ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ಮುಂದಿನ ಒಂದು ತಿಂಗಳಲ್ಲಿ ಸೊರಬ ತಾಲೂಕಿನಲ್ಲಿ ೧೪೦ ಕೋಟಿ ರು. ವೆಚ್ಚಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರು ಹೇಳಿದರು.ಶನಿವಾರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ, ತಾಲೂಕಿನ ವರದಾ ನದಿಗೆ ಬ್ಯಾರೇಜ್ ಹಾಗೂ ತಡೆಗೋಡೆ ನಿರ್ಮಾಣಕ್ಕೆ ೬೨ ಕೋಟಿ ರು. ಮಂಜೂರಾಗಿದ್ದು, ಶೀಘ್ರದಲ್ಲಿ ಕಾರ್ಯಾರಂಭಗೊಳ್ಳಲಿದೆ ಎಂದರು.
ತಾಲೂಕಿನಲ್ಲಿ ಕೊರತೆ ಇರುವ ಶಿಕ್ಷಕರ ಶೇ.೯೫ ರಷ್ಟು ಹುದ್ದೆಗಳನ್ನು ಈಗಾಗಲೇ ಭರ್ತಿ ಮಾಡಲಾಗಿದೆ ಎಂದ ಅವರು ಶಾಲಾ ಮಕ್ಕಳಿಗೆ ವಾರದ ಎರಡು ದಿನ ನೀಡಲಾಗುತ್ತಿದ್ದ ಮೊಟ್ಟೆಯನ್ನು ಅಜೀಮ್ ಪ್ರೇಮ್‌ಜಿ ಫೌಂಡೇಶನ್‌ನ ಸಹಯೋಗದೊಂದಿಗೆ ಮುಂದಿನ ಮೂರು ವರ್ಷಗಳವರೆಗೆ ವಾರದ ಆರು ದಿನಗಳ ಕಾಲ ಮೊಟ್ಟೆ ವಿತರಿಸುವ ಕಾರ್ಯಕ್ಕೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅದಕ್ಕಾಗಿ ಸರ್ಕಾರ ೧೫೦೦ ಕೋಟಿ ರೂಪಾಯಿಗಳ ಹೆಚ್ಚುವರಿ ವೆಚ್ಚವನ್ನು ಭರಿಸಲಿದೆ. ಅಲ್ಲದೆ ಶಾಲಾ ಮಕ್ಕಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪೌಷ್ಟಿಕಾಂಶ ಯುಕ್ತ ಆಹಾರ ಸರಬರಾಜು ಮಾಡಲು ಉದ್ದೇಶಿಸಿದ್ದು, ಪ್ರತಿ ದಿನ ಬೆಳಿಗ್ಗೆ ೫೫ ಲಕ್ಷ ಮಕ್ಕಳಿಗೆ ರಾಗಿ ಮಾಲ್ಟ್ ವಿತರಿಸಲಾಗುತ್ತಿದೆ ಎಂದರು.ಸೊರಬ-ಶಿರಾಳಕೊಪ್ಪ ಮತ್ತು ಆನವಟ್ಟಿ ಸುತ್ತಮುತ್ತಲ ಪ್ರದೇಶಗಳ ೩೫೪ ಗ್ರಾಮಗಳ ನಿವಾಸಿಗಳಿಗೆ ಶರಾವತಿ ನದಿಯಿಂದ ಶುದ್ಧ ಕುಡಿಯುವ ನೀರನ್ನು ಒದಗಿ ಸಲು ಸುಮಾರು ೬೦೦ ಕೋಟಿ ರು. ವೆಚ್ಚದ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲಿ ಕಾರ್ಯಾರಂಭಗೊಳ್ಳುವ ಆಶಯ ಹೊಂದಲಾಗಿದೆ. ತಾಲೂಕಿನ ಜನರಿಗೆ ಯಾವುದೇ ಅಡಚಣೆಯಾಗದಂತೆ ದಂಡಾವತಿ ನದಿಯ ನೀರನ್ನು ಎರಡು ಕೆನಾಲ್‌ಗಳ ಮೂಲಕ ತಾಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು. ತಾಲೂಕಿನಲ್ಲಿ ವಿವಿಧ ಕೆನಾಲುಗಳ ಮೂಲಕ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಸಂರಕ್ಷಿಸಿ ಸದ್ಬಳಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಅಲ್ಲದೆ ಚಾನಲ್‌ಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯ ಕೃಷಿ ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ಸಹಕಾರಿಯಾಗುವಂತೆ ವಿವಿಧ ಸ್ಥಳಗಳಲ್ಲಿ ವಿದ್ಯುತ್ ಉಪ ಕೇಂದ್ರಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಅಲ್ಲದೆ ಕೃಷಿ ಚಟುವಟಿಕೆಗಳಿಗೆ ಸೋಲಾರ್ ಬಳಕೆಗೆ ಉತ್ತೇಜನ ನೀಡಲು ವಿಶೇಷ ಗಮನಹರಿಸಲಾಗುವುದು ಎಂದರು.ಅರಣ್ಯದಂಚಿನಲ್ಲಿ ವಾಸಿಸುವ ವನವಾಸಿಗಳಿಗೆ ಹಕ್ಕು ಪತ್ರ ನೀಡುವ ಬಗ್ಗೆ ಕ್ರಮವಹಿಸಲಾಗಿದೆ. ಯಾರನ್ನು ಒಕ್ಕಲಿಬ್ಬಿಸುವ ಉದ್ದೇಶ ಸರ್ಕಾರದ ಮುಂದಿಲ್ಲ. ಹೊಸದಾಗಿ ಅರಣ್ಯ ಭೂಮಿ ಒತ್ತುವರಿ ಮಾಡುವವರನ್ನು ಸರ್ಕಾರ ಸಹಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ವಿಮಾನ ನಿಲ್ದಾಣದಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಸರ್ಕಾರದ ವತಿಯಿಂದ ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಜಿ.ಪಂ. ಮಾಜಿ ಸದಸ್ಯ ಶಿವಲಿಂಗೇಗೌಡ, ತಾ.ಪಂ. ಮಾಜಿ ಅಧ್ಯಕ್ಷ ಹೆಚ್. ಗಣಪತಿ, ಮುಖಂಡರಾದ ಎಂ.ಡಿ.ಶೇಖರ್, ಕೆ.ಪಿ.ರುದ್ರಗೌಡ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.