ಸಾರಾಂಶ
ನವದೆಹಲಿ: ಮನೆಯಲ್ಲಿ ಕಂತೆ ಕಂತೆ ನೋಟು ಸಿಕ್ಕ ಪ್ರಕರಣದಲ್ಲಿ ಆಂತರಿಕ ವಿಚಾರಣಾ ಸಮಿತಿ ತಮ್ಮ ವಿರುದ್ಧ ಸಲ್ಲಿಸಿದ್ದ ವರದಿಯ ರದ್ದತಿ ಕೋರಿ ನ್ಯಾ। ಯಶವಂತ್ ವರ್ಮಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಬುಧವಾರ ಪೂರ್ಣಗೊಳಿಸಿರುವ ಸುಪ್ರೀಂ ಕೋರ್ಟ್, ತೀರ್ಪು ಕಾಯ್ದಿರಿಸಿದೆ.
ದೆಹಲಿ ಹೈಕೋರ್ಟ್ ನ್ಯಾಯಾಧೀಶರಾಗಿದ್ದಾಗ ವರ್ಮಾ ಮನೆಯಲ್ಲಿ ನೋಟುಗಳ ಕಂತೆ ಪತ್ತೆಯಾಗಿತ್ತು. ಈ ಕುರಿತು ತನಿಖೆ ನಡೆಸಿದ್ದ ಆಂತರಿಕ ವಿಚಾರಣಾ ಸಮಿತಿಯು ವರ್ಮಾರನ್ನು ದೋಷಿ ಎಂದು ಹೇಳಿ ವರದಿ ನೀಡಿತ್ತು. ಇದೀಗ ಈ ವರದಿ ರದ್ದತಿಗೆ ವರ್ಮಾ ಸುಪ್ರೀಂ ಮೆಟ್ಟಿಲೇರಿದ್ದರು.
ಸುಪ್ರೀಂ ಆಕ್ರೋಶ:
ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್, ವರ್ಮಾ ವಿರುದ್ಧ ಮತ್ತೆ ತೀವ್ರ ಅಸಮಾಧಾನ ಹೊರಹಾಕಿತು. ನ್ಯಾ.ವರ್ಮಾರ ನಡೆ ವಿಶ್ವಾಸಾರ್ಹವಾಗಿಲ್ಲ. ಆಂತರಿಕ ವಿಚಾರಣಾ ಸಮಿತಿ ವರದಿ ಪ್ರಶ್ನಿಸುವುದೇ ಆಗಿದ್ದರೆ ವಿಚಾರಣೆಗೆ ಹಾಜರಾಗಿದ್ದು ಯಾಕೆ? ಆಗಲೇ ಯಾಕೆ ಪ್ರಶ್ನಿಸಲಿಲ್ಲ ಎಂದು ತರಾಟೆಗೆ ತೆಗೆದುಕೊಂಡಿತು.
ಅಲ್ಲದೆ, ವಾಗ್ದಂಡನೆಗೆ ನಾವು ಶಿಫಾರಸು ಮಾಡಿದ್ದನ್ನು ನ್ಯಾ। ವರ್ಮಾ ಪ್ರಶ್ನಿಸಿದ್ದಾರೆ. ನಮಗೆ ಹಾಗೆ ಶಿಫಾರಸು ಮಾಡಲು ಅಧಿಕಾರವಿದೆ. ಕೋರ್ಟ್ ಎಂದರೆ ಬರೀ ಪತ್ರ ರವಾನಿಸುವ ಅಂಚೆ ಕಚೇರಿ ಅಲ್ಲ’ ಎಂದು ಕಿಡಿಕಾರಿತು.