ಸಾರಾಂಶ
ದಾವಣಗೆರೆ: ಆಧುನಿಕ ಸಮಾಜದಲ್ಲಿ ಆಸ್ತಿಗಾಗಿ, ಹಣಕ್ಕಾಗಿ, ಅಧಿಕಾರಕ್ಕಾಗಿ, ಜಾತಿಗಾಗಿ, ಧರ್ಮಕ್ಕಾಗಿ ಕದನಗಳು ಹೆಚ್ಚಾಗಿವೆ. ಈ ಎಲ್ಲಾ ಸಮಸ್ಯೆಗಳನ್ನು ಕಿತ್ತು ಹಾಕಲು ವಚನಗಳ ಅನುಷ್ಠಾನ ಮಾಡಬೇಕು. ಬಸವಾದಿ ಶರಣರ ವಚನಗಳು ನಮ್ಮ ಬದುಕಿನಲ್ಲಿ ಪಚನವಾದರೆ ಕದನಗಳು ಇರುವುದಿಲ್ಲ. ಬದಲಾಗಿ ಸ್ವರ್ಗ ನಿರ್ಮಾಣವಾಗುತ್ತದೆ ಎಂದು ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಹೇಳಿದರು.
ನಗರದ ದೊಡ್ಡಪೇಟೆಯ ವಿರಕ್ತಮಠದಲ್ಲಿ ಗುರುವಾರ ಸಂಜೆ ಬಸವಕೇಂದ್ರ ವಿರಕ್ತಮಠ, ಶಿವಯೋಗಾಶ್ರಮ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ ಶ್ರಾವಣ ಮಾಸದ 115ನೇ ವರ್ಷದ ವಚನಾನುಷ್ಠಾನ ಪ್ರವಚನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದರು.ಪ್ರಸ್ತುತ ದಿನಗಳಲ್ಲಿ ನಡೆಯುತ್ತಿರುವ ದೇಶ ದೇಶಗಳ ನಡುವೆ ಯುದ್ಧ, ಕದನಕ್ಕೆ ವಿರಾಮ ನೀಡಲು ವಚನಗಳು ಬೇಕು. ವಚನಗಳು ಓದುವುದು ಅಷ್ಟೇ ಅಲ್ಲದೇ ನಾವು ಬದುಕಿನಲ್ಲಿ ಅನುಷ್ಠಾನ ಮಾಡಿಕೊಳ್ಳಬೇಕು. ವಚನಗಳನ್ನು ಪಾಲಿಸಿದಾಗ ನಮಗೆ ವಚನಗಳಲ್ಲಿರುವ ಅರಿವು, ಆಚಾರ, ಅನುಭಾವದಿಂದ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಬದಲಾವಣೆ, ಜೀವನದಲ್ಲಿ ಸುಧಾರಣೆ, ಮನೆಯಲ್ಲಿಯ ಸಂಸ್ಕಾರಗಳ ಬೆಳವಣಿಗೆ, ತನ್ಮೂಲಕ ಸಮಾಜದಲ್ಲಿ ಪರಿವರ್ತನೆ ಸಾಧ್ಯ. ಇದರಿಂದ ಬದುಕಿಗೆ ಮುಖ್ಯವಾಗಿ ಸಮಾಧಾನ ಸಿಗುತ್ತದೆ ಎಂದು ತಳಿಸಿದರು. ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ವಚನ ಸಂಪುಟಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಚನಗಳು ಜೀವನದ ಅಮೃತ, ಸಾರ. ಒಂದೊಂದು ವಚನವೂ ಸಹಾ ಒಂದೊಂದು ಸಾರವನ್ನು ಹೇಳುತ್ತವೆ. ನಾವೂ ಸಹ ಮಠಮಾನ್ಯಗಳಲ್ಲಿ ಓದಿಕೊಂಡು, ಪ್ರವಚನ, ವಚನಗಳನ್ನು ಕೇಳುತ್ತಾ ಬೆಳೆದವರು. ವಚನಗಳು ಜೀವನದ ಮೌಲ್ಯಗಳನ್ನು ಹೇಳಿಕೊಡುತ್ತವೆ, ಜ್ಞಾನಾರ್ಜನೆಯನ್ನು ವೃದ್ಧಿ ಮಾಡುತ್ತವೆ. ಮನುಷ್ಯ ಅಡ್ಡದಾರಿಗೆ ಹೋಗುವುದನ್ನು ತಪ್ಪಿಸುತ್ತವೆ. ನಿತ್ಯ ಎಲ್ಲರೂ ಟಿವಿ, ಮೊಬೈಲ್‌ಗೆ ಅಡಿಕ್ಟ್ ಆಗಿಬಿಟ್ಟಿದ್ದಾರೆ. ಫೋನು, ಟಿವಿ ಬಿಟ್ಟು ಜೀವನವಿಲ್ಲ ಎಂಬಂತಾಗಿದೆ. ನಿತ್ಯ ವಚನಗಳನ್ನು ಪಠಣ ಮಾಡುವುದರ ಜೊತೆಗೆ ಅವುಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಟ್ರಸ್ಟ್ ಅಧ್ಯಕ್ಷ ಹಾಸಬಾವಿ ಕರಿಬಸಪ್ಪ, ಪ್ರವಚನಕಾರರಾದ ಬಿ.ಎಂ.ಪಂಚಾಕ್ಷರಿ ಶಾಸ್ತ್ರಿಗಳು, ಎಂ.ಜಯಕುಮಾರ್, ಶ್ರೀ ಶಿವಯೋಗಾಶ್ರಮ ಟ್ರಸ್ಟ್ನ ಎಂ.ಜಯಕುಮಾರ, ಅಂದನೂರು ಮುಪ್ಪಣ್ಣ, ವಿರಕ್ತಮಠ ಧರ್ಮದರ್ಶಿ ಸಮಿತಿಯ ಕಾರ್ಯದರ್ಶಿ ಕಣಕುಪ್ಪಿ ಮುರುಗೇಶಪ್ಪ, ಚಿಗಟೇರಿ ಜಯದೇವ, ಕಣಕುಪ್ಪಿ ಮುರುಗೇಶ್ , ವೀರಯ್ಯ ಎಂ.ಕಾಡದೇವರಮಠ, ಮಹಾದೇವಮ್ಮ, ಲಂಬಿ ಮುರುಗೇಶ, ದಾನಯ್ಯ ಶಾಸ್ತ್ರಿ ಹಿರೇಮಠ, ಕೆ.ಸಿ.ಉಮೇಶ ಇತರರು ಇದ್ದರು.ಬಸವ ಕಲಾಲೋಕದವರಿಂದ ವಚನ ಗಾಯನ ನಡೆಯಿತು.