ಕನ್ನಡಪ್ರಭ ವಾರ್ತೆ ರಾಮನಗರ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಸಾಮಾನ್ಯರಿಗೆ ಅಡುಗೆ ಅನಿಲ ಸಿಲಿಂಡರ್ ಗಳನ್ನು ಸಮರ್ಪಕವಾಗಿ ಪೂರೈಕೆ ಮಾಡಬೇಕೆಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಖಾಲಿ ಸಿಲಿಂಡರ್ ಮೇಲೆ ಕುಳಿತು ಸತ್ಯಾಗ್ರಹ ನಡೆಸಿದರು. ನಗರದ ಐಜೂರು ವೃತ್ತದಲ್ಲಿ ಕನ್ನಡಪರ ಸಂಘಟನೆಗಳೊಂದಿಗೆ ಖಾಲಿ ಸಿಲಿಂಡರ್ ಮೇಲೆ ಕುಳಿತು, ‘ನಿಲ್ಲಿಸಿ ನಿಲ್ಲಿಸಿ ಯುದ್ಧ ನಿಲ್ಲಿಸಿ’ ಎಂದು ಘೋಷಣೆಗಳೊಂದಿಗೆ ಸತ್ಯಾಗ್ರಹ ನಡೆಸಿದ ವಾಟಾಳ್ ನಾಗರಾಜ್ ರವರು, ಜನರ ಜೀವನ ಅಡುಗೆ ಅನಿಲದ ಮೇಲೆಯೇ ಅವಲಂಬಿಸಿದೆ. ಆದ್ದರಿಂದ ಗ್ಯಾಸ್ ಕೊರತೆಯಾಗದಂತೆ ಸರ್ಕಾರಗಳು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ , ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ನಿಯೋಗದಲ್ಲಿ ಅಮೆರಿಕಾ, ಇಸ್ರೇಲ್ ಹಾಗೂ ಇರಾನ್ ದೇಶಗಳ ನಾಯಕರನ್ನು ಭೇಟಿ ಮಾಡಿ ಮಹಾತ್ಮ ಗಾಂಧೀಜಿಯವರ ಶಾಂತಿ ಸಂದೇಶ ಸಾರಬೇಕು. ಜೊತೆಗೆ ಅವರ ತತ್ವ- ಸಿದ್ಧಾಂತಗಳಿಗೆ ಬದ್ಧರಾಗಿ ಯುದ್ಧ ನಿಲ್ಲಿಸುವಂತೆ ಮನವರಿಕೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಇನ್ನು 15 ದಿನದೊಳಗೆ ಕೊಲ್ಲಿ ರಾಷ್ಟ್ರಗಳ ಯುದ್ಧ ನಿಲ್ಲಬೇಕು, ಜನರಿಗೆ ಸಮರ್ಪಕವಾಗಿ ಗ್ಯಾಸ್ ಕೊಡಬೇಕು ಎಂದು ಹೇಳಿ ಅಖಂಡ ಕರ್ನಾಟಕ ಬಂದ್ ಮಾಡುತ್ತೇವೆ. ಸಿಲಿಂಡರ್ ಸಿಗದೆ ಕಂಗಾಲಾಗಿರುವ ಹೋಟೆಲ್ ಮಾಲೀಕರು ಭಯ ಪಡುವುದು ಬೇಡ. ಅವರೊಂದಿಗೆ ನಾವಿದ್ದೇವೆ. ಮುಂದಿನ ದಿನಗಳಲ್ಲಿ ಕನ್ನಡ, ರೈತ, ದಲಿತ ಸಂಘಟನೆಗಳು ಸೇರಿದಂತೆ ಎಲ್ಲ ಸಂಘಟನೆಗಳೊಂದಿಗೆ ಸಭೆ ನಡೆಸಿ ಬಂದ್ ಮಾಡುವ ಮೂಲಕ ದೇಶಕ್ಕೆ ಸಂದೇಶ ರವಾನಿಸುತ್ತೇವೆ ಎಂದು ಹೇಳಿದರು.ಅಮೆರಿಕಾದ ದಬ್ಬಾಳಿಕೆಯೇ ಯುದ್ಧಕ್ಕೆ ಕಾರಣ:
ಅಮೆರಿಕಾ - ಇಸ್ರೇಲ್ ಹಾಗೂ ಇರಾನ್ ರಾಷ್ಟ್ರಗಳ ನಡುವಿನ ಯುದ್ಧದಿಂದಾಗಿ ಭಾರತ ಮಾತ್ರವಲ್ಲದೆ ಪ್ರಪಂಚದಲ್ಲಿ ಭಯದ ವಾತಾವರಣ ನಿರ್ಮಾಣವಾಗಿ ಕರಿ ಛಾಯೆ ಆವರಿಸಿದೆ. ಅಮೆರಿಕಾದ ನೀತಿಗಳನ್ನು ಅತ್ಯಂತ ಗಂಭೀರವಾಗಿ ಚಿಂತನೆ ಮಾಡಬೇಕಿದೆ. ಟ್ರಂಪ್ ಒಂದು ದೇಶದ ಮಹಾನ್ ನಾಯಕನಾಗಿ ಇಡೀ ಪ್ರಪಂಚದ ಚಿಂತನೆ ಮಾಡಬೇಕಿತ್ತು. ಈ ಹಿಂದೆ ಕೆನಡಿ , ಒಬಾಮ, ಬೈಡನ್ ಅವರನ್ನು ನೋಡಿದ್ದೇವೆ. ಅವರ್‍ಯಾರು ಟ್ರಂಪ್ ನಂತೆ ಅವಿವೇಕನ, ಹುಚ್ಚುತನದಿಂದ ನಡೆದುಕೊಂಡಿರಲಿಲ್ಲ ಎಂದು ಟೀಕಿಸಿದರು.
ಯುದ್ಧದಿಂದಾಗಿ ಅಮೆರಿಕಾ, ಇಸ್ರೇಲ್ ಹಾಗೂ ಇರಾನ್ ಗೆ ಸಾಕಷ್ಟು ನಷ್ಟವಾಗಿದ್ದು, ಮಾನವ ಕುಲಕ್ಕೆ ಗೌರವವೇ ಇಲ್ಲದಂತಾಗಿದೆ. ವಿಮಾನಗಳ ಹಾರಾಟ ನಿಂತಿದ್ದು, ಹೋಟೆಲ್ ಗಳ ಮೇಲೆ ಬಾಂಬುಗಳು ಬಿದ್ದಿವೆ. ಸಾವಿರಾರು ಜನ ಅಮಾಯಕರು ಸಾವನ್ನಪ್ಪಿದ್ದಾರೆ. ಈ ಮೂರು ದೇಶಗಳು ಮತ್ತೆ ನಿರ್ಮಾಣಗೊಳ್ಳಲು ಶತಮಾನಗಳೇ ಬೇಕಾಗಿದೆ. ಯುದ್ಧದಿಂದ ಮೂರು ದೇಶಗಳ ಮಾತ್ರವಲ್ಲದೆ ಸುತ್ತಮುತ್ತಲ ದೇಶಗಳೂ ತೊಂದರೆಗೆ ಸಿಲುಕಿವೆ ಎಂದು ಬೇಸರಪಟ್ಟರು.
ಹಿಟ್ಲರ್ ಕಾಲದಲ್ಲಿ ನಡೆದ ರಷ್ಯಾ - ಜರ್ಮನ್ ಯುದ್ಧದ ನಂತರ ಉಂಟಾದ ಪರಿಣಾಮಗಳನ್ನು ನೋಡಿದರೆ ಮತ್ತೆ ಯುದ್ಧವನ್ನೇ ಮಾಡಬಾರದಿತ್ತು. ಅಮೆರಿಕಾದ ಅವಿವೇಕತನದ ಪರಮಾವಧಿ, ಪಾಳೇಗಾರಿಕೆ, ದಬ್ಬಾಳಿಕೆಯೇ ಯುದ್ಧಕ್ಕೆ ಕಾರಣ ಎಂದು ಆರೋಪಿಸಿದರು.ಈ ಯುದ್ಧದ ವಿಚಾರದಲ್ಲಿ ಭಾರತ ದೇಶ ಬುದ್ಧಿವಂತಿಕೆ ತೋರಿಸುತ್ತಿದೆ. ಆದರೂ ತೈಲ ಉತ್ಪನ್ನ, ಗ್ಯಾಸ್ ಇಲ್ಲದಂತಾಗಿದ್ದು, ಅಗತ್ಯ ವಸ್ತುಗಳ ಆಮದು- ರಫ್ತು ಸ್ಥಗಿತಗೊಂಡಿದೆ. ಇದೇ ಪರಿಸ್ಥಿತಿ ಮುಂದಿನ 15 ದಿನಗಳ ಕಾಲ ಮುಂದುವರಿದರೆ ದೇಶದಲ್ಲಿ ಪ್ರತಿ ಮನೆಯಲ್ಲಿಯೂ ಕಣ್ಣೀರು ಹಾಕುವ ಪರಿಸ್ಥಿತಿ ಉಂಟಾಗುತ್ತದೆ ಎಂದು ವಾಟಾಳ್ ನಾಗರಾಜ್ ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್ , ರಾಜ್ಯ ಉಸ್ತುವಾರಿ ಅಧ್ಯಕ್ಷ ವಿ.ಎನ್.ಗಂಗಾಧರ್ , ಜಿಲ್ಲಾಧ್ಯಕ್ಷ ಸಿ.ಎಸ್.ಜಯಕುಮಾರ್ , ದಲಿತ ಘಟಕ ಜಿಲ್ಲಾಧ್ಯಕ್ಷ ಕೆ.ಜಯರಾಮು, ತಾಲೂಕು ಕಾರ್ಯಾಧ್ಯಕ್ಷ ಕುಮಾರ್ , ಮಹಿಳಾ ತಾಲೂಕು ಕಾರ್ಯದರ್ಶಿ ವೆಂಕಟಲಕ್ಷ್ಮೀ, ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ಆರ್.ವಿ.ಕುಮಾರ್ , ವಾಟಾಳ್ ನಾಗರಾಜ್ ರವರ ಆಪ್ತ ಕಾರ್ಯದರ್ಶಿ ಪಾರ್ಥಸಾರಥಿ ಭಾಗವಹಿಸಿದ್ದರು.---
ಒಡಿಶಾ ಶಾಸಕರನ್ನು ಗೌರವದಿಂದ ವಾಪಸ್ ಕಳುಹಿಸಿ: ವಾಟಾಳ್ ನಾಗರಾಜ್ರಾಮನಗರ: ರಾಜ್ಯಸಭಾ ಚುನಾವಣೆ ನೆಪದಲ್ಲಿ ಒಡಿಶಾ ರಾಜ್ಯದ ಶಾಸಕರನ್ನು ಬಲವಂತದಿಂದ ರೆಸಾರ್ಟ್ ನಲ್ಲಿ ಇರಿಸಲಾಗಿದೆ. ಅವರನ್ನು ಗೌರವದಿಂದ ಚುನಾವಣಾ ಆಯೋಗ ಕಳುಹಿಸಿಕೊಡಬೇಕು. ಇಲ್ಲದಿದ್ದರೆ ನಾವೇ ಅವರನ್ನು ಕಳುಹಿಸುವ ಕೆಲಸ ಮಾಡುತ್ತೇವೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನ 8 ಶಾಸಕರನ್ನು ಗೃಹ ಬಂಧನದಲ್ಲಿ ಇರಿಸಿರುವುದು ಒಳ್ಳೆಯ ಸೂಚನೆ ಅಲ್ಲ. ಇದು ಪ್ರಜಾಪ್ರಭುತ್ವವೇ ಹೊರತು ನಿರಂಕುಶ ಪ್ರಭುತ್ವ ಅಲ್ಲ. ಅವರಿಗೆ ರಕ್ಷಣೆ ಬೇಕಾಗಿದ್ದರೆ ಆ ರಾಜ್ಯದ ಮುಖ್ಯಮಂತ್ರಿ , ಅಧೀನ ಕಾರ್ಯದರ್ಶಿ ಅಥವಾ ಪೊಲೀಸ್ ಇಲಾಖೆಯಿಂದ ಪಡೆದುಕೊಳ್ಳಲಿ ಎಂದರು.ಕಣ್ಣಿಗೆ ಕಂಡಂತೆ ಶಾಸಕರನ್ನು ಬಲವಂತವಾಗಿ ತಂದು ರೆಸಾರ್ಟ್ ನಲ್ಲಿ ಇರಿಸಲಾಗಿದೆ. ಇದನ್ನು ನೋಡಿಕೊಂಡು ಚುನಾವಣಾ ಆಯೋಗ ಏನು ಮಾಡುತ್ತಿದೆ. ಇಂತಹ ಬೆಳವಣಿಗೆಗಳಿಂದಲೇ ಚುನಾವಣಾ ವ್ಯವಸ್ಥೆ ಹಾಳಾಗುತ್ತಿದೆ ಎಂದು ಟೀಕಿಸಿದರು.
ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಕುಮಾರಸ್ವಾಮಿಯವರ ಕಾಲದಿಂದ ರೆಸಾರ್ಟ್ ರಾಜಕಾರಣದಂತಹ ಕೆಟ್ಟ ಪರಿಸ್ಥಿತಿ ಆರಂಭವಾಯಿತು. ಆ ನಾಯಕರು ಚುನಾವಣಾ ವ್ಯವಸ್ಥೆ ಮಾತ್ರವಲ್ಲ, ರಾಜ್ಯ ರಾಜಕಾರಣದ ವ್ಯವಸ್ಥೆಯನ್ನೇ ಹಾಳು ಮಾಡಿದರು ಎಂದು ವಾಟಾಳ್ ನಾಗರಾಜ್ ಕಿಡಿಕಾರಿದರು.