಿವಾಲಯ ಹೇಳಿದೆ,
ಸಂಯಮಕ್ಕೆ ವಿಶ್ವಸಂಸ್ಥೆ ಮನವಿ:
ಈ ನಡುವೆ, ವಿಶ್ವಸಂಸ್ಥೆ ಸಾಮಾನ್ಯ ಸಭೆ ಹಾಗೂ ಬ್ರಿಟನ್ ಸಂಸತ್ತುಗಳು, ಭಾರತ ಹಾಗೂ ಪಾಕ್ ಸಂಯಮ ವಹಿಸಬೇಕು ಎಂದು ಕರೆ ನೀಡಿವೆ.