ಜನತೆಯ ಸಮಸ್ಯೆಗೆ ಸ್ಪಂದಿಸಲು ‘ಜನತಾ ದರ್ಶನ’

| Published : Dec 21 2023, 01:15 AM IST

ಸಾರಾಂಶ

ಗ್ರಾಮೀಣ ಭಾಗದ ಜನರು ತಮ್ಮ ಸಮಸ್ಯೆಗಳನ್ನು ಹೊತ್ತು ಇಲಾಖಾವಾರು ಹಾಗೂ ತಾಲೂಕು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರದ ಆಡಳಿತ ಯಂತ್ರವನ್ನು ಜನರ ಬಳಿಯೇ ತೆಗೆದುಕೊಂಡು ಹೋಗಲು ಈ ಜನತಾ ದರ್ಶನ ಹೆಚ್ಚು ಸಹಕಾರಿಯಾಗಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕ್ಷೇತ್ರದಲ್ಲಿ ಜನ ಸಾಮಾನ್ಯರು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಅವರ ಸ್ಥಳದಲ್ಲೆ ನೀಗಿಸುವ ಸಲುವಾಗಿ ಜನತಾದರ್ಶನವನ್ನು ಹಮ್ಮಿಕೊಳ್ಳಲಾಗಿದೆ, ಇಲ್ಲಿ ನೀಡುವ ದೂರುಗಳಿಗೆ ಎರಡು ದಿನಗಳಲ್ಲೆ ಬಗೆಹರಿಸಲಾಗುವುದು ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಭರವಸೆ ನೀಡಿದರು.

ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಮಹತ್ವಕಾಂಕ್ಷೆ ಯೋಜನೆಯಾದ ಜನತಾ ದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶೀಘ್ರದಲ್ಲೇ ಯುವ ನಿಧಿ ಆರಂಭ

ಗ್ರಾಮೀಣ ಭಾಗದ ಜನರು ತಮ್ಮ ಸಮಸ್ಯೆಗಳನ್ನು ಹೊತ್ತು ಇಲಾಖಾವಾರು ಹಾಗೂ ತಾಲೂಕು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರದ ಆಡಳಿತ ಯಂತ್ರವನ್ನು ಜನರ ಬಳಿಯೇ ತೆಗೆದುಕೊಂಡು ಹೋಗಲು ಈ ಜನತಾ ದರ್ಶನ ಹೆಚ್ಚು ಸಹಕಾರಿಯಾಗಿದೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಚುನಾವಣೆಗೂ ಮುನ್ನ ನೀಡಿದ ಐದು ಗ್ಯಾರಂಟಿಗಳನ್ನು ಕೊಟ್ಟ ಮಾತಿನಂತೆ ಐದರಲ್ಲಿ ನಾಲ್ಕನ್ನು ಈಡೇರಿಸಿದೆ, ಉಳಿದ ಯುವನಿಧಿಯನ್ನು ಇಷ್ಟರಲ್ಲೆ ಆರಂಭಿಸಲಾಗವುದು ಎಂದರು.

ರಾಜ್ಯದಲ್ಲಿರುವುದು ಜನಪರ, ರೈತಪರ ಸರ್ಕಾರವಾಗಿದೆ, ಸರ್ಕಾರಕ್ಕೆ ಜನರನ್ನು ತಮ್ಮ ಸಮಸ್ಯೆಗಳಿಗೆ ವಿನಾಕಾರಣ ಅಲೆಸುವುದನ್ನು ತಪ್ಪಿಸಲು ಜನತಾ ದರ್ಶನ ರೂಪಿಸಲಾಗಿದೆ. ಇದರಿಂದ ಸರ್ಕಾರಕ್ಕೆ ಉತ್ತಮ ಹೆಸರು ಬಂದಿದೆ. ಇಲ್ಲಿ ಸಲ್ಲಿಸುವ ಬಹುತೇಕ ಸಮಸ್ಯೆಗಳನ್ನು ಸ್ಥಳದಲ್ಲೆ ನೀಗಿಸಲು ಶ್ರಮಿಸಲಾಗುವುದು ಇಲ್ಲವೆ ಕೇವಲ ಎರಡು ದಿನಗಳೊಳಗೆ ನೀಗಿಸಲು ಅಧಿಕಾರಿಗಳಿಗೆ ನಿರ್ದೇಶ ನೀಡಲಾಗಿದೆ ಎಂದರು.

ವಿವಿಧ ಸೌಲಭ್ಯಗಳ ಮಾಹಿತಿ

ವಿವಿಧ ಇಲಾಖೆಗಳಿಂದ ರೈತರಿಗೆ ಸಿಗುವ ಅನೇಕ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲು ಜನತಾ ದರ್ಶನ ವೇದಿಕೆ ಪಕ್ಕದಲ್ಲೆ ಸ್ಟಾಲ್‌ಗಳನ್ನು ಹಾಕಲಾಗಿದೆ. ಅಲ್ಲಿ ರೈತರು ಹೋಗಿ ಮಾಹಿತಿ ಪಡೆಯಬೇಕು ಹಾಗೂ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸ್ವಾವಲಂಭಿಗಳಾಗಬೇಕೆಂದು ತಿಳಿಸಿದರು.

ಇಂದಿನ ಜನತಾದರ್ಶನದಲ್ಲಿ ೧೭೦ ದೂರುಗಳು ಸಲ್ಲಿಕೆಯಾದವು. ಇದರಲ್ಲಿ ಬಹುತೇಕ ದೂರುಗಳು ಕಂದಾಯ ಇಲಾಖೆಗೆ ಸೇರಿವೆ. ಈ ವೇಳೆ ಜಿಪಂ ಸಿಇಒ ಪದ್ಮಬಸಂತಪ್ಪ,ಉಪವಿಭಾಗಾಧಿಕಾರಿ ವೆಂಕಟಲಕ್ಷ್ಮೀ, ತಹಸೀಲ್ದಾರ್ ಯು.ರಶ್ಮಿ,ತಾಪಂ ಇಒ ರವಿಕುಮಾರ್,ಪುರಸಭೆ ಮುಖ್ಯಾಧಿಕಾರಿ ಎಂ.ಮೀನಾಕ್ಷಿ,ಬಿಇಒ ಸುಕನ್ಯ,ಡಿವೈಎಸ್ಪಿ ಪಾಂಡುರಂಗ ಸೇರಿದಂತೆ ಎಲ್ಲಾ ಇಲಾಖೆ ಅಧಿಕಾರಿಗಳು ಹಾಜರಿದ್ದರು.