ಸಾರಾಂಶ
ಗಣೇಶ್ ತಮ್ಮಡಿಹಳ್ಳಿ
ಕನ್ನಡಪ್ರಭ ವಾರ್ತೆ ಶಿವಮೊಗ್ಗಮನುಷ್ಯರಿಗೆ ಹೇಗೆ ಅಂಬ್ಯುಲೆನ್ಸ್ ವ್ಯವಸ್ಥೆ ಇದೆಯೋ ಹಾಗೆಯೇ ಜಾನುವಾರುಗಳಿಗೆ ತೊಂದರೆಯಾದಲ್ಲಿ ಇನ್ಮುಂದೆ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನ ಜಾರಿಗೆ ಬಂದಿದೆ. 1962 ಸಹಾಯವಾಣಿಗೆ ಕರೆ ಮಾಡಿದರೆ ತಕ್ಷಣವೇ ಈ ಪಶು ಸಂಜೀವಿನಿ ವಾಹನವು ವೈದ್ಯರೊಂದಿಗೆ ಮಾಲೀಕನ ಮನೆ ಬಾಗಿಲಿಗೆ ತೆರಳಿ ಜಾನುವಾರುಗಳಿಗೆ ಚಿಕಿತ್ಸೆ ಒದಗಿಸುತ್ತದೆ.
ಜಾನುವಾರುಗಳಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಿ, ಮೂಲಕ ರೋದನೆ ತಪ್ಪಿಸಲು ಸರ್ಕಾರ ಜಾರಿಗೊಳಿಸಿರುವ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನ ಜಿಲ್ಲೆಯಲ್ಲಿ ಕಳೆದ 8-10 ತಿಂಗಳಿಂದ ಕೆಲಸ ಮಾಡುತ್ತಿದೆ. ರೋಗಗ್ರಸ್ತ ಜಾನುವಾರುಗಳಿಗೆ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ದೂರದ ಪಶು ಆಸ್ಪತ್ರೆಗಳೊಂದಿಗೆ ಸಾಗಿಸಲು ರೈತರಿಗೆ ಅನಾನುಕೂಲದ ಜತೆಗೆ ಆರ್ಥಿಕ ಹೊರೆ ಆಗುತ್ತಿದ್ದು, ಸಮಯಕ್ಕೆ ಚಿಕಿತ್ಸೆ ಲಭ್ಯವಾಗದೇ ಅಸು ನೀಗುತ್ತಿವೆ. ಇದನ್ನು ತಪ್ಪಿಸಿ ತುರ್ತು ಆರೋಗ್ಯ ಸೇವೆ ಒದಗಿಸಲು ಸರ್ಕಾರ ಜಿಲ್ಲೆಯ 7 ತಾಲೂಕಿಗೆ ತಲಾ ಒಂದರಂತೆ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನ ಸೇವೆ ಜಾರಿಗೊಳಿಸಿದೆ. ಜಿಲ್ಲೆಯಲ್ಲಿ ಕಳೆದ ವರ್ಷ ಆಗಸ್ಟ್‌ನಿಂದ ಈ ಸೇವೆ ಆರಂಭಗೊಂಡಿದ್ದು, ಈವರೆಗೆ ಕಾಯಿಲೆಗಳಿಗೆ ತುತ್ತಾಗಿದ್ದ 2,369 ಜಾನುವಾರುಗಳ ಆರೋಗ್ಯ ರಕ್ಷಣೆ ಮಾಡಿದೆ. ರೈತರ ಮನೆ ಬಾಗಿಲಿಗೆ ತೆರಳಿ ಅವಶ್ಯಕ ಹಾಗೂ ತುರ್ತು ಚಿಕಿತ್ಸೆ ಒದಗಿಸಿದೆ.ಅಂಬ್ಯುಲೆನ್ಸ್ ವಿಶೇಷತೆಗಳು:
ಪ್ರತೀ ವಾಹನದಲ್ಲಿ ಒಬ್ಬರು ಪಶು ವೈದ್ಯರು, ಒಬ್ಬರು ಸಹಾಯಕ, ಚಾಲಕ ಸಹಿತ ಒಟ್ಟು ಮೂವರು ಕಾರ್ಯನಿರ್ವಹಿಸುತ್ತಿದ್ದಾರೆ. ಸುಸಜ್ಜಿತ ಅಂಬ್ಯುಲೆನ್ಸ್ ವಾಹನ ಆಧುನಿಕ ಪಶುವೈದ್ಯಕೀಯ ಸೇವೆಗಳಾದ ಶಸ್ತ್ರ ಚಿಕಿತ್ಸೆಗೆ ಬೇಕಾದ ವಿವಿಧ ಉಪಕರಣ ಅಳವಡಿಸಲಾಗಿದೆ. ಪ್ರಸೂತಿ ಮತ್ತು ಶಸ್ತ್ರಚಿಕಿತ್ಸಾ ಉಪಕರಣಗಳ ಕಿಟ್, ಮರಣೋತ್ತರ ಪರೀಕ್ಷೆ ಉಪಕರಣಗಳ ಕಿಟ್ ಹಾಗೂ ಪ್ರತಿ ಪಾಲಿ ಕ್ಲಿನಿಕ್‌ನ ಒಬ್ಬರು ಶಸ್ತ್ರ ಚಿಕಿತ್ಸಾ ತಜ್ಞರು ಮತ್ತು ಸಹಾಯಕರ ನೇಮಕ ಮಾಡಲಾಗಿದೆ. ಯಾವುದಕ್ಕೆಲ್ಲ ಚಿಕಿತ್ಸೆ:ಪಶು ಪಾಲಕರು ಸಹಾಯವಾಣಿ ಸಂಖ್ಯೆ-1962ಕ್ಕೆ ಕರೆ ಮಾಡಿದರೆ ರೋಗಗ್ರಸ್ತ ಜಾನುವಾರು ಸ್ಥಳಕ್ಕೆ ವಾಹನ ತೆರಳಿ ವೈದ್ಯಕೀಯ ಸೇವೆ ನೀಡಲಿದೆ. ವಿಷಪ್ರಾಶನ, ಪ್ರಸವಕ್ಕೆ ಸಂಬಂಧಿಸಿದ ತೊಂದರೆಗಳು, ಹೊಟ್ಟೆಯುಬ್ಬರ, ಉಸಿರುಗಟ್ಟುವುದು, ಅಪಘಾತ, ಮೂಳೆಮುರಿತ ಸೇರಿ ಇನ್ನಿತರೆ ಆರೋಗ್ಯ ಸಮಸ್ಯೆಗಳಿಗೆ ಜಾನುವಾರುಗಳ ವಾಹನದಲ್ಲಿ ಹಾಕಿಕೊಂಡು ಹೋಗಿ ಚಿಕಿತ್ಸೆ ಪಡೆಯುವ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗಿದೆ. ಈ ಮೂಲಕ ಜಾನುವಾರುಗಳ ಪ್ರಾಣಹಾನಿ ಆಗುವುದನ್ನು ತಡೆಗಟ್ಟಿ ರೈತರಿಗೆ ಎದುರಾಗುವ ಆರ್ಥಿಕ ಸಂಕಷ್ಟ ತಪ್ಪಿಸಲು ಅನುಕೂಲ ಆಗುತ್ತಿದೆ.
---------ರೈತರಿಂದಷ್ಟು ಸ್ಪಂದನೆ ಇಲ್ಲ
ಜಿಲ್ಲೆಯಲ್ಲಿ ಈ ಸೇವೆ ಆರಂಭವಾಗಿ 10 ತಿಂಗಳು ಕಳೆದರೂ ಅಷ್ಟಾಗಿ ಕರೆಗಳು ಬರುತ್ತಿಲ್ಲ. 7 ತಾಲೂಕಿನಿಂದಲೂ ಒಂದೊಂದು ವಾಹನ ಇದ್ದು, ಒಂದು ವಾಹನ ದಿನಕ್ಕೆ ಕನಿಷ್ಟ 3 ಕರೆಯಂತೆ ತಿಂಗಳಿಗೆ 90 ಕರೆಗಳ ಸ್ವೀಕರಿಸಬೇಕಿದೆ. ಈ ಲೆಕ್ಕಾಚಾರದಂತೆ ಈವರೆಗೆ ಸುಮಾರು 6 ಸಾವಿರಕ್ಕೂ ಹೆಚ್ಚು ಕರೆಗಳು ಬರಬೇಕಿತ್ತು. ಜಿಲ್ಲೆಯಲ್ಲಿ ಕಳೆದ 10 ತಿಂಗಳಿಂದ ಈವರೆಗೆ ಕೇವಲ 2,369 ಜಾನುವಾರುಗಳ ಪ್ರಾಣ ರಕ್ಷಣೆ ಮಾಡಿದೆ. ರೈತರಿಂದ ಅಷ್ಟು ಸ್ಪಂದನೆ ಸಿಗುತ್ತಿಲ್ಲ ಎಂದು ಪಶುಪಾಲನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.-----ಜಿಲ್ಲೆಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಜಿಲ್ಲೆಯ ರೈತರ ಜಾನುವಾರುಗಳ ತುರ್ತು ಚಿಕಿತ್ಸೆಗಾಗಿ “ತುರ್ತು ವಾಹನ ಸೇವೆ” (ಅಂಬ್ಯುಲೆನ್ಸ್) ಆರಂಭಿಸಿದ್ದು, ಗ್ರಾಮೀಣ ಭಾಗದಲ್ಲಿ ಜಾನುವಾರುಗಳ ಆರೋಗ್ಯದಲ್ಲಿ ಏರುಪೇರು ಕಂಡು ಬಂದರೆ, ಕರೆ ಮಾಡಿದ ಕೆಲವೇ ಸಮಯದಲ್ಲಿ ವಾಹನಗಳು ಸಾಮಾನ್ಯ ಅಂಬ್ಯುಲೆನ್ಸ್‌ನಂತೆ ಸ್ಥಳಕ್ಕೆ ಧಾವಿಸಿ, ಸ್ಥಳದಲ್ಲಿಯೇ ಜಾನುವಾರುಗಳಿಗೆ ಚಿಕಿತ್ಸೆ ಒದಗಿಸಲಾಗುವುದು. ಪಶು ಚಿಕಿತ್ಸಾಲಯ ಲಭ್ಯವಿಲ್ಲದ ಗ್ರಾಮಗಳ ರೈತರು ಜಾನುವಾರುಗಳ ತುರ್ತು ಚಿಕಿತ್ಸೆ ಅವಶ್ಯವಿದ್ದಲ್ಲಿ ಸಹಾಯವಾಣಿ ಸಂಖ್ಯೆ 1962ಕ್ಕೆ ಕರೆ ಮಾಡಬಹುದು.
- ಡಾ.ಶಿವಯೋಗಿ ಯಲಿ, ಉಪನಿರ್ದೇಶಕ, ಪಶುಪಾಲನಾ ಇಲಾಖೆ, ಶಿವಮೊಗ್ಗ.----