ಕನ್ನಡಪ್ರಭ ವಾರ್ತೆ ದಾವಣಗೆರೆ/ಬಾಗಲಕೋಟೆ

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಮರ್ಥ ಎಂ.ಶಾಮನೂರು ಜಯಗಳಿಸಲಿದ್ದು, ಇಲ್ಲಿ ಅಲ್ಪಸಂಖ್ಯಾತರನ್ನು ಮನವೊಲಿಸುತ್ತೇವೆ. ಮುಂದೆ ಬೇರೆ, ಬೇರೆ ಅವಕಾಶಗಳನ್ನು ಅವರಿಗೆ ನೀಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಂ ಸಮುದಾಯಕ್ಕೆ ಅಭಯ ನೀಡಿದ್ದಾರೆ.

ದಾವಣಗೆರೆ ಹಾಗೂ ಬಾಗಲಕೋಟೆಯಲ್ಲಿ ಪಕ್ಷದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಎರಡೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ನಾವೇ ಗೆಲ್ಲುತ್ತೇವೆಂಬ ವಿಶ್ವಾಸವಿದೆ ಎಂದರು.

ಕಾಂಗ್ರೆಸ್ ಪಕ್ಷದ ನೀತಿಯೆಂದರೆ ಯಾರು ಶಾಸಕರು ಮೃತರಾಗುತ್ತಾರೋ ಅಂತವರ ಕುಟುಂಬದ ಯಾರಾದರೂ ಒಬ್ಬರಿಗೆ ಟಿಕೆಟ್ ಕೊಡುತ್ತೇವೆ. ಬಾಗಲಕೋಟೆಯಲ್ಲಿ ಮೇಟಿಯವರ ಚಿಕ್ಕ ಮಗನಿಗೆ ಟಿಕೆಟ್ ನೀಡಲಾಗಿದೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ಸಮರ್ಥಗೆ ಟಿಕೆಟ್ ನೀಡಲಾಗಿದೆ. ಕಳೆದ ಮೂರು ಉಪ ಚುನಾವಣೆಗಳಲ್ಲೂ ನಾವು ಬಹುಮತಗಳ ಅಂತರದಲ್ಲೇ ಗೆದ್ದಿದ್ದೇವೆ. ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪ ಚುನಾವಣೆಗಳಲ್ಲೂ ಅದೇ ರೀತಿಯ ಫಲಿತಾಂಶ ಬರುತ್ತದೆಂಬ ಸಂಪೂರ್ಣ ವಿಶ್ವಾಸ ನಮಗಿದೆ ಎಂದರು.

ಹಿಂದಿನ ಉಪ ಚುನಾವಣೆಗಳಲ್ಲೂ ಈ ಫಲಿತಾಂಶ ರಾಜ್ಯ ರಾಜಕಾರಣದ ದಿಕ್ಸೂಚಿ ಆಗಲಿದೆಯೆಂದು ಬಿಜೆಪಿಯವರು ಹೇಳಿದ್ದರು. ಆಗಲೂ ಬಸವರಾಜ ಬೊಮ್ಮಾಯಿ ಮಗ ಹಾಗೂ ಎಚ್.ಡಿ.ಕುಮಾರಸ್ವಾಮಿ ಪುತ್ರ ಗೆಲ್ಲುತ್ತಾರೆಂದಿದ್ದರು. ಆದರೆ, ಎರಡೂ ಕಡೆ ಸೋತರು. ಬಿಜೆಪಿಯವರು ಎಲ್ಲಿ ಗೆದ್ದಿದ್ದಾರೆ? ನಾವು ನುಡಿದಂತೆ ನಡೆದಿದ್ದೇವೆ. ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆಗಳಲ್ಲಿ ಗೆದ್ದು, ಸಾಬೀತುಪಡಿಸುತ್ತೇವೆ ಎಂದು ಹೇಳಿದರು.


ಬಡವರು, ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು, ರೈತರು ಎಲ್ಲರೂ ನಮ್ಮ ಪರವಾಗಿದ್ದಾರೆ. ಈ ಎರಡೂ ಉಪ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲುವುದೇ ಇಲ್ಲ. ವಿಪಕ್ಷಗಳು ಗೆಲ್ಲುವುದೇ ಇಲ್ಲವೆಂದಾಗ ಇದು ಹೇಗೆ ರಾಜ್ಯ ರಾಜಕಾರಣದ ದಿಕ್ಸೂಚಿ ಆಗುತ್ತದೆ?. ನಾವು ಅಧಿಕಾರದಲ್ಲಿದ್ದೇವೆ. ಸಂಪೂರ್ಣವಾಗಿ ಗೆಲ್ಲುತ್ತೇವೆಂಬ ವಿಶ್ವಾಸ ನಮಗಿದೆ. ಪಂಚ ರಾಜ್ಯ ಚುನಾವಣೆಗಳಲ್ಲಿ ಸಹ ಬಿಜೆಪಿ ಎಲ್ಲ ಕಡೆ ಸೋಲುತ್ತದೆ ಎಂದು ಭವಿಷ್ಯ ನುಡಿದರು.

ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಪಕ್ಷೇತರರಾಗಿ ಸ್ಪರ್ಧಿಸಿರುವ ಸಾದಿಕ್ ಪೈಲ್ವಾನ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತೇವೆ. ಅಲ್ಪಸಂಖ್ಯಾತ ನಾಯಕರನ್ನೆಲ್ಲಾ ಸೇರಿಸಿ, ಒಮ್ಮತದ ನಿರ್ಧಾರ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ದಾವಣಗೆರೆ ದಕ್ಷಿಣದಲ್ಲಿ ಸಮರ್ಥ ಎಂ.ಶಾಮನೂರು ಪರ ಪ್ರಚಾರಕ್ಕೆ ಏ.1 ಅಥವಾ 2ರಂದು ಬರುತ್ತೇನೆ. ನಾನು ಕುಟುಂಬ ರಾಜಕಾರಣವನ್ನು ಬೆಂಬಲಿಸುವುದಿಲ್ಲ. ಆದರೆ, ಯಾವ ಅಭ್ಯರ್ಥಿ ಗೆಲ್ಲುತ್ತಾರೋ ಅಂತಹವರನ್ನು ಚುನಾವಣೆಗೆ ನಿಲ್ಲಿಸುತ್ತೇವೆ. ಸಚಿವ ಜಮೀರ್ ಅಹಮ್ಮದ್‌ ಸಹ ಪ್ರಚಾರಕ್ಕೆ ಬರುತ್ತಾರೆ. ಬಂಡಾಯ ಶಮನ ಮಾಡುತ್ತೇವೆ. ಎಲ್ಲವೂ ಸರಿ ಹೋಗಲಿದೆ ಎಂದರು.

ತಬ್ಬಲಿ ಮಗನ ಜೋಳಿಗೆಗೆನಿಮ್ಮ ಹಾಕುತ್ತಾ ಇದ್ದೇವೆ:

ಬಾಗಲಕೋಟೆಯಲ್ಲಿ ಮಾತನಾಡಿ, ತಬ್ಬಲಿ ಮಗ ಇವನನ್ನು (ಉಮೇಶ್‌ನ ಕಡೆ ನೋಡುತ್ತಾ) ನಿಮ್ಮ ಜೋಳಿಗೆಗೆ ಹಾಕ್ತಾ ಇದ್ದೇವೆ. ಇವರಿಗೆ ಆಶೀರ್ವಾದ ಮಾಡೋದು ನಿಮ್ಮ ಜವಾಬ್ದಾರಿ. ಬಿಜೆಪಿಯ ಚರಂತಿಮಠ ಬಳಿ ದುಡ್ಡಿರಬಹುದು. ನೀವೆಲ್ಲಾ ಯಾವ ಆಮಿಷಕ್ಕೆ ಒಳಗಾಗಬೇಡಿ. ಚರಂತಿಮಠರ ಸಹೋದರ ಮಲ್ಲಿಕಾರ್ಜುನ ಈ ಬಾರಿ ಉಮೇಶ ಗೆಲ್ಲಿಸಬೇಕೆಂದು ಪಣ ತೊಟ್ಟಿದ್ದಾರೆ. ಉಮೇಶರನ್ನು ಗೆಲ್ಲಿಸಿ ವಿಧಾನಸಭೆಗೆ ಕಳಿಸಿ ಮೇಟಿ ಅವರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಬೇಕು. ನಾಲ್ಕೈದು ದಿನ ಇಲ್ಲೇ ಇರುತ್ತೇನೆ. ಹಳ್ಳಿ-ಹಳ್ಳಿಗೂ ಬರ್ತೀನಿ, ಪ್ರತಿ ವಾರ್ಡ್‌ಗೂ ಬರ್ತೀನಿ ಎಂದು ತಿಳಿಸಿದರು.ಮುಸ್ಲಿಮರಿಗೆ ನ್ಯಾಯ ಕೊಡಿಸೋದು ಖಚಿತ; ಡಿಕೆಶಿ

ರಾಜಕೀಯದಲ್ಲಿ ಪ್ರತಿಯೊಬ್ಬರಿಗೂ ಟಿಕೆಟ್ ಕೇಳುವ ಹಕ್ಕಿದ್ದು, ಅದರಂತೆ ಮುಸ್ಲಿಂ ಸಮುದಾಯದವರು ದಾವಣಗೆರೆಯಲ್ಲಿ ಟಿಕೆಟ್‌ ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ಮುಸ್ಲಿಂ ಸಮಾಜಕ್ಕೆ ನ್ಯಾಯ ಕೊಡಿಸುವ ಕೆಲಸವನ್ನು ನಾವು ಖಂಡಿತಾ ಮಾಡುತ್ತೇವೆ ಎಂದು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಭರವಸೆ ನೀಡಿದ್ದಾರೆ.ಬಾಗಲಕೋಟೆ ಹಾಗೂ ದಾವಣಗೆರೆಯಲ್ಲಿ ಪಕ್ಷದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ವೇಳೆ ಸುದ್ದಿಗಾರರ ಜೊತೆ ಮಾತನಾಡಿ, ಖಂಡಿತವಾಗಿಯೂ ಮುಸ್ಲಿಂ ಸಮುದಾಯಕ್ಕೆ ಹಿಂದೆಯೂ ಅವಕಾಶ, ನ್ಯಾಯ ಕೊಡಿಸುವ ಕೆಲಸವನ್ನು ಪಕ್ಷ ಮಾಡಿದೆ, ಮುಂದೆಯೂ ಮಾಡುತ್ತೇವೆ ಎಂದರು. ಕಾಂಗ್ರೆಸ್ ನ ಹಿರಿಯ ಮುಖಂಡರಾದ ಸಾದಿಕ್ ಪೈಲ್ವಾನ್‌ರವರು ದಾವಣಗೆರೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಿನೇಷನ್ ಮಾಡಿದ್ದಾರೆ. ಶಾಮನೂರು ಶಿವಶಂಕರಪ್ಪನವರ ಪಟ್ಟದ ಶಿಷ್ಯರಾಗಿರುವ ಸಾದಿಕ್‌ ಪೈಲ್ವಾನ್‌ ಮನವೊಲಿಸುತ್ತೇವೆ. ಎಲ್ಲವನ್ನೂ ಸರಿ ಮಾಡುತ್ತೇವೆ. ಮುಸ್ಲಿಮರ ಎಲ್ಲಾ ಬೇಡಿಕೆಗಳಿಗೂ ಸ್ಪಂದಿಸುತ್ತೇವೆ ಎಂದು ತಿಳಿಸಿದರು. ಶಾಮನೂರು ಅಗಲಿಕೆ ನಂತರ ಪಕ್ಷದ ಮುಖಂಡರು, ಕಾರ್ಯಕರ್ತರು ಉಪ ಚುನಾವಣೆಗೆ ಸಮರ್ಥ ಅವರ ಹೆಸರು ಸೂಚಿಸಿದ್ದರು. ಅದರಂತೆ ಪಕ್ಷದ ವರಿಷ್ಠರು ಟಿಕೆಟ್ ನೀಡಿದ್ದಾರೆ. ಬಾಗಲಕೋಟೆಯಲ್ಲೂ ಪಕ್ಷದ ಸಂಪ್ರದಾಯದಂತೆ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದೇವೆ. ಎರಡೂ ಕಡೆ ಕಾಂಗ್ರೆಸ್ ಜಯ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿಯಿಂದ ಕೆಲವರು ಈಗಾಗಲೇ ಕಾಂಗ್ರೆಸ್‌ ಸೇರಿದ್ದಾರೆ. ಇನ್ನಷ್ಟು ಮಂದಿ ಕಾಂಗ್ರೆಸ್‌ ಗೆ ಬರುವವರಿದ್ದಾರೆ. ಶೀಘ್ರದಲ್ಲೇ ಅವರ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಅವರು ತಿಳಿಸಿದರು.ದಾವಣಗೆರೆಯ ಅಲ್ಪಸಂಖ್ಯಾತ ಮುಖಂಡ ಅಬ್ದುಲ್ ಜಬ್ಬಾರ್‌ ಅ‍ವರನ್ನು 3 ಸಲ ಎಂಎಲ್‌ಸಿ ಮಾಡಿದ್ದೇವೆ. ರಾಜ್ಯಸಭೆ, ವಿಧಾನ ಪರಿಷತ್ತು, ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿ, ಮುಸ್ಲಿಂ ಸಮಾಜಕ್ಕೆ ನ್ಯಾಯ ನೀಡುತ್ತಾ ಬಂದಿದ್ದೇವೆ. ಅದನ್ನು ಮುಂದುವರಿಸುತ್ತೇವೆ. ಇದು ನಮ್ಮ ಪಕ್ಷದ ಮೂಲ ಸಿದ್ಧಾಂತ ಎಂದರು.