ಯುದ್ಧದಲ್ಲಿ ಪರಸ್ಪರರಿಗೆ ಸಹಕಾರ : ಪಾಕಿಸ್ತಾನ - ಸೌದಿ ಅರೇಬಿಯಾ ಸಹಿ

| N/A | Published : Sep 19 2025, 01:00 AM IST

ಸಾರಾಂಶ

ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಬುಧವಾರ ಹೊಸ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ದು, ಎರಡೂ ರಾಷ್ಟ್ರಗಳ ಮೇಲಿನ ಯಾವುದೇ ದಾಳಿಯನ್ನು ಎರಡೂ ರಾಷ್ಟ್ರಗಳ ವಿರುದ್ಧದ ಆಕ್ರಮಣಕಾರಿ ಕೃತ್ಯವೆಂದು ಪರಿಗಣಿಸಲಾಗುವುದು ಎಂದು ಘೋಷಿಸಿವೆ. 

 ರಿಯಾದ್/ನವದೆಹಲಿ :  ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಬುಧವಾರ ಹೊಸ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ದು, ಎರಡೂ ರಾಷ್ಟ್ರಗಳ ಮೇಲಿನ ಯಾವುದೇ ದಾಳಿಯನ್ನು ಎರಡೂ ರಾಷ್ಟ್ರಗಳ ವಿರುದ್ಧದ ಆಕ್ರಮಣಕಾರಿ ಕೃತ್ಯವೆಂದು ಪರಿಗಣಿಸಲಾಗುವುದು ಎಂದು ಘೋಷಿಸಿವೆ. ಈ ಮೂಲಕ ಒಂದು ರಾಷ್ಟ್ರದ ಮೇಲೆ ದಾಳಿ ನಡೆದರೆ ಮತ್ತೊಂದು ರಾಷ್ಟ್ರ ನೆರವಿಗೆ ನಿಲ್ಲುವ ಒಪ್ಪಂದಕ್ಕೆ ಬಂದಿವೆ.

ಇದರಿಂದಾಗಿ ಭಾರತವು ಪಾಕ್‌ ಮೇಲೆ ಏನಾದರೂ ದಾಳಿ ಮಾಡಿದರೆ ಆಗ ಸೌದಿ ಅರೇಬಿಯಾ ಪಾಕ್‌ ಪರ ನಿಲ್ಲುವುದೇ ಎಂಬ ಗುಮಾನಿ ಆರಂಭವಾಗಿದೆ.ಸೌದಿ ಪ್ರವಾಸದಲ್ಲಿರುವ ಪಾಕ್‌ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೌದಿ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಬಗ್ಗೆ ಉಭಯ ದೇಶಗಳು ಜಂಟಿ ಹೇಳಿಕೆ ನೀಡಿದ್ದು, ‘ಒಪ್ಪಂದದ ಪ್ರಕಾರ, ಯಾವುದೇ ದೇಶದ ವಿರುದ್ಧದ ಆಕ್ರಮಣವನ್ನು ಎರಡೂ ದೇಶಗಳ ವಿರುದ್ಧದ ಆಕ್ರಮಣವೆಂದು ಪರಿಗಣಿಸಲಾಗುತ್ತದೆ. ಈ ಒಪ್ಪಂದವು ಎರಡೂ ರಾಷ್ಟ್ರಗಳ ನಡುವಿನ ರಕ್ಷಣಾ ಸಹಕಾರಗಳನ್ನು ಅಭಿವೃದ್ಧಿಪಡಿಸುವ ಮತ್ತು ಯಾವುದೇ ಆಕ್ರಮಣದ ವಿರುದ್ಧ ಜಂಟಿ ಹೋರಾಟವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ’ ಎಂದು ತಿಳಿಸಿವೆ.

ಭಾರತದ ಮೇಲೇನು ಪರಿಣಾಮ?: ಈ ಒಪ್ಪಂದದ ಪ್ರಕಾರ, ಭವಿಷ್ಯದಲ್ಲಿ ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಿದರೆ, ಸೌದಿ ಪಾಕಿಸ್ತಾನದ ನೆರವಿಗೆ ನಿಂತು ಭಾರತದ ವಿರುದ್ಧ ಹೋರಾಡಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಇತ್ತೀಚೆಗಷ್ಟೆ ಇಸ್ರೇಲ್‌ ಕತಾರ್‌ ಮೇಲೆ ದಾಳಿ ನಡೆಸಿದೆ. ಸೌದಿ ಮೇಲೆಯೂ ಇಸ್ರೇಲ್ ದಾಳಿ ಮಾಡುವ ಸಾಧ್ಯತೆಯಿರುವುದರಿಂದ, ಪಾಕಿಸ್ತಾನದ ನೆರವು ನಿರೀಕ್ಷಿಸಿ ಸೌದಿ ಒಪ್ಪಂದಕ್ಕೆ ಸಹಿ ಹಾಕಿದೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ಸೌದಿ ಹಿರಿಯ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದು, ‘ಈ ಒಪ್ಪಂದ ನಿರ್ದಿಷ್ಟ ದೇಶಗಳಿಗೆ ಅಥವಾ ಘಟನೆಗಳಿಗೆ ಪ್ರತಿಕ್ರಿಯೆಯಲ್ಲ. ಭಾರತದೊಂದಿಗಿನ ನಮ್ಮ ಸಂಬಂಧವು ಹಿಂದೆಂದಿಗಿಂತಲೂ ಹೆಚ್ಚು ದೃಢವಾಗಿದೆ. ನಾವು ಈ ಸಂಬಂಧವನ್ನು ಮುಂದುವರಿಸುತ್ತೇವೆ’ ಎಂದಿದ್ದಾರೆ. 

ಅಧ್ಯಯನ ಮಾಡುತ್ತೇವೆ- ಭಾರತ ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌, ‘ಸೌದಿ ಮತ್ತು ಪಾಕ್‌ ನಡುವಿನ ರಕ್ಷಣಾ ಒಪ್ಪಂದದ ವರದಿಗಳನ್ನು ನೋಡಿದ್ದೇವೆ. ನಮ್ಮ ರಾಷ್ಟ್ರೀಯ ಭದ್ರತೆಗೆ, ಪ್ರಾದೇಶಿಕ ಮತ್ತು ಜಾಗತಿಕ ಸ್ಥಿರತೆಗೆ ಈ ಬೆಳವಣಿಗೆಯ ಪರಿಣಾಮಗಳು ಏನಾಗಬಹುದು ಎಂಬುದನ್ನು ನಾವು ಅಧ್ಯಯನ ಮಾಡುತ್ತೇವೆ. ಭಾರತದ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಸಮಗ್ರ ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರ ಬದ್ಧವಾಗಿದೆ’ ಎಂದು ತಿಳಿಸಿದ್ದಾರೆ.

Read more Articles on