ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಇತರ ದಾನಿಗಳ ಸಹಕಾರದೊಂದಿಗೆ ನಗರದ ಕೆಳಗಿನ ಸರಿಪಲ್ಲದ ಸರಸ್ವತಿ ಫ್ರೆಂಡ್ಸ್ ಕ್ಲಬ್ ಬಳಿ ನಿರ್ಮಾಣಗೊಂಡ ‘ನಮೋ ನಿವಾಸ’ದ ಹಸ್ತಾಂತರ ಕಾರ್ಯಕ್ರಮ ಸೋಮವಾರ ನಡೆಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಪ್ರಾಂತ ಸಹ ಕಾರ್ಯವಾಹ ಪ್ರಕಾಶ್ ಪಿ.ಎಸ್. ಅವರು ಮನೋಜ್ ದಂಪತಿಗೆ ಮನೆಯ ಕೀಲಿ ಕೈ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಸಂಘದ ಶತಾಬ್ದಿ ಹಿನ್ನೆಲೆಯಲ್ಲಿ ಸೇವಾ ಚಟುವಟಿಕೆ ಭಾಗವಾಗಿ ಈ ‘ನಮೋ ನಿವಾಸ’ ನಿರ್ಮಾಣಗೊಂಡಿದೆ. ಶಾಸಕ ಕಾಮತ್ ಅವರ ವಿಶೇಷ ಮುತುವರ್ಜಿ ಸಹಿತ ಎಲ್ಲರ ನೆರವಿನೊಂದಿಗೆ ಬಹಳ ಅಚ್ಚುಕಟ್ಟಾಗಿ ನಿರ್ಮಾಣಗೊಂಡಿದೆ ಎಂದು ಹೇಳಿದರು.ಸಂಘದ ವಿಭಾಗ ಕಾರ್ಯವಾಹ ಹರಿಕೃಷ್ಣ ಮಾತನಾಡಿ, ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ನಿರ್ಮಾಣವಾಗುತ್ತಿರುವ ಎಂಟನೇ ಮನೆ ಇದು. ಸಂಘದ ಸ್ವಯಂಸೇವಕ ಜನಪ್ರತಿನಿಧಿಯಾಗಿ ಅಭಿವೃದ್ಧಿ ಜತೆಗೆ ಜನ ಸೇವೆಯಲ್ಲಿ ನಿರತರಾಗಿದ್ದಾರೆ ಎಂದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, 2018-19ರಲ್ಲಿ ಪ್ರಕೃತಿ ವಿಕೋಪದಿಂದಾಗಿ ಈ ಮನೆಯು ಸಂಪೂರ್ಣ ಕುಸಿದಿತ್ತು. ಇಂತಹ ಅವಘಡಗಳಿಗೆ ಮೊದಲು ಸರ್ಕಾರಗಳು ನೀಡುತ್ತಿದ್ದದ್ದು ಕೇವಲ 1.20 ಲಕ್ಷ ರು. ಮಾತ್ರ. ಆದರೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಸಂದರ್ಭ ಪರಿಹಾರದ ಮೊತ್ತವನ್ನು 5 ಲಕ್ಷ ರು.ಗೆ ಏರಿಸಿದ್ದು ಬಡವರ ಪಾಲಿಗೆ ಐತಿಹಾಸಿಕ ನಿರ್ಧಾರ. ಆದರೆ ಇಂದಿನ ಕಾಂಗ್ರೆಸ್ ಸರ್ಕಾರ ಆ ಮೊತ್ತವನ್ನು 1.20 ಲಕ್ಷ ರು.ಗೆ ಇಳಿಸಿದೆ. ಸರ್ಕಾರದ ಪರಿಹಾರ, ದಾನಿಗಳ ಸಹಕಾರ ಹಾಗೂ ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು ಅವರ ವಿಶೇಷ ಪ್ರಯತ್ನದಿಂದ ಈ ನಮೋ ನಿವಾಸ ನಿರ್ಮಾಣವಾಗಿದೆ ಎಂದರು.ಪ್ರಮುಖರಾದ ಸತೀಶ್ ಕುಂಪಲ, ಪ್ರೇಮಾನಂದ ಶೆಟ್ಟಿ, ರಮೇಶ್ ಹೆಗ್ಡೆ, ರೂಪಶ್ರೀ ಪೂಜಾರಿ, ಅಶ್ವಿತ್ ಕೊಟ್ಟಾರಿ, ಪ್ರವೀಣ್ ನಿಡ್ಡೇಲ್, ಮೋಹನ್ ಪೂಜಾರಿ, ಕಿರಣ್ ರೈ, ರಾಮ್ ಪ್ರಸಾದ್, ವಿಜಯ್ ಭಂಡಾರಿ, ನರೇಶ್ ಸರಿಪಲ್ಲ, ಸುರೇಶ್ ಆಚಾರ್, ಶರಣ್ ಸರಿಪಲ್ಲ, ನಿತ್ಯಾನಂದ, ದೀಪಕ್ ಪೈ, ಅಶೋಕ್ ಉಮಿಕಾನ್, ಈಶ್ವರ್.ಕೆ, ವಿಶ್ವನಾಥ್, ಕಿಶೋರ್, ಮಹಾನಗರ ಪಾಲಿಕೆ ನಿಕಟಪೂರ್ವ ಸದಸ್ಯರು, ಸ್ಥಳೀಯರು ಇದ್ದರು.