ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದ ಕಂದಾಯ ಗ್ರಾಮಗಳ 1.10 ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲು ಫೆ.14 ರಂದು ಹಾವೇರಿಯಲ್ಲಿ ‘ಜನಸೇವೆ ಸಮರ್ಪಣಾ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.ಮಂಗಳವಾರ ವಿಕಾಸ ಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಇದೇ ಫೆ.13ರಂದು ನಮ್ಮ ರಾಜ್ಯ ಸರ್ಕಾರ ಒಂದು ಸಾವಿರ ದಿನ ಪೂರೈಸಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೀರ್ಘಾವಧಿ ಮುಖ್ಯಮಂತ್ರಿಯಾಗಿದ್ದಾರೆ. ಹಾಗಂತ ನಾವು ಸಂಭ್ರಮಾಚರಣೆ ಮಾಡುತ್ತಿಲ್ಲ. ಹಾವೇರಿ ಕಾರ್ಯಕ್ರಮದ ಮೂಲಕ ಈ ಭೂ ಗ್ಯಾರಂಟಿ ಕಾರ್ಯಕ್ರಮಗಳ ಅಡಿ ಮಾಡಿದ ಕೆಲಸ ಜನರಿಗೆ ಸಮರ್ಪಿಸುತ್ತಿದ್ದೇವೆ ಎಂದು ಹೇಳಿದರು.
ಬಡವರ ಅತಂತ್ರ ಬದುಕಿಗೆ ಮುಕ್ತಿಕೊಟ್ಟು ನೆಮ್ಮದಿ ಬದುಕು ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ‘ಭೂ ಗ್ಯಾರಂಟಿ’ ಕಾರ್ಯಕ್ರಮಗಳ ಅಡಿ ಹಲವು ಕೆಲಸ ಮಾಡುತ್ತಿದೆ. ದಾಖಲೆ ಇಲ್ಲದ ವಸತಿ ಪ್ರದೇಶಗಳಿಗೆ ದಾಖಲೆ ಸಹಿತ ‘ಕಂದಾಯ ಗ್ರಾಮ’ ಎಂದು ಘೋಷಿಸುವುದು, ಅಲ್ಲಿ ವಾಸಿಸುವ ಕುಟುಂಬಗಳಿಗೆ ಹಕ್ಕು ಪತ್ರ ನೀಡುವುದು, ಸರ್ಕಾರದಿಂದ ಮಂಜೂರಾದ ಭೂಮಿಗೆ ಕಂದಾಯ ಇಲಾಖೆಯಿಂದಲೇ ಪೋಡಿ ಮಾಡಿ ಸಂಪೂರ್ಣ ದಾಖಲೆ ಮಾಡಿಕೊಟ್ಟು ಭೂ ಮಾಲೀಕತ್ವದ ಹಕ್ಕು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.49 ಲಕ್ಷ ಜಮೀನು ಮೃತರ ಹೆಸರಿನಲ್ಲಿ:
ರಾಜ್ಯದಲ್ಲಿ 49 ಲಕ್ಷ ಜಮೀನುಗಳು ಮೃತರ ಹೆಸರಿನಲ್ಲೇ ಮುಂದುವರೆದಿವೆ. ಹೀಗಾಗಿ ಮೃತರ ಮನೆ ಬಾಗಿಲಿಗೆ ಕಂದಾಯ ಇಲಾಖೆ ಅಧಿಕಾರಿಗಳು ತೆರಳಿ ವಾರಸುದಾರರಿಗೆ ಪಹಣಿ ಮಾಡಿಕೊಡುವ ಇ-ಪೌತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಸ್ತಿಗಳ ದಾಖಲೆಗಳು ಕಳೆದು ಹೋಗುವುದು, ಕೈಗೆ ಸಿಗದಿರುವುದನ್ನು ತಪ್ಪಿಸಲು ಭೂ ಸುರಕ್ಷತಾ ಕಾರ್ಯಕ್ರಮದಡಿ ತಹಸೀಲ್ದಾರ್, ಎಸಿ, ಡಿಸಿ ಕಚೇರಿಗಳಲ್ಲಿದ್ದ ಮೂಲ ದಾಖಲೆಗಳ ಸ್ಕ್ಯಾನಿಂಗ್ ಮಾಡಿ ಶಾಶ್ವತ ಸಂರಕ್ಷಣೆ ಮಾಡಲಾಗುತ್ತಿದೆ. ಇವೆಲ್ಲವೂ ಭೂ ಗ್ಯಾರಂಟಿಯ ಪ್ರಮುಖ ಅಂಶಗಳು ಎಂದು ಸಚಿವರು ಹೇಳಿದರು.
ದಾಖಲೆ ರಹಿತ ವಸತಿ ಪ್ರದೇಶದಲ್ಲಿ ವಾಸಿಸುವ ಎಲ್ಲ ಸಮುದಾಯಗಳಿಗೂ ಹಕ್ಕುಪತ್ರ ನೀಡಲು ಸಿಎಂ ಸಿದ್ದರಾಮಯ್ಯ 2016ರಲ್ಲಿ ಕಾನೂನಿಗೆ ತಿದ್ದುಪಡಿ ತಂದಿದ್ದರು. 2017-2023ರ ಅವಧಿಯ ಬಿಜೆಪಿ ಸರ್ಕಾರದಲ್ಲಿ 1.8 ಲಕ್ಷ ಹಕ್ಕು ಪತ್ರ ನೀಡಲಾಗಿತ್ತು. ನಮ್ಮ ಸರ್ಕಾರ ಕಳೆದ ಎರಡೂವರೆ ವರ್ಷದಲ್ಲೇ ಒಟ್ಟು 2.20 ಲಕ್ಷ ಹಕ್ಕು ಪತ್ರ ನೀಡಿದೆ ಎಂದರು.
ಹಕ್ಕುಪತ್ರ ರಿಜಿಸ್ಟರ್:ಈ ಹಿಂದೆ ಫಲಾನುಭವಿಗೆ ಪೇಪರ್ ಪ್ರಿಂಟ್ ಹಕ್ಕು ಪತ್ರ ನೀಡಲಾಗುತ್ತಿತ್ತು. ನಮ್ಮ ಸರ್ಕಾರ ಗಣಕೀಕೃತ ದಾಖಲೆ ಮಾಡಿದೆ. ಈ ಹಕ್ಕು ಪತ್ರ ಕಳೆಯಲ್ಲ, ನಕಲು ಮಾಡಲೂ ಆಗಲ್ಲ. ಫಲಾನುಭವಿಗೆ ಹಕ್ಕು ಪತ್ರ ನೀಡುವ ಮುನ್ನ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಮಾಡಿಸಲಾಗುತ್ತಿದೆ. ಈ ಮೂಲಕ ಫಲಾನುಭವಿಗೆ ನೂರಕ್ಕೆ ನೂರರಷ್ಟು ಹಕ್ಕು ವರ್ಗಾವಣೆ ಮಾಡುತ್ತಿದ್ದೇವೆ. ರಿಜಿಸ್ಟರ್ ಆದ ಮೇಲೆ ಗ್ರಾಪಂಗಳಲ್ಲಿ ಸ್ವಯಂ ಇ-ಸ್ವತ್ತು ಸಿಗುತ್ತದೆ. ಇದರಿಂದ ಮಾಲೀಕತ್ವದ ಬಗ್ಗೆ ಯಾವುದೇ ಅನುಮಾನ ಇರುವುದಿಲ್ಲ ಎಂದು ಹೇಳಿದರು.1 ವರ್ಷದಲ್ಲಿ 1.93 ಲಕ್ಷ ಪೋಡಿ:
ಕಂದಾಯ ಇಲಾಖೆಯಿಂದ 2014-2023ರ ಅವಧಿಯಲ್ಲಿ 94 ಸಿ, ಕಂದಾಯ ಗ್ರಾಮ ಯೋಜನೆಯಡಿ 2.60 ಲಕ್ಷ ಹಕ್ಕು ಪತ್ರ ನೀಡಲಾಗಿದೆ. ಈ ಪೈಕಿ ಕೇವಲ 10 ಸಾವಿರ ಮಾತ್ರ ಖಾತೆ ಆಗಿದೆ. ಜನರ ಅಲೆದಾಟ ತಪ್ಪಿಸುವ ಉದ್ದೇಶದಿಂದ ಕಂದಾಯ ಇಲಾಖೆ ಅಧಿಕಾರಿಗಳೇ ಅರ್ಹರಿಗೆ ದಾಖಲೆ ಮಾಡಿಕೊಡುತ್ತಿದ್ದಾರೆ. 2025ರ ಜನವರಿಯಿಂದ 2026ರ ಜನವರಿ ವರೆಗೆ ರಾಜ್ಯದಲ್ಲಿ 1.93 ಲಕ್ಷ ರೈತರಿಗೆ ಪೋಡಿ, 12 ಲಕ್ಷ ಪೌತಿ ಖಾತೆ ಮಾಡಲಾಗಿದೆ ಎಂದು ಎಂದು ಮಾಹಿತಿ ನೀಡಿದರು.-ಬಾಕ್ಸ್-
ಕಂದಾಯ ಗ್ರಾಮ ಸೇರ್ಪಡೆಗೆ 1,300 ಗ್ರಾಮ ಬಾಕಿ:ರಾಜ್ಯದಲ್ಲಿ ಅಧಿಸೂಚನೆಯಾದ ಇನ್ನೂ 1,300 ಗ್ರಾಮಗಳು ಕಂದಾಯ ಗ್ರಾಮ ಸೇರ್ಪಡೆಗೆ ಬಾಕಿ ಇವೆ. ಹಕ್ಕು ಪತ್ರ ಪಡೆಯಲು ಲಾಗಿನ್ ಆಗಲು ಇನ್ನೂ ಅವಕಾಶವಿದೆ. ಕೇಂದ್ರ ಸರ್ಕಾರ ಜನಗಣತಿ ಹಿನ್ನೆಲೆಯಲ್ಲಿ ಈ ಕೆಲಸವನ್ನು 2027ರ ಜೂನ್ ವರೆಗೆ ಸ್ಥಗಿತಗೊಳಿಸುವಂತೆ ಸೂಚಿಸಿದೆ. ಅದರಂತೆ 2025ರ ಡಿಸೆಂಬರ್‌ಗೆ ಈ ಕಾರ್ಯ ಸ್ಥಗಿತಗೊಳಿಸಿದ್ದೇವೆ. 2027ರ ಜೂನ್‌ಗೆ ಮತ್ತೆ ಶುರುವಾಗಲಿದೆ. ಕಂದಾಯ ಗ್ರಾಮ ಸೇರ್ಪಡೆಗೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಇದೇ ಮಾ.16ರ ಗಡುವು ನೀಡಲಾಗಿದೆ. ಏಕೆಂದರೆ, ಇದೇ ಮಾರ್ಚ್‌ಗೆ ಈ ಕಂದಾಯ ಗ್ರಾಮ ಸೇರ್ಪಡೆ ಕುರಿತ ಕಾನೂನು ಅವಧಿ ಮುಗಿಯಲಿದೆ. ಅಷ್ಟರೊಳಗೆ ಪ್ರಸ್ತಾವನೆ ಸಲ್ಲಿಕೆಯಾದರೆ, ಮುಂದಿನ ವರ್ಷದಿಂದ ಈ ಬಾಕಿ ಕೆಲಸ ಪೂರ್ಣಗೊಳಿಸಬಹುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.