ಸಾರಾಂಶ
- ಆಯೋಗಕ್ಕೆ ಸುಪ್ರೀಂಕೋರ್ಟ್ ಎಚ್ಚರಿಕೆ । ಅ.7ರಂದು ಅಂತಿಮ ವಿಚಾರಣೆನವದೆಹಲಿ: ಸಾಂವಿಧಾನಿಕ ಸಂಸ್ಥೆಯಾಗಿ ಚುನಾವಣಾ ಆಯೋಗವು ಬಿಹಾರದಲ್ಲಿ ಕಾನೂನು ಪಾಲಿಸಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ನಡೆಸುತ್ತಿದೆ ಎಂದು ನಾವು ಭಾವಿಸಿದ್ದೇವೆ. ಒಂದು ವೇಳೆ ಆಯೋಗದ ವಿಧಾನದಲ್ಲಿಯೇ ಯಾವುದಾದರೂ ಲೋಪವಿದ್ದರೆ, ಪರಿಷ್ಕರಣೆ ಪ್ರಕ್ರಿಯೆಯನ್ನೇ ರದ್ದು ಮಾಡುವುದಾಗಿ ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ. ಜತೆಗೆ ಪಟ್ಟಿ ಪರಿಷ್ಕರಣೆ ಪ್ರಶ್ನಿಸಿರುವ ಕುರಿತ ಅರ್ಜಿಗಳ ಅಂತಿಮ ವಿಚಾರಣೆಯನ್ನು ಅ.7ಕ್ಕೆ ನಿಗದಿಪಡಿಸಿದೆ.
ಈ ಕುರಿತ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾ.ಜೋಯ್‌ಮಲ್ಯ ಬಗ್ಚಿ ಅವರಿದ್ದ ಪೀಠವು, ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ನಮ್ಮ ತೀರ್ಪು ಇಡೀ ದೇಶಕ್ಕೆ ಅನ್ವಯವಾಗಲಿದೆ ಎಂದು ಹೇಳಿದೆ. ಆದರೆ ಆಯೋಗವು ದೇಶಾದ್ಯಂತ ಇದೇ ರೀತಿಯ ಮತದಾರರ ಪಟ್ಟಿ ಪರಿಷ್ಕರಣೆ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದೂ ಸ್ಪಷ್ಟಪಡಿಸಿದೆ.ಈ ನಡುವೆ, ಬಿಹಾರ ಮತಪದಾರರ ಪಟ್ಟಿ ಪರಿಷ್ಕರಣೆ ವೇಳೆ ಆಧಾರ್ ಕಾರ್ಡ್ ಅನ್ನೂ ಒಂದು ದಾಖಲೆಯಾಗಿ ಪರಿಗಣಿಸುವಂತೆ ನಿರ್ದೇಶಿಸಿ ಸೆ.8ರಂದು ನೀಡಿದ್ದ ತೀರ್ಪು ಹಿಂಪಡೆಯುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಅರ್ಜಿದಾರರಿಗೆ ನೋಟಿಸ್ ಕೂಡ ನೀಡಿದೆ. ಆಧಾರ್ ಕಾರ್ಡ್ ನಾಗರಿಕತ್ವವನ್ನು ನಿರ್ಧರಿಸುವ ದಾಖಲೆಯಾಗದಿದ್ದರೂ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಅದನ್ನೂ ಒಂದು ದಾಖಲೆಯನ್ನಾಗಿ ಪರಿಗಣಿಸುವಂತೆ ಚುನಾವಣಾ ಆಯೋಗಕ್ಕೆ ಸೆ.8ರಂದು ಸೂಚಿಸಿತ್ತು.