ಸ್ವಾತಂತ್ರ್ಯ ನಂತರದ ವರ್ಷಗಳಲ್ಲಿ ಗ್ರಾಮದ ರೈತರಿಗೆ ಕೃಷಿ ಮಾಡಲು ಆಗಿನ ಸರ್ಕಾರ ಗ್ರಾಮದ 1000ಕ್ಕೂ ಅಧಿಕ ಕೃಷಿ ಜಮೀನನ್ನು ಸಾಗುವಳಿಗೆ ನೀಡಿತ್ತು. ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಅಂದಿನಿಂದ ಸಾಗುವಳಿ ಮಾಡುತ್ತಿರುವ ರೈತ ಕುಟುಂಬಗಳಿಗೆ ಸರ್ಕಾರ ಈ ಭೂಮಿಯನ್ನು ಮಂಜೂರು ಮಾಡಲು ಮುಂದಾಗಿತ್ತು.

ಅಳ್ನಾವರ:

ಬಗರಹುಕುಂ ಕಾಯ್ದೆ ಅಡಿ ಜಮೀನು ಮಂಜೂರು ವಿಚಾರವಾಗಿ ತಾಲೂಕಿನ ಕುಂಬಾರಕೊಪ್ಪದಲ್ಲಿ ಮಂಗಳವಾರ ಏಕಾಏಕಿ ಪರಿಶಿಷ್ಟ ಸಮುದಾಯ ಹಾಗೂ ಗ್ರಾಮಸ್ಥರ ಮಧ್ಯೆ ಗದ್ದಲ-ಗೊಂದಲ ಸೃಷ್ಟಿಯಾಗಿತ್ತು. ಕೂಡಲೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಿ ಶಾಂತಿ ಸಭೆ ನಡೆಸಿ ಗೊಂದಲಕ್ಕೆ ತಾತ್ಕಾಲಿಕವಾಗಿ ತೆರೆ ಎಳೆದಿದೆ.

ಸ್ವಾತಂತ್ರ್ಯ ನಂತರದ ವರ್ಷಗಳಲ್ಲಿ ಗ್ರಾಮದ ರೈತರಿಗೆ ಕೃಷಿ ಮಾಡಲು ಆಗಿನ ಸರ್ಕಾರ ಗ್ರಾಮದ 1000ಕ್ಕೂ ಅಧಿಕ ಕೃಷಿ ಜಮೀನನ್ನು ಸಾಗುವಳಿಗೆ ನೀಡಿತ್ತು. ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಅಂದಿನಿಂದ ಸಾಗುವಳಿ ಮಾಡುತ್ತಿರುವ ರೈತ ಕುಟುಂಬಗಳಿಗೆ ಸರ್ಕಾರ ಈ ಭೂಮಿಯನ್ನು ಮಂಜೂರು ಮಾಡಲು ಮುಂದಾಗಿತ್ತು. ನಿಜವಾದ ಫಲಾನುಭವಿಗಳು ಅರ್ಜಿ ಸಹ ಸಲ್ಲಿಸಿದ್ದರು. ಆದರೆ, ಜಮೀನು ಉಳಿಮೆ ಮಾಡದೇ ಇರುವ ಹಾಗೂ ಭೂಮಿಗಾಗಿ ಅರ್ಜಿ ಸಹ ಸಲ್ಲಿಸದ ಅನೇಕರು ಸಾಗುವಳಿ ಭೂಮಿಯಲ್ಲಿ ಬೆಳೆದ ಬೆಳೆ ಹಾಳು ಮಾಡಿದ ಘಟನೆಗೆ ಸಂಬಂಧಿಸಿದಂತೆ ಗ್ರಾಮದಲ್ಲಿ ಕೆಲ ದಿನಗಳಿಂದ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿತ್ತು.

ಪ್ರಕರಣ ದಾಖಲು:

ಈ ಕುರಿತು ಪರ-ವಿರೋಧವಾಗಿ ಅಳ್ನಾವರ ಪೊಲೀಸ್‌ ಠಾಣೆಯಲ್ಲಿ ನಾಲ್ಕು ಪ್ರಕರಣ ಸಹ ದಾಖಲಾಗಿದ್ದವು. ಈ ಪೈಕಿ ಗ್ರಾಮಸ್ಥರ ಮೇಲೆ ಎಸ್ಸಿ-ಎಸ್ಟಿ ದೌರ್ಜನ್ಯ ಪ್ರಕರಣವೂ ದಾಖಲಾಗಿತ್ತು. ಮಂಗಳವಾರ ಗ್ರಾಮದಲ್ಲಿ ಗದ್ದಲ ಆಗುವ ಸನ್ನಿವೇಶ ಉಂಟಾಗಿತ್ತು. ಇದನ್ನರಿತ ಪ್ರಭಾರಿ ಜಿಲ್ಲಾಧಿಕಾರಿ ಭುವನೇಶ ಪಾಟೀಲ, ಪೊಲೀಸ್‌ ವರಿಷ್ಠಾಧಿಕಾರಿ ಗುಂಜನ್‌ ಆರ್ಯ ಸಂಜೆ ಗ್ರಾಮದಲ್ಲಿ ಎಸ್ಸಿ-ಎಸ್ಟಿ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಿ, ಜಮೀನು ಮಂಜೂರಿ ಬೇಡಿಕೆ ವಿಚಾರವಾಗಿ ಗ್ರಾಮದಲ್ಲಿ ಶಾಂತಿ ಕದಡಲು ಮುಂದಾದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಭಾರಿ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಮಾತನಾಡಿ, ಸಾವಿರಕ್ಕೂ ಅಧಿಕ ಎಕರೆ ಸರ್ಕಾರಿ ಜಮೀನನ್ನು ಅರ್ಹ ಸಾಗುವಳಿದಾರರಿಗೆ ಹಂಚಿಕೆ ಮಾಡಲು ಪ್ರಕ್ರಿಯೆ ನಡೆದಿದೆ. ಸರ್ಕಾರದ ಮಾನದಂಡಗಳ ಅನ್ವಯ ಜಮೀನು ಮಂಜೂರಿ ಆಗಲಿದೆ. ಇನ್ನಿತರ ಬೇಡಿಕೆ ಇದ್ದರೆ ಕಂದಾಯ ಇಲಾಖೆಗೆ ಮನವಿ ಕೊಡಬೇಕು. ಅದನ್ನು ಬಿಟ್ಟು ಕಾನೂನು ಕೈಗೆತ್ತಿಕೊಳ್ಳುವ ಘಟನೆಗೆ ಆಸ್ಪದ ನೀಡುವುದಿಲ್ಲ ಎಂದು ಎಚ್ಚರಿಸಿದರು.

ಎಸ್ಪಿ ಗುಂಜನ್ ಆರ್ಯ ಮಾತನಾಡಿ, ಸಾರ್ವಜನಿಕರು ನ್ಯಾಯಯುತ ಹೋರಾಟ ನಡೆಸಬೇಕೆ ಹೊರತು ದಬ್ಬಾಳಿಕೆ ಮಾಡಿದರೆ ಕಾನೂನು ಕ್ರಮ ಅನಿವಾರ್ಯ. ಸಮಸ್ಯೆಗಳಿಗೆ ಪರಿಹಾರ ಇರಲಿದ್ದು, ಸುಳ್ಳು ಆರೋಪಗಳ ಪ್ರವೃತ್ತಿ ಬೇಡ. ಮುಂದಿನ ದಿನಗಳಲ್ಲಿ ಯಾರಲ್ಲಿಯೂ ಮನಸ್ಥಾಪ ಇಟ್ಟುಕೊಳ್ಳದೆ ಶಾಂತಿಯಿಂದ ಇರುವಂತೆ ತಿಳಿಸಿದರು.

ಸುಳ್ಳು ಪ್ರಕರಣ ಬೇಡ:

ದಲಿತ ಸಮುದಾಯದ ಮುಖಂಡರಾದ ಅಶೋಕ ದೊಡಮನಿ, ವೆಂಕಟೇಶ ಸಗಬಾಲ, ಪ್ರವೀಣ ಪವಾರ ಮಾತನಾಡಿ, ಜಾತಿ ನಿಂದನೆ ಪ್ರಕರಣವನ್ನು ವೈಯಕ್ತಿಕ ಉದ್ದೇಶಕ್ಕಾಗಿ ಬಳಸಿಕೊಳ್ಳದೇ ಸಮಾಜದ ಸುಧಾರಣೆಗೆ ಉಪಯೋಗಿಸುವುದು ಸೂಕ್ತ ಎಂಬ ಸಲಹೆ ನೀಡಿದರು.

ಉಪವಿಭಾಗಾಧಿಕಾರಿ ಶಾ ಆಲಂ ಹುಸೇನ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಪಿ ಶುಭಾ, ಸಚಿವ ಸಂತೋಷ ಲಾಡ್‌ ಆಪ್ತ ಕಾರ್ಯದರ್ಶಿ ಶ್ರೀಕಾಂತ ಗಾಯಕವಾಡ, ತಹಸೀಲ್ದಾರ್‌ ಡಾ. ಡಿ.ಎಚ್. ಹೂಗಾರ, ತಾಪಂ ಇಒ ಪ್ರಶಾಂತ ತುರಕಾಣಿ, ಪಿಎಸ್‌ಐ ಬಸವರಾಜ ಯದ್ದಲಗುಡ್ಡ ಹಾಗೂ ಜಿಲ್ಲಾ ಜಾಗೃತ ಸಮಿತಿ ಸದಸ್ಯರು ಈ ಸಂದರ್ಭದಲ್ಲಿದ್ದರು. ಘಟನೆಯ ಮೂಲ

ಕುಂಬಾರಕೊಪ್ಪ ಗ್ರಾಮದ 390 ರೈತರು ಈ ಜಮೀನನ್ನು ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದು, ಈ ಪೈಕಿ 354 ಜನರು ಫಾರ್ಮ ನಂ. 57ರಲ್ಲಿ ಹಕ್ಕು ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಬಗರಹುಕುಂ ಕಾಯ್ದೆಯ ಪ್ರಕಾರ ಪರಿಶೀಲನೆ ಮಾಡಿ ಜಮೀನು ಮಂಜೂರಿಗೆ ಸಮಿತಿ ಕ್ರಮಕೈಗೊಳ್ಳಲಿದೆ. ಆದರೆ, ಜಮೀನು ಸಾಗುವಳಿ ಮಾಡದಿರುವ ಹಾಗೂ ಅರ್ಜಿ ಸಲ್ಲಿಸದ ಕೆಲವರು ಈಗ ನಮಗೂ ಜಮೀನು ನೀಡುವಂತೆ ಒತ್ತಾಯಿಸಿ ಹೋರಾಟಕ್ಕೆ ಮುಂದಾಗಿರುವುದೇ ಈ ಘಟನೆಗೆ ಮೂಲ ಕಾರಣ ಎನ್ನಲಾಗಿದೆ.