ವಿಧಾನ ಪರಿಷತ್‌ ಚುನಾವಣೆ: ಇಂದು ಮತದಾನ

| Published : Jun 03 2024, 12:30 AM IST

ಸಾರಾಂಶ

ಮತದಾನ ಹಿನ್ನೆಲೆ ಭಾನುವಾರ ಚುನಾವಣಾ ಸಿಬ್ಬಂದಿಗಳಿಗೆ ಮತದಾನ ಪ್ರಕ್ರಿಯೆ ಕುರಿತು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಾಹಿತಿ ನೀಡಿ ಬಳಿಕ ಮತದಾನ ಸಲಕರಣೆಗಳ ನೀಡಲಾಯಿತು. ಸಲಕರಣೆ ಪಡೆದ ಸಿಬ್ಬಂದಿಗಳು ಮತಗಟ್ಟೆಗಳತ್ತ ಹೊರಟರು. ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ನೈಋತ್ಯ ಪದವೀಧರ ಕ್ಷೇತ್ರದ ಒಟ್ಟು 27,412 ಮಂದಿ 38 ಮತಕೇಂದ್ರ ಹಾಗೂ ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ 4,365 ಮತದಾರರಿದ್ದು ಒಟ್ಟು 32 ಮತಕೇಂದ್ರಗಳ ತೆರೆಯಲಾಗಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸೋಮವಾರ ನಡೆಯಲಿರುವ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನಕ್ಕೆ ಶಿವಮೊಗ್ಗ ಜಿಲ್ಲಾಡಳಿತ ಅಂತಿಮ ಸಿದ್ಧತೆ ನಡೆಸಿದೆ. ಈಗಾಗಲೇ ಚುನಾವಣಾ ಸಿಬ್ಬಂದಿ ನಿಯೋಜಿಸಲಾಗಿದ್ದು, ಮತದಾನ ಸಲಕರಣೆಗಳ ಸಿಬ್ಬಂದಿಗೆ ವಿತರಿಸಲಾಗಿದೆ.

ಮತದಾನ ಹಿನ್ನೆಲೆ ಭಾನುವಾರ ಚುನಾವಣಾ ಸಿಬ್ಬಂದಿಗಳಿಗೆ ಮತದಾನ ಪ್ರಕ್ರಿಯೆ ಕುರಿತು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಾಹಿತಿ ನೀಡಿ ಬಳಿಕ ಮತದಾನ ಸಲಕರಣೆಗಳ ನೀಡಲಾಯಿತು. ಸಲಕರಣೆ ಪಡೆದ ಸಿಬ್ಬಂದಿಗಳು ಮತಗಟ್ಟೆಗಳತ್ತ ಹೊರಟರು. ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ನೈಋತ್ಯ ಪದವೀಧರ ಕ್ಷೇತ್ರದ ಒಟ್ಟು 27,412 ಮಂದಿ 38 ಮತಕೇಂದ್ರ ಹಾಗೂ ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ 4,365 ಮತದಾರರಿದ್ದು ಒಟ್ಟು 32 ಮತಕೇಂದ್ರಗಳ ತೆರೆಯಲಾಗಿದೆ.ಅರ್ಹ ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆ:

ಜಿಲ್ಲೆಯ ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ 200 ಮೀ. ಸುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ. ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬಂಧಿಸಿದಂತೆ ಈಗಾಗಲೇ ಜೂ.3ರಂದು ಸಂಜೆ 4 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಿ “ಒಣ ದಿನ” ಘೋಷಿಸಿ ಆದೇಶಿಸಲಾಗಿದೆ. ಮತದಾನ ಹಿನ್ನೆಲೆ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಹಾಗೂ ಅನುದಾನ ರಹಿತ ವಿದ್ಯಾಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕುಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳು ಉಳಿದ ಕೈಗಾರಿಕಾ ಸಂಸ್ಥೆಗಳು ಹಾಗೂ ಸಹಕಾರಿ ಸಂಘ ಸಂಸ್ಥೆಗಳು ಎಲ್ಲಾ ವ್ಯವಹಾರಿಕ ಸಂಸ್ಥೆಗಳಲ್ಲಿ ಔದ್ಯಮಿಕ ಸಂಸ್ಥೆಗಳಲ್ಲಿ ಮತ್ತು ಇನ್ನಿತರ ಸಂಸ್ಥೆಯಲ್ಲಿ ಕಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ಪದವೀಧರರು ಹಾಗೂ ಶಿಕ್ಷಕರು ಮತದಾನ ಮಾಡಲು ಅನುಕೂಲವಾಗುವಂತೆ ಅಂತಹ ಅರ್ಹ ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಿ ಆದೇಶಿಸಿದ್ದಾರೆ. ಮತದಾನ ಮಾಡಲು ಚುನಾವಣಾ ಆಯೋಗ ಸೂಚಿಸಿರುವ ಭಾವಚಿತ್ರ ಇರುವ ಯಾವುದೇ ಗುರುತಿನ ಚೀಟಿ ತೋರಿಸಿ ಮತದಾನ ಮಾಡಬಹುದು.ಸಂಜೆ 4 ಗಂಟೆಗೆ ಮತದಾನ ಸಮಯ ಮುಗಿದ ಬಳಿಕ ಮತಪೆಟ್ಟಿಗೆಗಳನ್ನು ಮತ್ತು ಶಾಸನಬದ್ಧ ಲಕೋಟೆಗಳನ್ನು ಡಿಮಸ್ಟರಿಂಗ್ ಕೇಂದ್ರದಲ್ಲಿ ಕ್ರೋಢೀಕರಿಸಿ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಗೆ ಪೊಲೀಸ್ ಬೆಂಗಾವಲಿನಲ್ಲಿ ತರಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ. ಜಿಲ್ಲೆಯಲ್ಲಿ 38 ಮತಗಟ್ಟೆ, 27,412 ಮತದಾರರು

ನೈಋತ್ಯ ಪದವೀಧರರ ಕ್ಷೇತ್ರವು ಶಿವಮೊಗ್ಗ, ದಾವಣಗೆರೆಯ ಚನ್ನಗಿರಿ, ಹೊನ್ನಾಳಿ ತಾಲೂಕುಗಳು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಒಳಗೊಂಡಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 38 ಮತಗಟ್ಟೆಗಳ ಸ್ಥಾಪಿಸಲಾಗಿದೆ. ಸೊರಬದಲ್ಲಿ 2, ಶಿಕಾರಿಪುರದಲ್ಲಿ 3, ಸಾಗರದಲ್ಲಿ 4, ಹೊಸನಗರ 3, ಶಿವಮೊಗ್ಗ ಗ್ರಾಮಾಂತರ 4, ಶಿವಮೊಗ್ಗ ನಗರ 14, ತೀರ್ಥಹಳ್ಳಿ 2, ಭದ್ರಾವತಿಯಲ್ಲಿ 6 ಮತಗಟ್ಟೆ ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 27,412 ಮತದಾರರಿದ್ದಾರೆ.

------------------