ಧಾರವಾಡ: ಉದಾರೀಕರಣ, ಡಿಜಿಟಲ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಜಾಗತೀಕರಣದ ಪರಿಣಾಮವಾಗಿ ಭಾರತೀಯ ಹಣಕಾಸು ವಲಯವು ಹೆಚ್ಚು ಸ್ಥಿರ ಮತ್ತು ಸ್ಪರ್ಧಾತ್ಮಕವಾಗುತ್ತಿದೆ ಎಂದು ಕರ್ನಾಟಕ ವಿವಿ ಕುಲಪತಿ ಪ್ರೊ ಎ.ಎಂ. ಖಾನ್ ಹೇಳಿದರು.

ಕರ್ನಾಟಕ ವಿವಿ ಅರ್ಥಶಾಸ್ತ್ರ ವಿಭಾಗ ಕೆನರಾ ಬ್ಯಾಂಕ್ ಸಹಯೋಗದಲ್ಲಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ''''''''ಭಾರತೀಯ ಹಣಕಾಸು ವಲಯದಲ್ಲಿನ ಇತ್ತೀಚಿನ ಸುಧಾರಣೆಗಳು ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಭವಿಷ್ಯದಲ್ಲಿ ಹೊಸ ಸವಾಲುಗಳನ್ನು ಎದುರಿಸಲು ನವೀನ ವಿಧಾನಗಳು ಹಾಗೂ ಪರಿಣಾಮಕಾರಿ ನೀತಿ ಅತ್ಯಗತ್ಯ. ವಿದೇಶಿ ಬಂಡವಾಳ, ವಿದೇಶಿ ವಿನಿಮಯ ಮಾರುಕಟ್ಟೆಗಳು ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೂಡಿಕೆ, ಷೇರು ವ್ಯಾಪಾರ ಮತ್ತು ವಿನಿಮಯ ದರಗಳ ಸ್ಥಿರತೆ ದೇಶದ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತವೆ. ಉದಾರೀಕರಣ ನೀತಿಯಿಂದಾಗಿ ವಿದೇಶಿ ಹೂಡಿಕೆ ಹೆಚ್ಚಾಯಿತು ಮತ್ತು ಸ್ಪರ್ಧಾತ್ಮಕತೆ ವೃದ್ಧಿಯಾಯಿತು ಎಂದರು.

ಪ್ರಸ್ತುತ ಆಧುನಿಕ ಯುಗದಲ್ಲಿ ಕೃತಕ ಬುದ್ಧಿಮತ್ತೆ ಬ್ಯಾಂಕಿಂಗ್ ವಲಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ಗ್ರಾಹಕ ಸೇವೆ, ಮೋಸ ಪತ್ತೆ ಹಚ್ಚುವ ವ್ಯವಸ್ಥೆಗಳು ಮತ್ತು ಡೇಟಾ ವಿಶ್ಲೇಷಣೆಯಂತಹ ಸೇವೆಗಳನ್ನು ನೀಡುತ್ತಿದೆ. ಆದರೆ, ಸೈಬರ್ ಅಪರಾಧಗಳ ಪ್ರಮಾಣ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪುಣೆಯ ಗೋಖಲೆ ರಾಜಕೀಯ ಮತ್ತು ಅರ್ಥಶಾಸ್ತ್ರ ಸಂಸ್ಥೆಯ ಉಪಕುಲಪತಿ ಪ್ರೊ. ಉಮಾಕಾಂತ ದಾಸ, ಪ್ರಸಕ್ತ ಹಣಕಾಸು ವಲಯದ ಸುಧಾರಣೆಗಳು ಹಾಗೂ ನೀತಿ ಸವಾಲುಗಳ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಬಿ.ಎಚ್‌. ನಾಗೂರ ಅಧ್ಯಕ್ಷತೆ ವಹಿಸಿ, ಬ್ಯಾಂಕಿಂಗ್ ಸ್ಥಿರತೆ ದೇಶದ ಆರ್ಥಿಕ ಬೆಳವಣಿಗೆಯ ಮೂಲಾಧಾರ. ಡಿಜಿಟಲ್ ಹಣಕಾಸು ವ್ಯವಸ್ಥೆ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದೆ. ಮೊಬೈಲ್ ಬ್ಯಾಂಕಿಂಗ್, ಯು.ಪಿ.ಐ. ಆನ್ಲೈನ್ ವ್ಯವಹಾರಗಳು, ಡಿಜಿಟಲ್ ಕರೆನ್ಸಿ ಹಣಕಾಸು ಸೇವೆಗಳನ್ನು ಸುಲಭ, ವೇಗ ಮತ್ತು ಸಮಗ್ರವಾಗಿ ನೀಡುತ್ತಿವೆ ಎಂದರು.


ವಿವಿಧ ತಾಂತ್ರಿಕ ಗೋಷ್ಠಿಗಳಲ್ಲಿ 30ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಸಂಶೋಧಕರು ಮಂಡಿಸಿದರು. ಪ್ರೊ. ಎಸ್.ಟಿ. ಬಾಗಲಕೋಟಿ, ಡಾ. ಎನ್.ಎಸ್. ಮಗದೂರ, ಡಾ. ಎಸ್.ಬಿ. ನಾರಿ, ಡಾ.ಮನೋಜ‌ ಡೋಳ್ಳಿ, ಡಾ. ಆರ್.ಎನ್. ಕದಂ, ಡಾ. ಎಚ್.ಎಚ್. ಭರಡಿ ಇದ್ದರು.