ಹೋಂಡಾ ಶೋ ರೂಂಗಾಗಿ ಚರಂಡಿ ಒತ್ತುವರಿ

| Published : Jun 03 2024, 12:30 AM IST

ಸಾರಾಂಶ

ಸಣ್ಣ ಮಳೆ ಬಂತಂದರೂ ನಗರದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರುತ್ತಿದೆ. ರಾಜಕಾಲುವೆ ಸೇರಿದಂತೆ ಬಹುತೇಕ ಕಡೆಗಳಲ್ಲಿ ಚರಂಡಿಗಳನ್ನು ಒತ್ತುವರಿ ಮಾಡಿಕೊಂಡಿದ್ದರು ಅಧಿಕಾರಿಗಳು ತೆರವಿಗೆ ಗಮನಹರಿಸುವುದಿಲ್ಲ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಗರದ 15ನೇ ವಾರ್ಡ್‌ನಲ್ಲಿ ನಗರಸಭೆಗೆ ಸೇರಿದ ಚರಂಡಿ ಸ್ಥಳವನ್ನು ಒತ್ತುವರಿ ಮಾಡಿಕೊಂಡು ಹೋಂಡಾ ಶೋರೂಮ್ ಕಟ್ಟಡದ ಮಾಲೀಕರು ಕಟ್ಟಡದ ಕಾಂಪೌಂಡ್ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ರಾತ್ರೋ ರಾತ್ರಿ ಮಾಡಿಸಿದ್ದಾರೆ ಎನ್ನಲಾಗಿದೆ.

ನಗರಸಭೆಯ ಯಾವುದೇ ಪರವಾನಿಗೆ ಇಲ್ಲದೆ ಕಟ್ಟಡ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ರಾತ್ರೋರಾತ್ರಿ ನಿರ್ಮಿಸಿ ಕೊಂಡಿರುವುದು ಅಲ್ಲದೆ ಕಾಂಪೌಂಡನ್ನ ಚರಂಡಿಗೆ ಒತ್ತುವರಿ ಮಾಡಿಕೊಂಡು ನಗರಸಭೆ ಅಧಿಕಾರಿಗಳಿಗೆ ಹಾಗೂ ಸದಸ್ಯರ ಗಮನಕ್ಕೆ ತಾರದೇ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ರೀತಿಯಲ್ಲಿ ಕಾಂಪೌಂಡ್ ನಿರ್ಮಿಸುತ್ತಿದ್ದಾರೆ ಎಂದು ಸಿಎಂಸಿ ಬಡಾವಣೆಯ ನಿವಾಸಿಗಳು ತಮ್ಮ ದುಗುಡವನ್ನು ವ್ಯಕ್ತಪಡಿಸಿದ್ದಾರೆ.

ತೆರವಿಗೆ ಕ್ರಮ ಕೈಗೊಳ್ಳಲಿ

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ನಗರಸಭೆಯ 15ನೇ ವಾರ್ಡಿನ ಸದಸ್ಯ ಅಂಬರೀಶ್ ಸಿಎಂಸಿ ಬಡಾವಣೆಗೆ ಇರುವ ಚರಂಡಿಯನ್ನ ಒತ್ತುವರಿ ಮಾಡಿಕೊಂಡಿದ್ದರ ಬಗ್ಗೆ ಕಟ್ಟಡದ ಮಾಲೀಕರಿಗೆ ವಿವರಿಸಿದ್ದೇನೆ. ಈಗಾಗಲೇ ನಗರಸಭೆ ಅಧಿಕಾರಿಗಳ ಗಮನಕ್ಕೂ ತಂದಿದ್ದೇನೆ. ಆದರೂ ನನಗೆ ತಿಳಿಯದೆ ರಾತ್ರಿ ಕಾಂಪೌಂಡ್ ಕಾಮಗಾರಿ ನಡೆದಿದೆ. ಈ ಕೂಡಲೇ ಅದನ್ನು ತೆರವು ಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಸಣ್ಣ ಮಳೆ ಬಂತಂದರೂ ನಗರದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರುತ್ತಿದೆ. ರಾಜಕಾಲುವೆ ಸೇರಿದಂತೆ ಬಹುತೇಕ ಕಡೆಗಳಲ್ಲಿ ಚರಂಡಿಗಳನ್ನು ಒತ್ತುವರಿ ಮಾಡಿಕೊಂಡಿದ್ದರು ಅಧಿಕಾರಿಗಳು ತೆರವಿಗೆ ಗಮನಹರಿಸುವುದಿಲ್ಲ. ಒತ್ತುವರಿ ತೆರವು ಮಾಡದೇ ಇರುವುದು ನಗರದ ವಿವಿಧ ಬಡಾವಣೆಗಳಲ್ಲಿ ನೀರು ಸರಾಗವಾಗಿ ಹರಿದು ಮುಂದೆ ಹೋಗದೆ ಸಮಸ್ಯೆಗೆ ಕಾರಣ’. ನಗರದ ಚರಂಡಿಗಳಲ್ಲಿ ನೀರು ಸರಾಗವಾಗಿ ಹೋಗುವಂತೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ನಗರಸಭೆ ಸದಸ್ಯ ಅಂಬರೀಶ್‌ ಒತಾಯಿಸಿದರು.