ಇಂದಿನಿಂದ ಮತ್ತೆ ಭಾರತ,ಅಮೆರಿಕ ವ್ಯಾಪಾರ ಚರ್ಚೆ

| Published : Sep 16 2025, 12:03 AM IST

ಸಾರಾಂಶ

ತೆರಿಗೆ ಹೇರಿಕೆ ಸೇರಿದಂತೆ ವ್ಯಾಪಾರಕ್ಕೆ ಸಂಬಂಧಿಸಿದ ಅಮೆರಿಕ-ಭಾರತ ನಡುವಿನ ಮಾತುಕತೆ ಇನ್ನೂ ಪ್ರಗತಿಯಲ್ಲಿದ್ದು, 6ನೇ ಸುತ್ತಿನ ಮಾತುಕತೆಗಾಗಿ ಅಮೆರಿಕದ ಮುಖ್ಯ ಸಂಧಾನಕಾರ ಬ್ರೆಂಡನ್ ಲಿಂಚ್ ಸೋಮವಾರ ರಾತ್ರಿ ಭಾರತಕ್ಕೆ ಆಗಮಿಸಿದ್ದಾರೆ. ಇವರು ಭಾರತದ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಲಿದ್ದಾರೆ.

6ನೇ ಸುತ್ತಿನ ಮಾತುಕತೆಗೆ ಅಮೆರಿಕದ ಸಂಧಾನಕಾರ ಭಾರತಕ್ಕೆ

ಭಾರತವೇ ಮಣಿದು ಮಾತುಕತೆಗೆ: ಟ್ರಂಪ್‌ ಆಪ್ತ ನವರೋ ದರ್ಪ

ನವದೆಹಲಿ: ತೆರಿಗೆ ಹೇರಿಕೆ ಸೇರಿದಂತೆ ವ್ಯಾಪಾರಕ್ಕೆ ಸಂಬಂಧಿಸಿದ ಅಮೆರಿಕ-ಭಾರತ ನಡುವಿನ ಮಾತುಕತೆ ಇನ್ನೂ ಪ್ರಗತಿಯಲ್ಲಿದ್ದು, 6ನೇ ಸುತ್ತಿನ ಮಾತುಕತೆಗಾಗಿ ಅಮೆರಿಕದ ಮುಖ್ಯ ಸಂಧಾನಕಾರ ಬ್ರೆಂಡನ್ ಲಿಂಚ್ ಸೋಮವಾರ ರಾತ್ರಿ ಭಾರತಕ್ಕೆ ಆಗಮಿಸಿದ್ದಾರೆ. ಇವರು ಭಾರತದ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಲಿದ್ದಾರೆ.

ರಷ್ಯಾದಿಂದ ತೈಲ ಆಮದನ್ನು ತಗ್ಗಿಸದ ಕಾರಣ ಟ್ರಂಪ್‌ ಭಾರತದ ಮೇಲೆ ಶೇ.50ರಷ್ಟು ತೆರಿಗೆ ಹೇರಿರುವ ಹೊರತಾಗಿಯೂ ಉಭಯ ದೇಶಗಳ ನಡುವೆ ವ್ಯಾಪಾರಕ್ಕೆ ಸಂಬಂಧಿಸಿದ ಮಾತುಕತೆ ನಡೆಯುತ್ತಿದೆ. ಈಗಾಗಲೇ ಈ ಸಂಬಂಧ 5 ಸುತ್ತಿನ ಮಾತುಕತೆಗಳು ನಡೆದಿದ್ದು, ಆ.25ರಿಂದ 29ರ ವರೆಗೆ 6ನೇ ಸುತ್ತಿನ ಸಭೆ ನಡೆಯಬೇಕಿತ್ತು. ಆದರೆ ಶೇ.50ರಷ್ಟು ತೆರಿಗೆ ಹೇರಿಕೆಯಿಂದಾಗಿ ಅದು ಮುಂದೂಡಿಕೆಯಾಗಿದ್ದು, ಈಗ ನಡೆಯಲಿದೆ.

ಪ್ರಸ್ತುತ ಜಾರಿಯಲ್ಲಿರುವ ತೆರಿಗೆಯಿಂದ ಭಾರತದ ರಫ್ತಿಗೆ ಭಾರೀ ಪೆಟ್ಟು ಬಿದ್ದಿದ್ದು, ಅದು ಮೊದಲಿನಂತಾಗಲು ಈ ಮಾತುಕತೆ ಅತ್ಯಗತ್ಯ. ಇತ್ತೀಚೆಗೆ ಟ್ರಂಪ್‌ರ ವರ್ತನೆಯಲ್ಲೂ ಬದಲಾವಣೆಯಾಗುತ್ತಿದ್ದು, ಅವರು ಭಾರತದ ಪರ ಕೊಂಚ ಮೃದುಧೋರಣೆ ತೋರಲು ಆರಂಭಿಸಿದ್ದಾರೆ. ಇದಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೂ ಸ್ಪಂದಿಸಿದ್ದಾರೆ. ಹೀಗಿರುವಾಗ ನಡೆಯಲಿರುವ ಈ ಸಭೆ ಭಾರತಕ್ಕೆ ಲಾಭದಾಯಕವಾಗುವ ನಿರೀಕ್ಷೆಯಿದೆ.

ನವರೋ ಉದ್ಧಟತನ:

ಒಂದು ಕಡೆ ಅಧ್ಯಕ್ಷ ಟ್ರಂಪ್‌ ಭಾರತದತ್ತ ಸ್ನೇಹಹಸ್ತ ಚಾಚಿ ಸಂಬಂಧ ಸುಧಾರಣೆಯನ್ನು ಎದುರುನೋಡುತ್ತಿದ್ದರೆ, ಅವರ ಆರ್ಥಿಕ ಸಲಹೆಗಾರ ಪೀಟರ್‌ ನವರೋ ಮಾತ್ರ ತಮ್ಮ ಉದ್ಧಟತನವನ್ನು ಬಿಟ್ಟಿಲ್ಲ. ಇದೀಗ ಭಾರತ-ಅಮೆರಿಕ ಮಾತುಕತೆಯ ಬಗ್ಗೆ ಮಾತನಾಡಿ, ‘ಭಾರತವೇ ಮಣಿದು ಮಾತುಕತೆಗೆ ಬರುತ್ತಿದೆ’ ಎಂದು ಹೇಳಿದ್ದಾರೆ.