ಪಂಚ ರಾಜ್ಯ ಚುನಾವಣೆ ಬಳಿಕ ಭಾನುವಾರ ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೈಸೂರು ಪೇಟ ತೊಡಿಸಿ, ರೇಷ್ಮೆ ಶಾಲು ಹೊದಿಸಿ ಗೌರವ ಸಮರ್ಪಿಸಲಾಗುವುದು ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ.

ಬೆಂಗಳೂರು : ಪಂಚ ರಾಜ್ಯ ಚುನಾವಣೆ ಬಳಿಕ ಭಾನುವಾರ ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೈಸೂರು ಪೇಟ ತೊಡಿಸಿ, ರೇಷ್ಮೆ ಶಾಲು ಹೊದಿಸಿ ಗೌರವ ಸಮರ್ಪಿಸಲಾಗುವುದು ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ.

ಜನತೆಯ ಪರವಾಗಿ ಅಭಿನಂದನೆ

ಪ್ರಧಾನಿ ನರೇಂದ್ರ ಮೋದಿ ಅವರ ಆಗಮನದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಮತ್ತಿತರ ಮುಖಂಡರೊಂದಿಗೆ ಎಚ್‌ಎಎಲ್‌ ವಿಮಾನ ನಿಲ್ದಾಣದ ಬಳಿ ಪೂರ್ವತಯಾರಿ ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್‌, ನರೇಂದ್ರ ಮೋದಿ ಅವರು ಪಂಚ ರಾಜ್ಯ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಸೇರಿ ವಿವಿಧ ರಾಜ್ಯಗಳಲ್ಲಿ ಬಿಜೆಪಿಗೆ ದೊಡ್ಡ ಗೆಲುವು ತಂದು ಕೊಟ್ಟಿದ್ದಾರೆ. ಅವರ ವರ್ಚಸ್ಸು, ಅವರ ಜಾಣ್ಮೆ, ಚಾಣಕ್ಯತನ ನಮಗೆ ಉಪಯೋಗವಾಗಿದೆ. ಮೇ 10ರಂದು ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಲಾಗುವುದು ಎಂದರು.

30 ನಿಮಿಷಗಳ ಕಾಲ ಭಾಷಣ

ಎಚ್‌ಎಎಲ್‌ ವಿಮಾನನಿಲ್ದಾಣಕ್ಕೆ ಬರುವ ನರೇಂದ್ರ ಮೋದಿ ಅವರು 30 ನಿಮಿಷಗಳ ಕಾಲ ಭಾಷಣ ಮಾಡುತ್ತಾರೆ. ಈ ವೇಳೆ ಅವರಿಗೆ ಮೈಸೂರು ಪೇಟ ತೊಡಿಸಿ, ರೇಷ್ಮೆ ಶಾಲು ಹೊದಿಸಿ ಗೌರವಿಸುತ್ತೇವೆ. ಈ ಕಾರ್ಯಕ್ರಮದಲ್ಲಿ ಸುಮಾರು 15-20 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್, ಮಾಜಿ ಮೇಯರ್ ಗೌತಮ್‌ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.