ಸಾರಾಂಶ
ಮಹಾತ್ಮ ಗಾಂಧಿ ನರೇಗಾ ಯೋಜನೆ ಗ್ರಾಮೀಣಾಭಿವೃದ್ಧಿಗೆ ಸಹಕಾರಿಯಾಗುವುದರ ಜೊತೆಗೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹ ನೆರವು ನೀಡುತ್ತಿದೆ.
ವಿಜಯಪುರ: ಶಾಲಾಭಿವೃದ್ಧಿ ಹಾಗೂ ಗ್ರಾಮದ ಸರ್ವತೋಮುಖ ಪ್ರಗತಿಗೆ ನರೇಗಾ ಸಹಕಾರಿಯಾಗಿದೆ ಎಂದು ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಕಾಶೀಂಸಾಬ ಮಸಳಿ ಹೇಳಿದರು.
ತಾಲೂಕಿನ ನಾಗಠಾಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಶ್ಯಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಲಾದ ಅಡುಗೆ ಕೋಣೆ ಮೊದಲಾದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಮಹಾತ್ಮ ಗಾಂಧಿ ನರೇಗಾ ಯೋಜನೆ ಗ್ರಾಮೀಣಾಭಿವೃದ್ಧಿಗೆ ಸಹಕಾರಿಯಾಗುವುದರ ಜೊತೆಗೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹ ನೆರವು ನೀಡುತ್ತಿದೆ. ಶಾಲಾ ಆಟದ ಮೈದಾನ, ಶೌಚಾಲಯ, ಅಡುಗೆ ಕೋಣೆಯಂತಹ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ. ಗ್ರಾಮ ಪಂಚಾಯತಿ ಅಧಿಕಾರಿಗಳು, ಸದಸ್ಯರು ಮತ್ತು ಶಾಲಾ ಶಿಕ್ಷಕರು ಸಮನ್ವಯತೆಯಿಂದ ಈ ಮೇಲಿನ ಕಾಮಗಾರಿಗಳನ್ನು ಪಡೆಯಬಹುದು ಎಂದರು.ಗ್ರಾ.ಪಂ. ಉಪಾಧ್ಯಕ್ಷ ಬಸಪ್ಪ ಹಳ್ಳಿ, ಪಿಡಿಒ ಬಿ.ಆರ್. ರಾಠೋಡ್, ತಾಂತ್ರಿಕ ಸಂಯೋಜಕ ಪರಶುರಾಮ ಶಹಾಪುರ್, ಐಇಸಿ ಸಂಯೋಜಕ ರಾಘವೇಂದ್ರ ಭಜಂತ್ರಿ ಮುಂತಾದವರು ಇದ್ದರು.