ಸಾರಾಂಶ
ರಾಮನಗರ: ಜಿಲ್ಲೆಯ ಜಲಮೂಲಗಳಲ್ಲಿ ಒಂದಾದ ಮಂಚನಬೆಲೆ ಜಲಾಶಯದ ಎಡದಂಡೆ ನಾಲೆಯ ಸ್ವಚ್ಛತಾ ಕಾರ್ಯ ಹಾಗೂ ನಾಲೆಯ ಸ್ಥಿತಿ ಗತಿಯನ್ನು ಶಾಸಕ ಇಕ್ಬಾಲ್ ಹುಸೇನ್ ಶನಿವಾರ ವೀಕ್ಷಣೆ ಮಾಡಿದರು.
ಬೆಳ್ಳಂಬೆಳಗ್ಗೆಯೇ ಮಂಚನಬೆಲೆ ಜಲಾಶಯ ಬಳಿ ಎಡದಂಡೆ ನಾಲೆಯಲ್ಲಿ ಕಾಲ್ನಡಿಗೆ ಪ್ರಾರಂಭಿಸಿದ ಶಾಸಕ ಇಕ್ಬಾಲ್ ಹುಸೇನ್, ಸುಮಾರು10ಕ್ಕೂ ಹೆಚ್ಚು ಕಿಲೋ ಮೀಟರ್ ದೂರದವರೆಗೆ ನಾಲೆಯನ್ನು ವೀಕ್ಷಿಸಿದರು. ಜನಪ್ರತಿನಿಧಿಗಳು ಹಾಗೂ ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ಗಳು ಶಾಸಕರಿಗೆ ಸಾಥ್ ನೀಡಿದರು.ನಾಲೆಯೊಳಗೆ ನಡೆದಿರುವ ಸ್ವಚ್ಛತಾ ಕಾರ್ಯ ಮತ್ತು ನಾಲೆಯ ಗುಣಮಟ್ಟ ನೋಡಿದ ಶಾಸಕರು, ನಾಲೆಯಲ್ಲಿ ಆಗಬೇಕಾಗಿರುವ ಕಾಮಗಾರಿ, ಹೂಳು, ರೈತರ ಸಮಸ್ಯೆಗಳನ್ನು ಅಧಿಕಾರಿಗಳಲ್ಲಿ ಪಟ್ಟಿ ಮಾಡಿಸಿದರು. ಈ ವೇಳೆ ಸ್ಥಳದಲ್ಲಿ ರೈತರಿಗಾಗುವ ತೊಂದರೆಗಳನ್ನೂ ಆಲಿಸಿ, ಅವುಗಳ ನಿವಾರಣೆಗೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಇಕ್ಬಾಲ್ ಹುಸೇನ್, ನಾಲೆಗಳ ನೀರು ರೈತರಿಗೆ ಉಪಯೋಗವಾಗಬೇಕು. ಈ ಭಾಗದ ನೀರಿನ ಸಮಸ್ಯೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನಾಲೆಗಳನ್ನು ಖುದ್ದು ವೀಕ್ಷಣೆ ಮಾಡಿದ್ದೇನೆ. ಎಡ ಹಾಗೂ ಬಲ ದಂಡೆ ನಾಲೆಗಳ ಭೇಟಿ ವೇಳೆ ಸಮಸ್ಯೆಗಳನ್ನು ಅರಿತಿದ್ದೇನೆ. ಅಗತ್ಯವಿರುವ ಕಡೆಗಳಲ್ಲಿ ನಾಲೆಗಳ ದುರಸ್ತಿ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.ಮಂಚನಬೆಲೆ ಜಲಾಶಯದ ಎರಡು ನಾಲೆಗಳು ಸಾರ್ವಜನಿಕರ ಆಸ್ತಿಯಾಗಿದ್ದು, ಅವುಗಳನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಸಹ ನಮ್ಮೆಲ್ಲರ ಮೇಲಿದೆ. ಎರಡು ನಾಲೆಗಳಿಗೆ ಸುಮಾರು 30 ವರ್ಷದ ಇತಿಹಾಸವಿದೆ. ನಾಲೆಗಳಲ್ಲಿ ನೀರು ಹರಿದರೆ ರೈತರು ತಮ್ಮ ಬದುಕನ್ನು ಕಟ್ಟಿಕೊಳ್ಳಬಹುದೆಂಬ ಕನಸು ಕಟ್ಟಿಕೊಂಡಿದ್ದರು. ಆದರೆ, ಇದುವರೆಗೂ ಅವರ ನಿರೀಕ್ಷೆ ಸಾಕಾರವಾಗಿಲ್ಲ. ನಮಗೆ ಅವರು ಆಶೀರ್ವಾದ ಮಾಡಿದ ಮೇಲೆ ಜಿಲ್ಲೆಯ, ರೈತರ ಮಕ್ಕಳಾಗಿ ಅವರ ಕನಸನ್ನು ಸಾಕಾರ ಮಾಡಲು ಮಂಚನಬೆಲೆ ಜಲಾಶಯದ ಎಡ ಮತ್ತು ಬಲದಂಡೆ ನಾಲೆಗಳನ್ನು ಸ್ವಚ್ಛತೆ ಮಾಡಿ ನೀರು ಹಾಯಿಸುವ ಕೆಲಸಕ್ಕೆ ಆದ್ಯತೆ ನೀಡುತ್ತಿದ್ದೇವೆ ಎಂದು ಹೇಳಿದರು.
ಈ ಹಿಂದೆ ನಾಲೆಗಳ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿದಾಗ ನಾಲೆಗಳಲ್ಲಿ ಮುಳ್ಳು ಗಿಡಗಂಟಿ, ಮಣ್ಣು ತುಂಬಿದ್ದ ಹೀನಾಯ ಸ್ಥಿತಿ ನೋಡಿ ಸುಮಾರು 20 ಕಿ.ಮೀ ದೂರ ಕಾಯಕಲ್ಪ ಕಲ್ಪಿಸಲಾಗಿದ್ದು, ಇನ್ನು ಹದಿನೈದು ದಿನಗಳಲ್ಲಿ ಪ್ರಾಯೋಗಿಕವಾಗಿ ನೀರು ಬಿಡಲಾಗುವುದು ಎಂದು ಇಕ್ಬಾಲ್ ಹುಸೇನ್ ಹೇಳಿದರು.ಬೇಸಿಗೆ ಸಮೀಪಿಸುತ್ತಿದ್ದು ಜಲಾಶಯದಿಂದ ನಾಲೆಗಳಲ್ಲಿ ಶಾಶ್ವತವಾಗಿ ನೀರು ಹರಿಯುವಂತೆ ಮಾಡುವ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು. ಇದರಿಂದ ಸಾವಿರಾರು ಎಕರೆಗಳ ಅಚ್ಚುಕಟ್ಟು ಕೃಷಿ ಪ್ರದೇಶಗಳಿಗೆ ನೀರುಣಿಸಬಹುದಾಗಿದೆ. ಜೊತೆಗೆ ಅಗತ್ಯಬಿದ್ದರೆ ಕುಡಿಯುವ ನೀರಿಗೂ ಬಳಕೆ ಮಾಡಲು ಚಿಂತನೆ ನಡೆಸಲಾಗುವುದು ಎಂದರು.
ನಾಲೆಗಳ ನಿರ್ಮಾಣ ಸಮಯದಲ್ಲಿ ರೈತರ ಭೂಮಿಗೆ ಪರಿಹಾರ ನೀಡಿ ಸ್ವಾಧೀನ ಪಡಿಸಿಕೊಂಡಿರುವ ಭೂಮಿ ಮತ್ತು ಒತ್ತುವರಿ ಭೂಮಿಗಳು ಸರ್ಕಾರಿ ಸ್ವತ್ತಾಗಿವೆ. ಆ ಸ್ಥಳಗಳನ್ನು ನಿಗಮದ ಅಧಿಕಾರಿಗಳು ಇಲಾಖೆ ವಶಕ್ಕೆ ಪಡೆಯಲು ಸೂಕ್ತ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.ಮಂಚನಬೆಲೆ ಎರಡು ನಾಲೆಗಳು ಸಹ ಸಾರ್ವಜನಿಕರ ಆಸ್ತಿಯಾಗಿದ್ದು, ಅವುಗಳ ಬಗ್ಗೆ ಆಗಾಗ್ಗೆ ಆಸಕ್ತಿ ವಹಿಸದಿದ್ದರೆ, ಸಮಸ್ಯೆಗಳು ಎದುರಾಗುತ್ತವೆ ಎಂಬುದಕ್ಕೆ ನಾಲೆಗಳ ದುಸ್ಥಿತಿಯೇ ನಿದರ್ಶನವಾಗಿದೆ. ಅಂತಹ ಪರಿಸ್ಥಿತಿ ಇಲ್ಲಿನ ನಾಲೆಗಳಲ್ಲಿ ಕಣ್ಣಾರೆ ಕಂಡಿದ್ದೇವೆ. ತಿಪ್ಪಗೊಂಡನಹಳ್ಳಿಯಿಂದ ಮಂಚನಬೆಲೆ ಜಲಾಶಯಕ್ಕೆ ಕೊಳಚೆ ನೀರು ಬರುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಕೊಳಚೆ ನೀರು ಬರುವುದನ್ನು ತಡೆಯಲು ಕ್ರಮ ವಹಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಇಕ್ಬಾಲ್ ಹುಸೇನ್ ಉತ್ತರಿಸಿದರು.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ನಟರಾಜು, ರಾಮನಗರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಗ್ರಾಪಂ ಉಪಾಧ್ಯಕ್ಷರಾದ ಚಿಕ್ಕಸ್ವಾಮಿ, ವೀರಭದ್ರಸ್ವಾಮಿ (ಸ್ವಾಮಿ), ಮುಖಂಡರಾದ ವಾಸು, ಆಂಜನಪ್ಪ, ಉಮಾಶಂಕರ್, ಜಯ ಕರ್ನಾಟಕ ರವಿ, ಎಂ.ಎಚ್.ರಂಜಿತ್, ಕಗ್ಗಲ್ಲಯ್ಯ, ಮುಕುಂದ, ರಘು, ಬೈರೇಗೌಡ, ಅನಿಲ್ ಜೋಗೀಂದರ್ , ಲೋಕೇಶ್, ಶ್ರೀನಿವಾಸ್, ವಸೀಂ, ವಸಂತ, ರೈಡ್ ನಾಗರಾಜು, ಗಂಗಾಧರ್, ಪ್ರಕಾಶ, ಕಾವೇರಿ ನೀರಾವರಿ ನಿಗಮದ ಇಇ ಮೋಹನ್, ಎಇಇ ಉಮೇರಾ, ಎಂಜಿನಿಯರ್ ಹೇಮಂತ್ ಸೇರಿದಂತೆ ಹಲವರು ಹಾಜರಿದ್ದರು.ಕೋಟ್ ...........
ಮಾಗಡಿ ಕ್ಷೇತ್ರಕ್ಕೆ ಮಂಚನಬೆಲೆ ಮತ್ತು ವೈ.ಜಿ.ಗುಡ್ಡಾ ಜಲಾಶಯ ಕುಡಿಯುವ ನೀರಿನ ಜೀವಸೆಲೆ ಇದೆ. ಹಾಗಾಗಿ ಎಡ ಮತ್ತು ಬಲ ದಂಡೆ ನಾಲೆಗಳಿಗೆ ನೀರು ಹಾಯಿಸುವ ಕೆಲಸಕ್ಕೆ ಶಾಸಕ ಬಾಲಕೃಷ್ಣರ ಸಹಮತವಿದೆ. ನಾಲೆಗಳಿಗೆ ನೀರು ಬಿಡುವ ಸಂಬಂಧ ಕಾಡಾ ಜೊತೆ ಸಭೆ ನಡೆಸುವ ಅನಿವಾರ್ಯತೆ ಬರುವುದಿಲ್ಲ ಎಂದು ಭಾವಿಸಿದ್ದೇನೆ. ಜಿಲ್ಲೆಯ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಇದ್ದೀವಿ. ಎಲ್ಲರೂ ಸೇರಿ ಒಟ್ಟಾಗಿಯೇ ನೀರು ಹರಿಸುತ್ತೇವೆ.- ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ ಕ್ಷೇತ್ರ
ಬಾಕ್ಸ್ ..............ಯುವಜನತೆ ಕೃಷಿಯತ್ತ ಗಮನಹರಿಸಿ
ಗ್ರಾಮೀಣ ಭಾಗದ ವಿದ್ಯಾವಂತ ಯುವಕರು ಉದ್ಯೋಗ ಹರಸಿ ಮಹಾನಗರ ಬೆಂಗಳೂರಿನತ್ತ ಬದುಕು ಕಟ್ಟಿಕೊಳ್ಳಲು ವಲಸೆ ಹೋಗುತ್ತಿದ್ದಾರೆ. ಅದನ್ನು ತಪ್ಪಿಸಿ ಕೃಷಿಯಲ್ಲೂ ಕಾಯಕ ಕಂಡುಕೊಳ್ಳಲು ನೆರವಾಗಲು ಚಾನೆಲ್‌ಗಳಲ್ಲಿ ನೀರು ಹರಿಸಲಾಗುತ್ತಿದೆ. ಇದರಿಂದ ಅವರ ಮೂಲ ವೃತ್ತಿ ಕೃಷಿಗೆ ಅನುಕೂಲವಾಗಲಿದೆ. ಇಂದಿನ ದಿನಗಳಲ್ಲಿ ಆಧುನಿಕ ಕೃಷಿಯಲ್ಲಿ ಉತ್ತಮ ಅಭಿವೃದ್ಧಿ ಕಾಣುತ್ತಿದೆ. ಯುವಜನತೆ ಕೃಷಿಯತ್ತಲೂ ಗಮನಹರಿಸಬೇಕು. ಕೃಷಿಯನ್ನು ಪ್ರಗತಿಪಥದತ್ತ ಕೊಂಡೊಯ್ಯಬೇಕು ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.8ಕೆಆರ್ ಎಂಎನ್ 1,2.ಜೆಪಿಜಿ
1.ಮಂಚನಬೆಲೆ ಎಡದಂಡೆ ನಾಲೆ ಸ್ವಚ್ಛತೆ ಮತ್ತು ಸ್ಥಿತಿಗತಿಯನ್ನು ಶಾಸಕ ಇಕ್ಬಾಲ್ ಹುಸೇನ್ ಕಾಲ್ನಡಿಗೆಯಲ್ಲಿ ಸಾಗಿ ವೀಕ್ಷಿಸಿದರು.2.ಸ್ವಚ್ಛಗೊಂಡಿರುವ ಮಂಚನಬೆಲೆ ಎಡದಂಡೆ ನಾಲೆ.