ಅಕ್ರಮ ಗ್ಯಾಸ್ ಸಿಲಿಂಡರ್ ಫಿಲ್ಲಿಂಗ್ ಅಡ್ಡೆ ಮೇಲೆ ದಾಳಿ

| Published : Feb 09 2025, 01:16 AM IST

ಸಾರಾಂಶ

ಕೋಳಿ ಫಾರಂನಲ್ಲಿ ಬೆಂಗಳೂರಿನ ನಂದೀನಿ ಲೇಔಟ್‌ನ ಲಕ್ಷ್ಮೀ ಭಾರತ್ ಗ್ಯಾಸ್ ಏಜೆನ್ಸಿ ಅವರ ಬಿಲ್‌ಗಳು ಗೂಡ್ಸ್ ಗಾಡಿ ದೊರೆತಿವೆ. ಇದರ ಜೊತೆಗೆ ಇಂಡಿಯನ್ ಕಮರ್ಷಿಯಲ್ ಸಿಲಿಂಡರ್‌ಗಳು, ಅಗ್ನಿ ಗ್ಯಾಸ್ ಸಿಲಿಂಡರ್‌ಗಳು ದೊರೆತಿವೆ. ಅಕ್ರಮವಾಗಿ ಸಿಲಿಂಡರ್ ಫಿಲ್ ಮಾಡುತ್ತಿದ್ದ ಬೆಂಗಳೂರು ಮೂಲದ ಶ್ರೀನಿವಾಸ್ ಮಗನಾದ ರಘು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೂ ಉಳಿದ ಇಬ್ಬರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಉಜ್ವಲ್ ಯೋಜನೆಯ ಗೃಹ ಬಳಕೆಯ ೭೫ ಸಿಲಿಂಡರ್ , ೬೨ ಕಮರ್ಷಿಯಲ್ ಸಿಲಿಂಡರ್ ವಶ

ಕನ್ನಡಪ್ರಭ ವಾರ್ತೆ ಕೊರಟಗೆರೆ

ಕೋಳಿ ಶೆಡ್‌ನಲ್ಲಿ ಅಕ್ರಮ ಗ್ಯಾಸ್ ಸಿಲಿಂಡರ್ ಫಿಲ್ಲಿಂಗ್ ಅಡ್ಡೆಯ ಮೇಲೆ ಕೊರಟಗೆರೆ ಪಿಎಸೈ ಚೇತನ್‌ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ, ೧೩೭ ಸಿಲಿಂಡರ್, ಒಂದು ಟಾಟಾ ಇಂಟ್ರಾ ಗೂಡ್ಸ್ ವಾಹನ ಹಾಗೂ ಓರ್ವ ಆರೋಪಿಯನ್ನು ಬಂಧಿಸಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಕೊರಟಗೆರೆ ತಾಲೂಕಿನ ಸಿ.ಎನ್.ದುರ್ಗ ಹೋಬಳಿಯ ಬುಕ್ಕಾಪಟ್ಟಣ ಸಮೀಪ ಬುಕ್ಕಾಪಟ್ಟಣ ಸರ್ವೇ ನಂ. ೯೮ರಲ್ಲಿ ಫಾತಿಮಾ ಬಿನ್ ಸೈಯದ್ ಜಮೀಲ್ ಬಾಷಾ ಎಂಬುವರಿಗೆ ಸೇರಿದ ಕೋಳಿ ಫಾರಂ ಶೆಡ್‌ನಲ್ಲಿ ಅಕ್ರಮ ಸಿಲಿಂಡರ್‌ಗಳನ್ನು ಫಿಲ್ಲಿಂಗ್ ಮಾಡುತ್ತಿರುವುದರ ಬಗ್ಗೆ ಖಚಿತ ಮಾಹಿತಿ ಆಧರಿಸಿ ಪಿಎಸೈ ಚೇತನ್‌ಕುಮಾರ್ ಅವರ ತಂಡ ದಾಳಿ ನಡೆಸಿ ಬಡವರಿಗೆ ನೀಡುವ ಉಜ್ವಲ್ ಯೋಜನೆಯ ಗೃಹ ಬಳಕೆಯ ೭೫ ಸಿಲಿಂಡರ್, ೬೨ ಕಮರ್ಷಿಯಲ್ ಸಿಲಿಂಡರ್‌ಗಳನ್ನು ಹಾಗೂ ಕೆಎ ೪೧, ಎಎ ೧೨೭೦ ಸಂಖ್ಯೆಯ ಒಂದು ಟಾಟಾ ಗೂಡ್ಸ್ ವಾಹನ ಮತ್ತು ಆ್ಯಕ್ಟೀವಾ ಬೈಕ್ ವಶಪಡಿಸಿಕೊಂಡಿದ್ದಾರೆ.

ಕೋಳಿ ಫಾರಂನಲ್ಲಿ ಬೆಂಗಳೂರಿನ ನಂದೀನಿ ಲೇಔಟ್‌ನ ಲಕ್ಷ್ಮೀ ಭಾರತ್ ಗ್ಯಾಸ್ ಏಜೆನ್ಸಿ ಅವರ ಬಿಲ್‌ಗಳು ಗೂಡ್ಸ್ ಗಾಡಿ ದೊರೆತಿವೆ. ಇದರ ಜೊತೆಗೆ ಇಂಡಿಯನ್ ಕಮರ್ಷಿಯಲ್ ಸಿಲಿಂಡರ್‌ಗಳು, ಅಗ್ನಿ ಗ್ಯಾಸ್ ಸಿಲಿಂಡರ್‌ಗಳು ದೊರೆತಿವೆ. ಅಕ್ರಮವಾಗಿ ಸಿಲಿಂಡರ್ ಫಿಲ್ ಮಾಡುತ್ತಿದ್ದ ಬೆಂಗಳೂರು ಮೂಲದ ಶ್ರೀನಿವಾಸ್ ಮಗನಾದ ರಘು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೂ ಉಳಿದ ಇಬ್ಬರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಕೇಂದ್ರ ಸರ್ಕಾರ ಬಡವರ ಅನುಕೂಲಕ್ಕಾಗಿ ಗೃಹ ಉಪಯೋಗಿ ಸಿಲಿಂಡರ್ ಗಳನ್ನು ನೀಡಲಾಗುತ್ತಿದ್ದು, ಅದನ್ನೇ ಬಂಡವಾಳ ಮಾಡಿಕೊಂಡ ಕದೀಮರ ಗುಂಪು, ವಾಣಿಜ್ಯ ಉಪಯೋಗಕ್ಕೆ ಬಳಸುವ ದೊಡ್ಡ ಸಿಲಿಂಡರ್‌ಗಳಿಗೆ ವರ್ಗಾವಣೆ ಮಾಡಿಕೊಂಡು ಹೋಟೆಲ್, ಬೇಕರಿ, ಫ್ಯಾಕ್ಟರಿಗಳಿಗೆ ಸೇರಿ ಇನ್ನೂ ಅನೇಕ ಕಡೆ ೨ ಸಾವಿರಕ್ಕೂ ಹೆಚ್ಚು ಮೊತ್ತಕ್ಕೆ ಮಾರಾಟ ಮಾಡುತ್ತಿದೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಮಧುಗಿರಿ ಡಿವೈಎಸ್ಪಿ ಮಂಜುನಾಥ್, ಸಿಪಿಐ ಅನಿಲ್, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ಸಿಬ್ಬಂದಿ ಎಎಸೈ ಗಂಗಾಧರಪ್ಪ, ಪೇದೆಗಳಾದ ದೊಡ್ಡಲಿಂಗಯ್ಯ, ಮೋಹನ್, ದಯಾನಂದ್, ರಾಮಚಂದ್ರ, ನವೀನ್, ಸಿದ್ದರಾಮು ಸೇರಿ ಇತರರು ಇದ್ದರು.

-----------

೦೮ ಕೊರಟಗೆರೆ:-