23ರಿಂದ ಎತ್ತಿನ ಗಾಡಿಗಳ ಮಿಂಚೇರಿ ಉತ್ಸವ

| Published : Dec 21 2023, 01:15 AM IST

ಸಾರಾಂಶ

23ರಿಂದ ಮಿಂಚೇರಿ ಎತ್ತಿನ ಗಾಡಿ ಸ್ಪರ್ಧೆಯು ಬಚ್ಚಬೋರನಹಟ್ಟಿಯಲ್ಲಿ ನಡೆಯಲಿದೆ

ಚಿತ್ರದುರ್ಗ: ಬುಡಕಟ್ಟು ಸಮುದಾಯದ ಗೋರಕ್ಷಕ, ನುಡಿದಂತೆ ನಡೆದ ಸತ್ಯ ಸಂತ ಗಾದ್ರಿಪಾಲ ನಾಯಕ ಸ್ವಾಮಿಯ ಸಾಲು ಎತ್ತಿನ ಗಾಡಿಗಳ ಮಿಂಚೇರಿ ಮಹೋತ್ಸವ ತಾಲೂಕಿನ ಬಚ್ಚಬೋರನಹಟ್ಟಿಯಿಂದ ಡಿ.23ರಿಂದ ಆರಂಭಗೊಳ್ಳಲಿದ್ದು, 28ರಂದು ಮುಕ್ತಾಯಗೊಳ್ಳಲಿದೆ. ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಈ ಮಿಂಚೇರಿ ಉತ್ಸವಕ್ಕೆ ಈ ಬಾರಿ ಹಿಂದೆಂದಿಗಿಂತಲೂ ವಿಶೇಷದ ಸಾಂಸ್ಕೃತಿಕ ಸಂಭ್ರಮದ ಸ್ಪರ್ಶ ನೀಡಲಾಗುತ್ತಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜು ಹೇಳಿದರು.

ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಮಿಂಚೇರಿ ಉತ್ಸವ ನಡೆಯುತ್ತಾ ಬಂದಿದೆ. ಇದು ಬುಡಕಟ್ಟು ಜನಾಂಗದ ಸಂಸ್ಕೃತಿಯಾಗಿದೆ. ಚಿತ್ರದುರ್ಗ ತಾಲೂಕಿನ ಬಚ್ಬೋರನಹಟ್ಟಿಯಲ್ಲಿ ಡಿ.23 ಶನಿವಾರ ಬೆಳಗ್ಗೆ 7 ಗಂಟೆಗೆ ದೇವರ ಮಜ್ಜನ, ಗಂಗಾಪೂಜೆ, 11.30ರಿಂದ ಮಿಂಚೇರಿ ಯಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ಅಂದು ಬಚ್ಚಬೋರಯ್ಯಹಟ್ಟಿಯಿಂದ ನಿರ್ಗಮಿಸಿ, ಕಕ್ಕಲು ಬೆಂಚಿನಲ್ಲಿ ಪೂಜೆ ಸಲ್ಲಿಸಿ ಸಂಜೆ 7 ಗಂಟೆಗೆ ಕ್ಯಾಸಪುರದ ಬಯಲಿನಲ್ಲಿ ಬೀಡು ಬೀಡಲಾಗುವುದು. ಡಿ.24ರಂದು ಯಾತ್ರೆ ಮುಂದುವರೆದು ಮಧ್ಯಾಹ್ನ 12ಕ್ಕೆ ಸಿರಿಗೆರೆ ಡಿ. ಮದಕರಿಪುರ ವರತಿನಾಯಕ ಕರೆಯ ದಂಡೆಯಲ್ಲಿ ವಿಶ್ರಾಂತಿ ಪಡೆದು, ಅಲ್ಲಿಂದ ಮಿಂಚೇರಿಗೆ ಪ್ರಯಾಣ ನಡೆಸಿ ಸಂಜೆ 5 ಗಂಟೆಗೆ ಸ್ವಾಮಿಯ ಮೀಸಲು ಹಾಲಿನ ಕಂಬಿಯ ಪೂಜೆ ನಡೆಯಲಿದೆ ಎಂದರು.

ಡಿ.25ರಂದು ಬೆಳಗ್ಗೆ 5ಕ್ಕೆ ಹುಲಿರಾಯ ಮತ್ತು ನಾಯಕರ ಸಮಾಧಿಗೆ ಪೂಜೆ, ಡಿ.26ರಂದು ಬೆಳಗ್ಗೆ 7ಕ್ಕೆ ಭಿಕ್ಷೆ ಸ್ವೀಕಾರ, 11ಕ್ಕೆ ಸ್ವಾಮಿಯ ಸನ್ನಿಧಿಯಲ್ಲಿ ಪ್ರಸಾದ ಸ್ವೀಕಾರ, ಮಧ್ಯಾಹ್ನ 2ಕ್ಕೆ ಮಿಂಚೇರಿ ಸುಕ್ಷೇತ್ರದಿಂದ ನಿರ್ಗಮನವಾಗಿ ರಾತ್ರಿ 7ಕ್ಕೆ ಕಡ್ಲೇಗುದ್ದು ಬಿಳಿಯ ಸಿದ್ದರ ಗುಂಡಿಗೆ ಆಗಮನ. ಡಿ.27ರಂದು ಕ್ಯಾಸಾಪುರದ ಬಳಿಯ ಜಿನಿಗಿ ಹಳ್ಳಕ್ಕೆ ಗಂಗಾಪೂಜೆ, ಮಧ್ಯಾಹ್ನ 2ಕ್ಕೆ ಚಿತ್ರದುರ್ಗಕ್ಕೆ ಮಿಂಚೇರಿ ಯಾತ್ರೆಯ ಆಗಮನವಾಗುತ್ತದೆ. ನಂತರ ರಾಜ ಬೀದಿಗಳಲ್ಲಿ ಮೆರವಣಿಗೆ, ಸಂಜೆ ಕಕ್ಕಲು ಬೆಂಚಿಯಲ್ಲಿ ಬೀಡು ಬಿಡಲಾಗುವುದು. ಡಿ.28ರಂದು ಸಂಜೆ 7ಕ್ಕೆ ಗ್ರಾಮದ ಹೊಸ್ತಿಲು ಪೂಜೆಯೊಂದಿಗೆ ಸ್ವ-ಸ್ಥಾನಕ್ಕೆ ಮರಳಲಾಗುವುದು.

ಡಿ.23ರಂದು ಬೆಳಗ್ಗೆ 10 ಗಂಟೆಗೆ ಮಿಂಚೇರಿ ಉದ್ಘಾಟನಾ ಮಹೋತ್ಸವ ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ಸಿ.ವಿರೇಂದ್ರ, ಎಂ.ಚಂದ್ರಪ್ಪ, ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್, ಜಿ.ಎಚ್.ತಿಪ್ಪಾರೆಡ್ಡಿ, ಜಿಲ್ಲಾಧಿಕಾರಿ ದಿವ್ಯಾಪ್ರಭು, ಜಿಲ್ಲಾ ರಕ್ಷಣಾಧಿಕಾರಿ ಧರ್ಮೆಂದ್ರ ಕುಮಾರ್ ಮೀನಾ, ಜಿಪಂ ಸಿಇಒ ಸೋಮಶೇಖರ್, ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

ಡಿ.27ರಂದು ಚಿತ್ರದುರ್ಗ ಪ್ರವೇಶ ಮಾಡಲಿರುವ ಮಿಂಚೇರಿ ಯಾತ್ರೆಯಲ್ಲಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಶ್ರೀಗಳು, ಬಸವ ಪ್ರಭು ಶ್ರೀಗಳು, ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು, ಯಾದಾವನಂದ ಶ್ರೀಗಳು, ಶಿವಲಿಂಗಾನಂದ ಶ್ರೀಗಳು, ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು, ಕೇತೇಶ್ವರ ಶ್ರೀಗಳು, ಬಸವ ಮಾಚಿದೇವ ಶ್ರೀಗಳು, ಸಚಿವರುಗಳಾದ ಡಿ.ಸುಧಾಕರ್, ಬಿ.ನಾಗೇಂದ್ರ, ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಮಾಜಿ ಶಾಸಕರುಗಳು, ಅಧಿಕಾರಿಗಳು, ಭಾಗವಹಿಸಲಿದ್ದಾರೆ ಎಂದು ಕಾಂತರಾಜ್ ವಿವರಿಸಿದರು.

ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಎಚ್.ಜೆ.ಕೃಷ್ಣಮೂರ್ತಿ, ಗೋಪಾಲ ಸ್ವಾಮಿ ನಾಯಕ, ಬೋರಯ್ಯ, ನೆಲಗೆತನ ಬೋರಯ್ಯ, ಬಿ.ಬೋರಯ್ಯ, ಸಣ್ಣ ಬೋರಯ್ಯ, ರಮೇಶ್, ಬಸವರಾಜು, ಪಾಲಯ್ಯ, ಪ್ರಹ್ಲಾದ್, ಪಾಪಣ್ಣ, ಮೂರ್ತಿ, ದೀಪು, ಕಾಟಿಹಳ್ಳಿ ಕರಿಯಣ್ಣ, ಸಣ್ಣ ಹನುಮಂತಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.