ಬಳ್ಳಾರಿ: ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾಗಿರುವ ಅಪಾರವಾದ ಹೂಳು ತೆಗೆಯಬೇಕು ಎಂದು ಆಗ್ರಹಿಸಿ ಮೇ ತಿಂಗಳಲ್ಲಿ "ಹೂಳಿನ ಜಾತ್ರೆ " ಹಮ್ಮಿಕೊಳ್ಳಲಾಗಿದೆ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲಾಶಯದಲ್ಲಿನ ಹೂಳಿನಿಂದ ವರ್ಷದಿಂದ ವರ್ಷಕ್ಕೆ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಇದರಿಂದ ಮೂರು ರಾಜ್ಯಗಳ ರೈತರ ಕೃಷಿ ಚಟುವಟಿಕೆ, ಕೈಗಾರಿಕೆಗಳು, ಜನ-ಜಾನುವಾರುಗಳಿಗೆ ಕುಡಿವ ನೀರಿನ ಸಮಸ್ಯೆಯಾಗುತ್ತಿದೆ. ಜಲಾಶಯದ ಹೂಳು ತೆಗೆಯುವಂತೆ ಅನೇಕ ವರ್ಷಗಳಿಂದ ಹೋರಾಟಗಳು ನಡೆಯುತ್ತಿವೆ. ಆದರೆ, ಈ ಬಗ್ಗೆ ರಾಜ್ಯ ಸರ್ಕಾರಗಳು ಯಾವುದೇ ಕ್ರಮ ವಹಿಸುತ್ತಿಲ್ಲ. ನವಲಿ ಬಳಿ ಸಮಾನಾಂತರ ಜಲಾಶಯದ ನಿರ್ಮಿಸುವ ನೆಪ ಹೇಳಿಕೊಂಡು ದಿನದೂಡುತ್ತಿವೆ. ರಾಜ್ಯ ಸರ್ಕಾರ ಕೂಡಲೇ ಜಲಾಶಯದ ಹೂಳು ತೆಗೆಯುವ ಸಂಬಂಧ ತಜ್ಞರ ಸಭೆ ಕರೆದು ಚರ್ಚಿಸಬೇಕು. ಹೂಳು ತೆಗೆಯುವುದರಿಂದಾಗುವ ಸಾಧಕ-ಬಾಧಕಗಳ ಕುರಿತು ಪೂರಕ ನಿರ್ಧಾರ ಕೈಗೊಳ್ಳಬೇಕು. ಮೂರು ರಾಜ್ಯಗಳ ಮುಖ್ಯಮಂತ್ರಿಗಳು, ಜಲಾಶಯದಿಂದ ನೀರು ಪಡೆಯುವ ಕೈಗಾರಿಕೆಗಳು ಸೇರಿಕೊಂಡು ಹೂಳು ತೆಗೆಯುವ ನಿಲುವು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಜಲಾಶಯದ 133 ಟಿಎಂಸಿ ಪೈಕಿ 33ರಿಂದ 35 ಟಿಎಂಸಿಯಷ್ಟು ಹೂಳು ತುಂಬಿಕೊಂಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರತಿವರ್ಷ ಸರಾಸರಿ 0.5ರಷ್ಟು ಹೂಳು ಶೇಖರಣೆಯಾಗುತ್ತಿದೆ. ಹೀಗೆಯೇ ಹೂಳು ತುಂಬಿಕೊಳ್ಳುತ್ತಾ ಹೋದರೆ ಮುಂದಿನ ದಿನಗಳಲ್ಲಿ ನೀರಿನ ಅಭಾವ ತೀವ್ರಗೊಳ್ಳುವ ಸಾಧ್ಯತೆಯಿದೆ. 2017ರಲ್ಲಿ ನೀರಾವರಿ ತಜ್ಞರ ಜೊತೆ ಸೇರಿ ಸಾರ್ವಜನಿಕರ ದೇಣಿಗೆಯಿಂದ ಸಂಗ್ರಹಿಸಿದ ₹30 ಲಕ್ಷ ವೆಚ್ಚದಲ್ಲಿ ಜಲಾಶಯದಲ್ಲಿ ಹೂಳು ತೆಗೆಯಲಾಯಿತು. ನಾವು ಹೋರಾಟದ ರೂಪವಾಗಿ ಹೂಳು ತೆಗೆಯುವ ಜಾತ್ರೆಯನ್ನು ನಡೆಸುವ ಮೂಲಕ ರಾಜ್ಯ ಸರ್ಕಾರಕ್ಕೆ ಜಲಾಶಯದ ಹೂಳು ತೆಗೆಯುವ ಕುರಿತು ಸೂಕ್ತ ನಿರ್ಧಾರಕ್ಕೆ ಬರುವಂತೆ ಒತ್ತಾಯಿಸಲಾಯಿತು. ಈ ಬಾರಿಯೂ ಮತ್ತೆ ಹೋರಾಟಕ್ಕೆ ಸಜ್ಜಾಗುತ್ತಿದ್ದೇವೆ ಎಂದರು.

ಜಲಾಶಯದಲ್ಲಿ ಹೂಳಿನ ಜಾತ್ರೆ ನಡೆಸಲು ತುಂಗಭದ್ರಾ ಬೋರ್ಡ್ ಅನುಮತಿ ನೀಡದೇ ಹೋದಲ್ಲಿ ಕೇಂದ್ರಕ್ಕೆ ನಿಯೋಗ ತೆರಳಿ ನೀರಾವರಿ ಆಯೋಗದಿಂದ ಅನುಮತಿ ಪಡೆಯಲಾಗುವುದು. ಯಾವುದೇ ಕಾರಣಕ್ಕೂ ಹೋರಾಟ ನಿಲ್ಲುವುದಿಲ್ಲ. ರೈತರ ಹಿತ ಕಾಯುವ ಚಳವಳಿಗೆ ಸಾರ್ವಜನಿಕರು ಸಹ ಬೆಂಬಲಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದರು.

ಜಲಾಶಯದಲ್ಲಿ ತೆಗೆಯುವ ಹೂಳನ್ನು ರೈತರು ತಮ್ಮ ಹೊಲ ಗದ್ದೆಗಳಿಗೆ ತೆಗೆದುಕೊಂಡು ಹೋಗಬಹುದು. ಜಲಾಶಯದ ಹೂಳು ಹೆಚ್ಚು ಫಲವತ್ತತೆಯಿಂದ ಕೂಡಿರುವುದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಅಖಂಡ ಬಳ್ಳಾರಿ ಜಿಲ್ಲೆಯಿಂದ ದೊಡ್ಡ ಸಂಖ್ಯೆಯಲ್ಲಿ ರೈತರು ಹೂಳಿನ ಜಾತ್ರೆಯ ಚಳವಳಿಗೆ ಧುಮುಕಲಿದ್ದಾರೆ ಎಂದು ಪುರುಷೋತ್ತಮಗೌಡ ತಿಳಿಸಿದರು.


ಸಂಘದ ಜಿಲ್ಲಾ ಪ್ರಮುಖರಾದ ಜಾಲಿಹಾಳು ಶ್ರೀಧರಗೌಡ, ಮಲ್ಲಾರೆಡ್ಡಿ ಡಿ.ಕಗ್ಗಲ್, ವೀರೇಶ ನಾಯಕ, ದರೂರು ವೀರೇಶ ಇದ್ದರು.