ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಹಾಗೂ ಅಲ್ಲಿರುವ ಹಿಂದೂಗಳ ರಕ್ಷಣೆಗೆ ಆಗ್ರಹಿಸಿ ಕೊಡಗು ಜಿಲ್ಲಾ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಪ್ರತಿಭಟನಾ ಸಭೆ ನಡೆಯಿತು. ಮಡಿಕೇರಿಯ ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಸ್ಥಾನದಿಂದ ಗಾಂಧಿ ಮೈದಾನದವರೆಗೆ ಸಾಗಿದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿದರು ಹಾಗೂ ಅಲ್ಲಿರುವ ಹಿಂದೂಗಳ ರಕ್ಷಣೆಗೆ ಆಗ್ರಹಿಸಿದರು. ಮಡಿಕೇರಿಯ ಶ್ರೀ ಚೌಡೇಶ್ವರಿ ದೇವಾಲಯದಿಂದ ಇಂದಿರಾಗಾಂಧಿ ವೃತ್ತ, ಸ್ಕ್ವಾಡ್ರನ್ ಲೀಡರ್ ವೃತ್ತ, ನಗರ ಠಾಣೆ, ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ತಿಮ್ಮಯ್ಯ ವೃತ್ತವಾಗಿ ಗಾಂಧಿ ಮೈದಾನದಲ್ಲಿ ಸಮಾಪ್ತಿಗೊಂಡಿತು. ಮೆರವಣಿಗೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಹಿಂದೂ ಸಮಾಜ ಬಾಂಧವರು ಕೇಸರಿ ಬಾವುಟ ಹಿಡಿದು ಘೋಷ ವಾಕ್ಯಗಳನ್ನು ಕೂಗಿದರು.
ಮೆರವಣಿಗೆ ಸಂದರ್ಭ ಪೊಲೀಸ್ ಇಲಾಖೆಯಿಂದ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.ಪ್ರತಿಭಟನಾ ಸಭೆ ಉದ್ದೇಶಿಸಿ ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ, ಹಿಂದೂತ್ವಕ್ಕೆ ಯಾರೇ ತೊಂದರೆ ಮಾಡಿದರೂ ನಾವೆಲ್ಲ ಒಂದಾಗಬೇಕು. ಹಿಂದೂ ಸಮಾಜ ಎದ್ದು ನಿಂತಿದೆ ಎಂದರೆ ನಮ್ಮ ವಿನಾಶ ಎಂಬ ಸಂದೇಶ ನುಸುಳುಕೋರರಿಗೆ ಹೋಗಬೇಕು ಎಂದರು.ಪೂರ್ವ ಪಾಕಿಸ್ತಾನ ಎಂದರೆ, ಈಗಿನ ಬಾಂಗ್ಲದೇಶವಾಗಿದೆ. ೩೦೦ಕ್ಕೂ ಅಧಿಕ ಹಿಂದೂ ಧಾರ್ಮಿಕ ಕೇಂದ್ರಗಳನ್ನು ನಾಶ ಮಾಡಿದ್ದಾರೆ. ಹಿಂದೂಗಳ ಹತ್ಯೆ ಮಾಡಿದ್ದಾರೆ. ಪೂರ್ವ, ಪಶ್ಚಿಮ ಪಾಕಿಸ್ತಾನದಲ್ಲಿ ೩ ಕೋಟಿಗೂ ಅಧಿಕ ಹಿಂದೂಗಳನ್ನು ಹತ್ಯೆ ಮಾಡಲಾಗಿದೆ. ಹಿಂದೂಸಮಾಜದ ರಕ್ಷಣೆಗೋಸ್ಕರ ನಾವೇ ಟೊಂಕಕಟ್ಟಿ ನಿಲ್ಲಬೇಕು ಎಂದರು.ಕೊಡಗಿನ ಎಸ್ಟೇಟ್‌ಗಳಲ್ಲಿ ನುಸುಳುಕೋರರಿದ್ದಾರೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ದೌರ್ಜನ್ಯ ಕೊಡಗಿನಲ್ಲಿಯೂ ನಡೆಯುವ ಸಾಧ್ಯತೆಯಿದೆ ಎಂದ ಅವರು, ಕೊಡಗು ಯಾವ ಪರಿಸ್ಥಿತಿಯಲ್ಲಿದೇ ಎಂಬುದನ್ನು ನಾವು ಅರಿತು ಅವಲೋಕನ ಮಾಡಬೇಕಾಗಿದೆ ಎಂದರು.
ಕೊಡಗನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಅಕ್ರಮ ಬಾಂಗ್ಲದೇಶಿಗರನ್ನು ಹುಡುಕದಿದ್ದರೆ, ಹಿಂದೂ ಸಮಾಜದ ಉಳಿವಿಗಾಗಿ ಹಿಂದೂ ರಕ್ಷಣಾ ವೇದಿಕೆಯಿಂದ ಹೊರದಬ್ಬುವ ಕೆಲಸ ಮಾಡಲಿದೆ. ಹಿಂದೂ ಸಮಾಜ ಎಂದಿಗೂ ಕೈಕಟ್ಟಿ ಕೂರುವುದಿಲ್ಲ ಎಂದು ಎಚ್ಚರಿಸಿದರು.ಹಿಂದೂ ಹಿತರಕ್ಷಣಾ ಸಮಿತಿ ಸಂಚಾಲಕ ಕುಕ್ಕೇರ ಅಜಿತ್ ಮಾತನಾಡಿ, ರಾಜ್ಯ ಸೇರಿದಂತೆ ಕೊಡಗು ಜಿಲ್ಲೆಯಲ್ಲಿಯೂ ಲಕ್ಷಾಂತರ ಸಂಖ್ಯೆಯಲ್ಲಿ ಬಾಂಗ್ಲ ನುಸುಳುಕೋರರಿದ್ದು, ಅಂತವರಿಗೆ ಇಲ್ಲಿ ಅಗತ್ಯ ದಾಖಲೆ ದೊರೆಯುತ್ತಿದೆ. ಅವರುಗಳಿಂದ ಶಾಂತಿ, ಸುವ್ಯವಸ್ಥೆ ಹದಗೆಟ್ಟಿದ್ದು, ಕಾನೂನು ಬಾಹಿರ ಕೃತ್ಯದಲ್ಲಿಯೂ ತೊಡಗಿಸಿಕೊಳ್ಳುತ್ತಿದ್ದಾರೆ. ಈ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಆರ್.ಎಸ್.ಎಸ್ ಪ್ರಮುಖ ಚೆಕ್ಕೇರ ಮನು ಕಾವೇರಪ್ಪ ವೇದಿಕೆಯಲ್ಲಿದ್ದರು.ಹಿಂದೂ ಹಿತರಕ್ಷಣಾ ಸಮಿತಿ ಸಂಚಾಲಕ ಮತ್ತು ಪ್ರತಿಭಟನಾ ಸಭೆಯ ಸಂಚಾಲಕ ಸುರೇಶ್ ಮುತ್ತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಸ್.ಜಿ.ಮೇದಪ್ಪ, ಸುನಿಲ್ ಸುಬ್ರಮಣಿ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಸಿ.ಕೆ.ಬೋಪಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಪ್ರಧಾನ ಕಾರ್ಯದರ್ಶಿ ನೆಲ್ಲೀರ ಚಲನ್ ಕುಮಾರ್, ಉಪಾಧ್ಯಕ್ಷ ಕುಂಞಂಡ ಅರುಣ್ ಭೀಮಯ್ಯ ಇನ್ನಿತರರು ಹಾಜರಿದ್ದರು.