ಭಾರತಕ್ಕೆ ಅಮೆರಿಕದಿಂದ ಚಾಬಹರ್‌ ಶಾಕ್‌

| Published : Sep 21 2025, 02:00 AM IST

ಸಾರಾಂಶ

ಮಹತ್ವದ ಬೆಳವಣಿಗೆಯೊಂದರಲ್ಲಿ ಇರಾನ್‌ನ ಚಾಬಹರ್‌ ಬಂಧರಿಗೆ ನೀಡಿದ್ದ ನಿರ್ಬಂಧ ವಿನಾಯ್ತಿಯನ್ನು ಅಮೆರಿಕ ಸರ್ಕಾರ ರದ್ದುಪಡಿಸಿದೆ. ಇದು ಪಾಕಿಸ್ತಾನವನ್ನು ಬಳಸದೆಯೇ ಚಾಬಹರ್‌ ಬಂದರಿನ ಮೂಲಕ ಅಫ್ಘಾನಿಸ್ತಾನ, ಮಧ್ಯ ಏಷ್ಯಾ ದೇಶಗಳ ಜೊತೆ ವ್ಯಾಪಾರ ನಡೆಸುವ ಭಾರತಕ್ಕೆ ದೊಡ್ಡ ಪೆಟ್ಟು ನೀಡಲಿದೆ.

ಬಂದರಿಗೆ ನೀಡಿದ್ದ ನಿರ್ಬಂಧ ವಿನಾಯಿತಿ ಇನ್ನು ರದ್ದು

ಮಧ್ಯ ಏಷ್ಯಾ ದೇಶಗಳಿಗೆ ಸರಕು ಸಾಗಣೆ ತುಸು ಕಷ್ಟ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಇರಾನ್‌ನ ಚಾಬಹರ್‌ ಬಂಧರಿಗೆ ನೀಡಿದ್ದ ನಿರ್ಬಂಧ ವಿನಾಯ್ತಿಯನ್ನು ಅಮೆರಿಕ ಸರ್ಕಾರ ರದ್ದುಪಡಿಸಿದೆ. ಇದು ಪಾಕಿಸ್ತಾನವನ್ನು ಬಳಸದೆಯೇ ಚಾಬಹರ್‌ ಬಂದರಿನ ಮೂಲಕ ಅಫ್ಘಾನಿಸ್ತಾನ, ಮಧ್ಯ ಏಷ್ಯಾ ದೇಶಗಳ ಜೊತೆ ವ್ಯಾಪಾರ ನಡೆಸುವ ಭಾರತಕ್ಕೆ ದೊಡ್ಡ ಪೆಟ್ಟು ನೀಡಲಿದೆ.

ಈ ಬಂದರಿನ ಮೂಲಕ ಗಳಿಸುವ ಆದಾಯವನ್ನು ಇರಾನ್‌, ಸಮೂಹ ನಾಶಕ ಅಸ್ತ್ರಗಳಾದ ಪರಮಾಣು ಬಾಂಬ್‌ ಸೇರಿ ಇತರೆ ಉದ್ದೇಶಗಳಿಗೆ ಬಳಸುತ್ತಿದೆ. ಅದನ್ನು ತಡೆಯಲು ಈ ಕ್ರಮ ಎಂದು ಅಮೆರಿಕ ಹೇಳಿದ್ದರೂ, ಇದು ಭಾರತವನ್ನು ಗುರಿಯಾಗಿಸಿ ಕೈಗೊಂಡ ಎಂದೂ ವಿಶ್ಲೇಷಿಸಲಾಗುತ್ತಿದೆ.

ಸರ್ವ ದಿಕ್ಕುಗಳಲ್ಲಿ ನೆಲದಿಂದ ಸುತ್ತುವರೆದಿರುವ ಅಫ್ಘಾನಿಸ್ತಾನಕ್ಕೆ ನೆರವು ನೀಡಲು ಹಾಗೂ ಪಾಕಿಸ್ತಾನದಲ್ಲಿ ಗ್ವಾದರ್‌ ಬಂದರು ಅಭಿವೃದ್ಧಿಪಡಿಸುತ್ತಿರುವ ಚೀನಾಗೆ ತಿರುಗೇಟು ನೀಡುವ ಸಲುವಾಗಿ 2018ರಲ್ಲಿ ನ್‌ನಲ್ಲಿರುವ ಚಾಬಹರ್‌ ಬಂದರಿಗೆ ಕೆಲವೊಂದು ನಿರ್ಬಂಧಗಳಿಂದ ಅಮೆರಿಕ ವಿನಾಯ್ತಿ ನೀಡಿತ್ತು. ಈಗ ಆ ವಿನಾಯ್ತಿ ಹಿಂದಕ್ಕೆ ಪಡೆದಿದೆ.

ಭಾರತಕ್ಕೇನು ನಷ್ಟ?:

ಅಫ್ಘಾನಿಸ್ತಾನದೊಂದಿಗೆ ವ್ಯಾಪಾರ ಸಂಬಂಧ ಹೊಂದಲು ಭಾರತ ಪಾಕಿಸ್ತಾನದ ಮೂಲಕ ಹಾದುಹೋಗುವ ಬದಲು, ಸ್ವರ್ಣದ್ವಾರ ಎಂದು ಕರೆಸಿಕೊಳ್ಳುವ ಚಾಬಹರ್‌ ಬಂದರು ಅವಲಂಬಿಸಿತ್ತು. ಮಧ್ಯ ಏಷ್ಯಾದೊಂದಿಗೆ ಸಂಪರ್ಕ ಸಾಧಿಸಲೂ ಇದೇ ಮಾರ್ಗವಾಗಿತ್ತು. ಈ ಬಂದರಿನ ಅಭಿವೃದ್ಧಿಯಲ್ಲಿ ಭಾರತವೂ ತೊಡಗಿದ್ದು, ಶಾಹಿದ್ ಬೆಹೆಶ್ತಿ ಟರ್ಮಿನಲ್‌ ಅನ್ನು ಇಂಡಿಯಾ ಪೋರ್ಟ್ಸ್ ಗ್ಲೋಬಲ್ ಲಿ. ನಿರ್ವಹಿಸುತ್ತಿದೆ. ಕಳೆದ ವರ್ಷವಷ್ಟೇ 10 ವರ್ಷಗಳ ಅವಧಿಗೆ ಈ ಒಪ್ಪಂದ ಏರ್ಪಟ್ಟಿತ್ತು. ಈಗ ಆ 44 ಸಾವಿರ ಕೋಟಿ ರು. ಹೂಡಿಕೆಗೆ ಹೊಡೆತ ಬೀಳಲಿದೆ.

2018ರಿಂದ ಇಲ್ಲಿಯವರೆಗೆ ಚಬಾಹರ್‌ ಬಂದರಿನ ಮೂಲಕ 84 ಲಕ್ಷ ಟನ್‌ ಸರಕುಗಳು ಓಡಾಡಿವೆ. ವಾರ್ಷಿಕವಾಗಿ 22 ಸಾವಿರ ಕೋಟಿ ರು. ಮೊತ್ತದ ವಹಿವಾಟು ನಡೆದಿದೆ. ಭಾರತವು ಈ ಮಾರ್ಗದಲ್ಲಿ ಕೃಷಿ ಉತ್ಪನ್ನ, ಆಹಾರ, ಬಟ್ಟೆ, ಔಷಧಿ, ರಸಗೊಬ್ಬರ, ಕೈಗಾರಿಕಾ ಮತ್ತು ಗ್ರಾಹಕ ಸರಕುಗಳ ವ್ಯಾಪಾರ ನಡೆಸುತ್ತದೆ.