ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಕ್ಕಳಿಗೆ ಅಂಗನವಾಡಿ ನಡೆಸಲು ಸ್ವಂತ ಕಟ್ಟಡವಿಲ್ಲದೆ ಬಿದ್ದು ಹೋಗುವ ಸ್ಥಿತಿಯಲ್ಲಿರುವ ಕಟ್ಟಡಗಳಲ್ಲಿ ಬಾಡಿಗೆ ಅಧಾರದ ಮೇಲೆ ಪಡೆದು ಶಾಲೆ ನಡೆಸುತ್ತಿರುವುದು ಜನರ ದುರ್ದೈವದ ಸಂಗತಿಯಾಗಿದೆ ಎಂದು ಬಿಜೆಪಿ ಮುಖಂಡ ಕೆಂಪುಸಾಗರ ಶಿವರಾಜ್ ಕುಮಾರ್ ವಿಷಾದ ವ್ಯಕ್ತಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ವಿಧಾನಸಭಾ ವ್ಯಾಪ್ತಿಯಲ್ಲಿ ೮೩ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ, ಅಭಿವೃದ್ಧಿಯ ಬಗ್ಗೆ ಮಾತನಾಡುವ ಸ್ಥಳೀಯ ಶಾಸಕ ಕೆ.ಎಂ. ಶಿವಲಿಂಗೇಗೌಡರಿಗೆ ಈ ಬಗ್ಗೆ ಅರಿವಿಲ್ಲವೇ ಎಂದು ಪ್ರಶ್ನಿಸಿದರು. ಇತ್ತೀಚೆಗೆ ಬಿಡುಗಡೆಗೊಂಡ ಇದು "ನಮ್ ಶಾಲೆ " ಎಂಬ ಚಲನಚಿತ್ರದಲ್ಲಿ ಮುಖ್ಯಮಂತ್ರಿಗಳ ಪಾತ್ರ ಅಭಿನಯಿಸಿ, ವಿದ್ಯಾರ್ಥಿಗಳ ಜೀವನದ ಬಗ್ಗೆ ಅರಿವು ಮೂಡಿಸಿರುವ ಇವರ ನಟನೆ ಅದ್ಭುತವಾಗಿದೆ. ಆದರೇ ನಟನೆಯಲ್ಲಿ ಬಣ್ಣ ಹಂಚಿಕೊಂಡು ಮಾಡಿರುವ ಇವರಿಗೆ ನಿಜ ಜೀವನದಲ್ಲಿ ೧೭ ವರ್ಷಗಳಿಂದ ಶಾಸಕರಾಗಿರುವ ಇವರು ಕಟ್ಟಡ ಕಟ್ಟುವಲ್ಲಿ ಜವಾಬ್ದಾರಿ ಮರೆತರೇ ಎಂಬುದು ತಿಳಿಯುತ್ತಿಲ್ಲವೆಂದರು.
ಅಂಗನವಾಡಿ ಕಟ್ಟಡಗಳು ಬೀಳುವ ಹಂತದಲ್ಲಿದ್ದು, ಏನಾದರೂ ಅನಾಹುತವಾದರೇ ಇವರೇ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ ತಿಳಿಸಲಿ. ನಗರದ ಮಲ್ಲೇಶ್ವರ ನಗರದಲ್ಲಿರುವ ಅಂಗನವಾಡಿ ಕಟ್ಟಡ ಸೇರಿದಂತೆ ಹಲವು ಕಟ್ಟಡಗಳು ಬಿದ್ದು ಹೋಗುವ ಸ್ಥಿತಿಯಲ್ಲಿದೆ. ಶಾಲಾ ಅವಧಿಯಲ್ಲಿ ಏನಾದರೂ ಆದರೆ ಏನು ಗತಿ ಎಂಬುದನ್ನು ಅರಿಯುವ ಶಾಸಕರು ಇವರಾಗಬೇಕಿದೆ ಎಂದರು.ಗ್ರಾಮಾಂತರ ಮಂಡಲ ಮಾಜಿ ಅಧ್ಯಕ್ಷ ದುಮ್ಮೇನಹಳ್ಳಿ ರಮೇಶ್ ಮಾತನಾಡಿ, ಲಾಭಾಂಶದ ಕೆಲಸ, ಪರ್ಸೆಂಟೇಜ್ ಕೆಲಸವೆಂದರೆ ಮುಂದಾಗುವ ಇವರಿಗೆ ಮಕ್ಕಳ ಜೀವನಕ್ಕಾದಾರವಾಗುವ ಶಿಕ್ಷಣ ಬಗ್ಗೆ ಆಸಕ್ತಿ ಇಲ್ಲವಾಯಿತೆ, ಸರ್ಕಾರದ ಟೇಬಲ್ ತಟ್ಟಿ ಅನುದಾನ ತರುವ ಇವರಿಗೆ ಅಂಗನವಾಡಿ ಕಟ್ಟಡಗಳಿಗೆ ಟೇಬಲ್ ತಟ್ಟುವುದು ಮರೆತರೇ ಎಂದು ಪ್ರಶ್ನಿಸಿದರು. ನಗರ ಮಂಡಲ ಮಾಜಿ ಅಧ್ಯಕ್ಷ ಎ.ಎಸ್. ಪುರುಷೋತ್ತಮ್ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದಲ್ಲಿ ನಿರ್ವಹಣೆ ಮಾಡುತ್ತಿರುವ ಅಂಗನವಾಡಿ ಕಟ್ಟಡಗಳಿಗೆ ಕೇವಲ ೧ ಸಾವಿರ ಬಾಡಿಗೆ ನೀಡುತ್ತಿರುವ ಇರುವ ಕಟ್ಟಡದ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಿದ್ದಾರ? ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಶಾಸಕರೇ ಈ ಬಗ್ಗೆಯೂ ನೀವು ಗಮನಹರಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಜಿ.ಎನ್. ಮನೋಜ್ ಕುಮಾರ್, ಬಸವರಾಜು ಚಲ್ಲಾಪುರ, ಗ್ರಾಮಾಂತರ ಮಂಡಲ ಪ್ರ.ಕಾರ್ಯದರ್ಶಿ ಸುನೀಲ್ ರಾಂಪುರ ಉಪಸ್ಥಿತರಿದ್ದರು.ಫೋಟೋ: ಬಿಜೆಪಿ ಮುಖಂಡ ಕೆಂಪುಸಾಗರ ಶಿವರಾಜ್‌ಕುಮಾರ್.