ಡಂಬಳ: ಗ್ರಾಮದಲ್ಲಿ 15 ದಿನಗಳ ಒಳಗಾಗಿ ಸಮುದಾಯ ಆರೋಗ್ಯ ಕೇಂದ್ರ ಮಂಜೂರು ಮಾಡದೇ ಹೋದರೆ ಡಂಬಳ ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗುವುದು ಎಂದು ಸರ್ವೋದಯ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ವಿವಿಧೋದ್ದೇಶಗಳ ಸಂಸ್ಥೆ ಕಾರ್ಯದರ್ಶಿ ಗುಡದಪ್ಪ ತಳಗೇರಿ ತಿಳಿಸಿದರು.
ಡಂಬಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಶುಕ್ರವಾರ ಸಮುದಾಯ ಆರೋಗ್ಯ ಕೇಂದ್ರ ಮಂಜೂರಿಗಾಗಿ ಸರ್ವೋದಯ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ವಿವಿಧೋದ್ದೇಶಗಳ ಸಂಸ್ಥೆ ಮತ್ತು ಅಹಿಂದ ಸಂಘಟನೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಬಡವರು, ಶೋಷಿತರು, ರೈತರು ಜನಸಾಮಾನ್ಯರು ಕೂಲಿ ಕಾರ್ಮಿಕರು ವೈದ್ಯಕೀಯ ಸೇವೆ ದೊರೆಯದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಆಟಕ್ಕುಂಟು ಲೆಕ್ಕಕ್ಕೆ ಇಲ್ಲದಂತಾಗಿದೆ ಎಂದರು.ಇತ್ತೀಚೆಗೆ ತುರ್ತು ಚಿಕಿತ್ಸೆಗೆ ಆ್ಯಂಬುಲೆನ್ಸ್ ಸಿಗದೇ ಮೃತಪಟ್ಟ ಬಾಲಕ ಸಂತೋಷನ ಸಾವಿಗೆ ನ್ಯಾಯ ಸಿಗಬೇಕು. 28 ಗ್ರಾಮಗಳನ್ನು ಒಳಗೊಂಡ ಡಂಬಳ ಹೋಬಳಿಯ ಜನ ಆರೋಗ್ಯ ಸೇವೆಗೆ ಪರದಾಡುವ ಸ್ಥಿತಿ ಇದೆ. ತುರ್ತು ಸೇವೆ ಸಿಗದೇ ಸಾವು ನೋವು ಸಂಭವಿಸುತ್ತಿವೆ. ಇದಕ್ಕೆ ಮುಖ್ಯ ಕಾರಣ ಸರ್ಕಾರ ಹಾಗೂ ಈ ಭಾಗದ ಶಾಸಕರ ನಿರ್ಲಕ್ಷ್ಯವೆ ಕಾರಣ ಎಂದು ದೂರಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಲಕ್ಷ್ಮಣ ದೊಡ್ಡಮನಿ ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಂಜೂರು ಮಾಡಲು ಅಧಿಕಾರಿಗಳು ಕಾನೂನಿನ ನೆಪ ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಇದು ಜನಸಾಮಾನ್ಯರಿಗೆ ಮಾಡುತ್ತಿರುವ ದ್ರೋಹವಾಗಿದೆ ಎಂದರು.ಅಹಿಂದ ಜನತಾ ಸಂಘದ ಅಧ್ಯಕ್ಷ ಪ್ರಕಾಶ ಮೇಗೂರ ಹಾಗೂ ಯುವ ಮುಖಂಡ ವೆಂಕಟೇಶ ಗದಗಿನ ಪ್ರಾಸ್ತಾವಿಕವಾಗಿ ಮಾತನಾಡಿ, ಆಸ್ಪತ್ರೆಗೆ ತುರ್ತಾಗಿ ಆ್ಯಂಬುಲೆನ್ಸ್ ಸೇವೆ ಒದಗಿಸಬೇಕು. ಹಗಲು ಮತ್ತು ರಾತ್ರಿ ಸಮಯದಲ್ಲಿ ವೈದ್ಯರು ಸ್ಥಳೀಯವಾಗಿ ಲಭ್ಯವಾಗುವಂತೆ ಅಗತ್ಯ ಕ್ರಮ ತಗೆದುಕೊಳ್ಳಬೇಕು ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ವೈದ್ಯಾಧಿಕಾರಿ ಎಸ್.ಎಸ್. ನೀಲಗುಂದ ಅವರು, ಸಮುದಾಯ ಆರೋಗ್ಯ ಕೇಂದ್ರ ಮಾಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಸಕಾರಾತ್ಮಕ ಸ್ಪಂದನೆಯು ದೊರೆತಿದೆ. ಮೂರ್ನಾಲ್ಕು ತಿಂಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರ ಮಂಜೂರಾಗುತ್ತದೆ. ತುರ್ತಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಕಾದ ವೈದ್ಯರು ಸಿಬ್ಬಂದಿ ಹಾಗೂ ಇತರೆ ಸೇವೆ ಒದಗಿಸಲು ಖಂಡಿತ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಈ ಸಮಯದಲ್ಲಿ ಉಪತಹಸೀಲ್ದಾರ್ ಎಸ್.ಎಸ್. ಬಿಚ್ಚಾಲಿ ತಾಲೂಕು ವೈದ್ಯಾಧಿಕಾರಿ ಎಸ್.ಎಸ್. ಪಾಟೀಲ, ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ನಿತಿನ್ ಸ್ವರೂಪ, ವೈದ್ಯಾಧಿಕಾರಿ ಶಂಕರ ಭಾವಿಮನಿ ಇದ್ದರು.
ಪ್ರತಿಭಟನೆಯಲ್ಲಿ ಶಶಿಕಾಂತ ಬಂಡಿಹಾಳ, ಗೋಪಾಲ ಗದಗಿನ, ಮಂಜುನಾಥ ನರಗುಂದ, ಶ್ರೀಕಾಂತ ಸಿರಗೇರಿ, ಯಾಸಿನ ತಾಂಬೋಟಿ, ಭರಮಪ್ಪ ಮಂಗೋಜಿ, ರಾಜಾಭಕ್ಷಿ ಡಾಲಾಯತ, ಆದಿತ್ಯ ಗದಗಿನ, ಹರೀಶ ಯಲಬೋವಿ, ದಾವಲ ಬೆನಕೊಪ್ಪ, ಶಿವು ಹೊವಣ್ಣನವರ, ಅಶೋಕ ತಳಗೇರಿ, ಆಸೀಫ ತಾಂಬೋಟಿ, ಸಮೀರ ತಾಂಬೋಟಿ, ಬುಡ್ನೆಸಾಬ ಜಲಾಲನವರ, ಮರಿಯಪ್ಪ ದೊಡ್ಡಮನಿ, ಅಡಿವೆಪ್ಪ ಪೂಜಾರ, ಶಬ್ಬೀರ ನಮಾಜ, ಪ್ರವೀಣ ಅಡವಿಸೋಮಾಪೂರ, ಶ್ರೀಧರ ಮಾಳಗಿ, ಪ್ರಜ್ವಲ ಗಡ್ಡಿ, ರಾಜೇಸಾಬ ಅತ್ತಾರ, ನಾಗರಾಜ ಕೊರವರ, ಸೋಹಿಲ್ ದೊಡ್ಡಮನಿ, ಮಂಜುನಾಥ ಸಿದ್ದಣ್ಣವರ,ಬಸವರಾಜ ವಗ್ಗರಣಿ,ಮಲ್ಲಪ್ಪ ಪೂಜಾರ, ಕುಮಾರ ಗೌಡಣ್ಣವರ, ರಾಜು ಬಿಕನಹಳ್ಳಿ, ಅರುಣ ಚಿಲಕವಾಡ, ಶರಮೇಸಾಬ ಆಲೂರ, ರಫೀಕ ಕುರ್ತಕೋಟಿ, ಶ್ರೀನಿವಾಸ ಉಪ್ಪಾರ, ದಿನೇಶ ಹೊಸಳ್ಳಿ, ಚೆನ್ನಪ್ಪ ಕಾಡಸಿದ್ದೇಶ್ವರಮಠ, ಅನೀಸ್ ತಾಂಬೋಟಿ ಇತರರು ಇದ್ದರು.