ಸರ್ಕಾರದ್ದು ತಲೆಬುಡ ಇಲ್ಲದ ಆದೇಶ: ಆರಗ ಜ್ಞಾನೇಂದ್ರ

| Published : Jul 25 2025, 12:31 AM IST

ಸಾರಾಂಶ

ಅರಣ್ಯದಲ್ಲಿ ಜಾನುವಾರುಗಳನ್ನು ಮೇಯಿಸಬಾರದು ಎಂದು ತಲೆ ಬುಡ ಇಲ್ಲದ ಆದೇಶವನ್ನು ಸರ್ಕಾರ ಹೊರಡಿಸಿದೆ. ಕೂಡಲೇ ಇದನ್ನು ವಾಪಾಸ್ ಪಡೆಯಬೇಕು ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಒತ್ತಾಯಿಸಿದ್ದಾರೆ.

ಶಿವಮೊಗ್ಗ: ಅರಣ್ಯದಲ್ಲಿ ಜಾನುವಾರುಗಳನ್ನು ಮೇಯಿಸಬಾರದು ಎಂದು ತಲೆ ಬುಡ ಇಲ್ಲದ ಆದೇಶವನ್ನು ಸರ್ಕಾರ ಹೊರಡಿಸಿದೆ. ಕೂಡಲೇ ಇದನ್ನು ವಾಪಾಸ್ ಪಡೆಯಬೇಕು ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಒತ್ತಾಯಿಸಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿ, ಅರಣ್ಯ ಸಚಿವರಿಗೆ ಜಾನುವಾರು ಸಾಕಣೆ ಅರಿವು ಇಲ್ಲ. ರಾಜ್ಯದಲ್ಲಿ ಸಾವಯವ ಕೃಷಿ ಪುನಃ ಸ್ಥಾಪಿಸಬೇಕು ಎಂಬ ಆಂದೋಲನ ನಡೆಯುತ್ತಿದೆ. ಈ ಆಂದೋಲನ ಯಶಸ್ವಿ ಆಗಲು ಜಾನುವಾರು ಸಾಕಣೆ ಅಗತ್ಯ. ಸಾವಿರಾರು ಕೋಟಿ ಖರ್ಚು ಮಾಡಿ ವಿದೇಶದಿಂದ ರಸಗೊಬ್ಬರ ತರಿಸುತ್ತಿದ್ದೇವೆ. ಆದರೆ ಗೊಬ್ಬರದ ಕಾರ್ಖಾನೆ ಕೊಟ್ಟಿಗೆ ಗೊಬ್ಬರ. 2011ರ ಜಾನುವಾರು ಗಣತಿಗೆ ಹೋಲಿಸಿದರೆ 2021ರ ಜಾನುವಾರು ಗಣತಿಯಲ್ಲಿ ಜಾನುವಾರು ಸಂಖ್ಯೆ ಕಡಿಮೆ ಆಗಿದೆ. ಜಾನುವಾರು ಸಾಕಣೆಗೆ ಪ್ರೋತ್ಸಾಹ ಕೊಡಬೇಕು ಎಂದರು.

ನೆಗಡಿ ಬಂದಿದೆ ಅಂತ ಮೂಗು ಕೊಯ್ಯುವ ಸ್ಥಿತಿಯನ್ನು ಈ ಆದೇಶ ನೆನಪಿಸುತ್ತದೆ. ಹಾಗಾಗಿ ಆದೇಶ ವಾಪಸ್ ಪಡೆಯಬೇಕು. ಪಶ್ಚಿಮ ಘಟ್ಟಗಳ ಅನೇಕ ಹಳ್ಳಿಗಳು ಕಾಡಿನಲ್ಲಿ ಇವೆ. ನಾಳೆ ಮನುಷ್ಯ ಅಲ್ಲಿ ಓಡಾಡಬಾರದು ಎಂದೂ ಆದೇಶ ಹೊರಡಿಸಬಹುದು. ಇದು ಆಗಲು ಬಿಡಬಾರದು. ಜನರು ಹೋರಾಟಕ್ಕೆ ಇಳಿಯುತ್ತಾರೆ ಎಂದು ಎಚ್ಚರಿಸಿದರು.

ಎನ್ ಆರ್ ಪುರ ಆನೆ ದಾಳಿಯಿಂದ ಮಹಿಳೆ ಮೃತಪಟ್ಟಿದ್ದಾರೆ. ಹಂದಿ, ಮಂಗ ಊರಿನಲ್ಲಿ ದಾಳಿ ಮಾಡುತ್ತಿವೆ. ಕಾಡು ಪ್ರಾಣಿಗಳನ್ನು ಕಾಡಿನಲ್ಲಿ ಇಟ್ಟುಕೊಂಡು ಬಿಡಿ. ರೈತರ ಜಮೀನಿಗೆ ಅವುಗಳನ್ನು ಬಿಡಬೇಡಿ. ಹಿಂದೆ ಗೋಮಾಳ ಇತ್ತು. ಶಿವಮೊಗ್ಗ ಜಿಲ್ಲೆಯಲ್ಲಿಯೇ 25,000 ಎಕರೆ ಸರ್ಕಾರಿ ಪ್ಲಾಂಟೇಷನ್ ಆಗಿದೆ. ಅದನ್ನು ದನ ಮೇಯಿಸಲು ಕೊಡಿ ಎಂದರು.

ಮಾಧ್ಯಮ ಸಂಚಾಲಕ ಕೆ.ವಿ.ಅಣ್ಣಪ್ಪ, ಶರತ್ ಕಲ್ಯಾಣಿ ಇದ್ದರು.