ದರ್ಶನ್‌ಗೆ ಹೈಕೋರ್ಟ್‌ ಜಾಮೀನು ಕೊಟ್ಟಿದ್ದು ಹೇಗೆ?: ಸುಪ್ರೀಂ ತರಾಟೆ

| N/A | Published : Jul 25 2025, 12:31 AM IST / Updated: Jul 25 2025, 05:54 AM IST

Actor darshan
ದರ್ಶನ್‌ಗೆ ಹೈಕೋರ್ಟ್‌ ಜಾಮೀನು ಕೊಟ್ಟಿದ್ದು ಹೇಗೆ?: ಸುಪ್ರೀಂ ತರಾಟೆ
Share this Article
  • FB
  • TW
  • Linkdin
  • Email

ಸಾರಾಂಶ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ ಮತ್ತು ಇತರೆ 6 ಆರೋಪಿಗಳಿಗೆ ಜಾಮೀನು ನೀಡಿದ ಕರ್ನಾಟಕ ಹೈಕೋರ್ಟ್‌ನ ತೀರ್ಪಿನ ಒಂದೇ ವಾರದಲ್ಲಿ ಎರಡನೇ ಬಾರಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್‌ 

 ನವದೆಹಲಿ :  ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ ಮತ್ತು ಇತರೆ 6 ಆರೋಪಿಗಳಿಗೆ ಜಾಮೀನು ನೀಡಿದ ಕರ್ನಾಟಕ ಹೈಕೋರ್ಟ್‌ನ ತೀರ್ಪಿನ ಒಂದೇ ವಾರದಲ್ಲಿ ಎರಡನೇ ಬಾರಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್‌, ‘ಇದು ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿದಂತಿಲ್ಲವೇ’ ಎಂದು ಪ್ರಶ್ನಿಸಿದೆ. ಅಲ್ಲದೆ ಜಾಮೀನು ನೀಡುವ ವೇಳೆ ಹೈಕೋರ್ಟ್‌ ಬಳಸಿದ ತನ್ನ ವಿವೇಚನಾ ಅಧಿಕಾರವು ತಪ್ಪನ್ನೇ ಮುಂದುವರೆಸುವಂತಿದೆ’ ಎಂದು ಕಿಡಿಕಾರಿರುವ ಸುಪ್ರೀಂಕೋರ್ಟ್‌, ನಮ್ಮ ತೀರ್ಪಿನ ವೇಳೆ ನಾವು ಇಂಥ ತಪ್ಪನ್ನು ಮಾಡುವುದಿಲ್ಲ ಎಂದು ಹೇಳಿದೆ.

ಹತ್ಯೆ ಕೇಸಿನ 7 ಆರೋಪಿಗಳಿಗೆ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಕುರಿತು ಗುರುವಾರ ವಿಚಾರಣೆ ನಡೆಸಿದ ನ್ಯಾ.ಪರ್ದಿವಾಲಾ ಅವರನ್ನೊಳಗೊಂಡ ಪೀಠ, ಘಟನೆಯ ಕುರಿತು ದಿಗ್ಭ್ರಮೆ ವ್ಯಕ್ತಪಡಿಸುವ ಜೊತೆಗೆ ಜಾಮೀನು ನೀಡಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ತನ್ನ ತೀರ್ಪನ್ನು ಕಾದಿರಿಸಿದೆ.

ವಾದ-ಪ್ರತಿವಾದ:

ಗುರುವಾರದ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ ಹಾಗೂ ಆರೋಪಿಗಳ ಪರ ಸಿದ್ಧಾರ್ಥ ದವೆ ಹಾಗೂ ಇತರರು ವಾದ ಮಂಡಿಸಿದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾ.ಪರ್ದಿವಾಲಾ, ‘ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದ ರೀತಿ ಚಿಂತಿಸುವಂತೆ ಮಾಡಿದೆ. ಜಾಮೀನು ಅರ್ಜಿಯ ಇತ್ಯರ್ಥದ ವೇಳೆ ನ್ಯಾಯಾಲಯವು ಎಲ್ಲಾ 7 ಆರೋಪಿಗಳನ್ನು ಆರೋಪದಿಂದ ಮುಕ್ತಗೊಳಿಸಿದಂತೆ ಆದೇಶಿಸಿದೆ ಎಂದು ಅನ್ನಿಸುತ್ತಿಲ್ಲವೇ? ಪ್ರತಿಯೊಂದು ಜಾಮೀನು ವಿಚಾರದಲ್ಲೂ ಕೋರ್ಟ್ ಇದೇ ರೀತಿ ಆದೇಶ ನೀಡುತ್ತದೆಯೇ? ಇದು ವಿವೇಚನಾ ಅಧಿಕಾರದ ತಪ್ಪು ಬಳಕೆಯಾಗಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಹೈಕೋರ್ಟ್ ವಿವೇಚನೆಯನ್ನು ಬಳಸಿದ ರೀತಿ ನಮಗೆ ಸಮಾಧಾನ ತಂದಿಲ್ಲ’ ಎಂದು ಹೈಕೋರ್ಟ್‌ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಮತ್ತೊಂದೆಡೆ ಸರ್ಕಾರದ ಪರ ವಾದ ಮಂಡಿಸಿದ ಸಿದ್ಧಾರ್ಥ ಲೂಥ್ರಾ, ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಗಂಭೀರ ಆರೋಪಗಳನ್ನು ಒಳಗೊಂಡ ಪ್ರಕರಣದಲ್ಲಿ, ಹೈಕೋರ್ಟ್ ನೀಡಿದ ಜಾಮೀನು ನ್ಯಾಯಸಮ್ಮತವಲ್ಲ. ಪ್ರತ್ಯಕ್ಷದರ್ಶಿಗಳ ಹೇಳಿಕೆ, ವಿಧಿವಿಜ್ಞಾನ ಪರೀಕ್ಷೆ ಮೊದಲಾದ ಮುಖ್ಯ ಸಾಕ್ಷ್ಯಗಳನ್ನು ಪರಿಶೀಲಿಸದೆ, ಕೋರ್ಟ್ ವಿಚಾರಣಾಪೂರ್ವ ಖುಲಾಸೆ ಮಾಡಿದೆ. ಕೊಲೆ ನಡೆದ ಅಪಾರ್ಟ್‌ಮೆಂಟ್‌ನ ಸಿಸಿಟಿವಿಗಳಲ್ಲಿ ಆರೋಪಿಗಳ ವಾಹನಗಳ ಚಲನವಲನ ಕಂಡುಬಂದಿದೆ. ಕೊಲೆ ನಡೆದ ಜಾಗದಲ್ಲಿದ್ದ ರಕ್ತ ಹಾಗೂ ಆರೋಪಿಗಳಿಗೆ ತಗುಲಿದ್ದ ರಕ್ತದಲ್ಲಿ ಹೊಂದಾಣಿಕೆಯಾಗುತ್ತಿರುವುದು ವಿಧಿವಿಜ್ಞಾನ ಪರೀಕ್ಷೆಯಿಂದ ಸಾಬೀತಾಗಿದೆ ಎಂದು ಪೀಠದ ಗಮನಕ್ಕೆ ತಂದರು.

ದರ್ಶನ್ ಪರ ವಕೀಲ ಸಿದ್ಧಾರ್ಥ ದವೆ ಮಾತನಾಡಿ, ಪ್ರತ್ಯಕ್ಷದರ್ಶಿಗಳ ಹೇಳಿಕೆ ದ್ವಂದ್ವಯುತವಾಗಿರುವುದು ಹೈಕೋರ್ಟ್‌ನ ಗಮನಕ್ಕೆ ಬಂದಿದೆ. ಒಬ್ಬ ಪ್ರತ್ಯಕ್ಷದರ್ಶಿಯ ಹೇಳಿಕೆಯನ್ನಂತೂ 12 ದಿನಗಳ ಬಳಿಕ ದಾಖಲಿಸಲಾಗಿದೆ. ಘಟನೆಯ ಮೂಲವು ಅನುಮಾನಾಸ್ಪದವಾಗಿದೆ. ಇಬ್ಬರು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ದಾಖಲಿಸುವಲ್ಲಿ ವಿಳಂಬವಾದ ಕಾರಣ ಅವುಗಳನ್ನು ನಂಬಲಾಗದು. ಇದಲ್ಲದೆ, ಇಬ್ಬರು ಪ್ರತ್ಯಕ್ಷದರ್ಶಿಗಳ ಸಾಕ್ಷ್ಯಗಳನ್ನು ಬೆಂಬಲಿಸಲು ಆರೋಪಪಟ್ಟಿಯಲ್ಲಿ ಯಾವುದೇ ಆಂತರಿಕ ಪುರಾವೆಗಳಿಲ್ಲ. 272 ಸಾಕ್ಷಿಗಳಿದ್ದು, ಇನ್ನೂ ಯಾವುದೇ ಆರೋಪಗಳನ್ನು ರೂಪಿಸಲಾಗಿಲ್ಲ’ ಎಂದು ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಲೂಥ್ರಾ, ‘270 ಸಾಕ್ಷಿಗಳ ಪಟ್ಟಿಯಲ್ಲಿ, ಅಂತಿಮವಾಗಿ 180 ಸಾಕ್ಷಿಗಳು ಅಥವಾ ಅದಕ್ಕಿಂತ ಹೆಚ್ಚಿನವರು ಇದ್ದೇ ಇರುತ್ತಾರೆ. ಜೊತೆಗೆ, 65 ವಸ್ತು ಸಾಕ್ಷಿಗಳಿವೆ. ವಿಚಾರಣಾ ನ್ಯಾಯಾಲಯವು ದಿನನಿತ್ಯ ವಿಚಾರಣೆ ನಡೆಸುತ್ತಿದ್ದು, 6 ತಿಂಗಳೊಳಗೆ ವಿಚಾರಣೆಯನ್ನು ಪೂರ್ಣಗೊಳಿಸಲಿದೆ’ ಎಂದರು.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್‌ರನ್ನು ಕಳೆದ ವರ್ಷ ಜೂ.11ರಂದು ಬಂಧಿಸಲಾಗಿತ್ತು. ಕರ್ನಾಟಕ ಹೈಕೋರ್ಟ್ ಡಿ.13ರಂದು ದರ್ಶನ್ ಸೇರಿ 7 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು. ಈ ಆದೇಶ ಪ್ರಶ್ನಿಸಿ ಜ.6ರಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.

ಜಾಮೀನಿಗೆ ಸುಪ್ರೀಂಕೋರ್ಟ್‌ ಗರಂ

1. ಏಳು ಆರೋಪಿಗಳ ಜಾಮೀನು ನಿರ್ಧರಿಸುವಾಗ ಹೈಕೋರ್ಟ್‌ ಅಷ್ಟೂ ಮಂದಿಯನ್ನು ಖುಲಾಸೆಗೊಳಿಸುವಂತೆ ಆದೇಶ ಹೊರಡಿಸಿದೆ ಎಂದು ಅನಿಸುತ್ತಿಲ್ಲವೇ?

2. ಹೈಕೋರ್ಟ್‌ನ ಜಾಮೀನು ಆದೇಶವೇ ಕಳವಳಕಾರಿಯಾಗಿದೆ. ಪ್ರತಿಯೊಂದು ಜಾಮೀನು ಕೊಡುವಾಗಲೂ ಹೈಕೋರ್ಟ್‌ ಇಂತಹ ಆದೇಶವನ್ನೇ ನೀಡುತ್ತದೆಯೇ?

3. ಜಾಮೀನು ನೀಡುವಾಗ ವಿವೇಚನಾಧಿಕಾರವನ್ನು ಹೈಕೋರ್ಟ್‌ ತಪ್ಪಾಗಿ ಪ್ರಯೋಗಿಸಿದೆ. ಹೈಕೋರ್ಟ್‌ ನಿಜಕ್ಕೂ ತನ್ನ ಬುದ್ಧಿಯನ್ನು ನ್ಯಾಯಯುತವಾಗಿ ಬಳಸಿದೆಯೇ?

4. ಹೈಕೋರ್ಟ್‌ ರೀತಿ ನಾವು ಮತ್ತದೇ ತಪ್ಪು ಮಾಡುವುದಿಲ್ಲ. ದೋಷಿ ಅಥವಾ ನಿರ್ದೋಷಿ ಎಂಬುದನ್ನು ನಾವು ನಿರ್ಧರಿಸುವುದಿಲ್ಲ. ಜಾಮೀನು ಸರಿ ಇದೆಯೇ ಎಂದಷ್ಟೇ ನೋಡುತ್ತೇವೆ

5. ಐಪಿಸಿ ಸೆಕ್ಷನ್‌ 302ರಡಿ ಕೊಲೆಗೆ ಆಧಾರವನ್ನೇ ನೀಡಿಲ್ಲ ಎಂದು ಜಡ್ಜ್‌ ಹೇಳಿದ್ದಾರೆ. ಹೈಕೋರ್ಟ್‌ ಜಡ್ಜ್‌ ಅವರಿಂದ ಇಂತಹ ಅಭಿಪ್ರಾಯವೇ. ಸೆಷನ್‌ ಕೋರ್ಟ್‌ ಜಡ್ಜ್‌ಗಳು ಇಂತಹ ತಪ್ಪು ಮಾಡಬಹುದು. ಆದರೆ ಹೈಕೋರ್ಟ್‌ ಜಡ್ಜ್‌ ಕೂಡ ಅಂತಹ ತಪ್ಪು ಮಾಡುತ್ತಾರೆಂದರೆ...?

Read more Articles on