ಶರಣು ಸೊಲಗಿ
ಮುಂಡರಗಿ: ಬಿರು ಬೇಸಿಗೆಯ ಬಿಸಿಲಿನ ಈ ಸಂದರ್ಭದಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ರಸ್ತೆಗಳಲ್ಲಿ ಇದೀಗ ಗುಲ್ ಮೊಹರ್ ಕೆಂಪು ಹೂವುಗಳು ಜನಮನ ಸೆಳೆಯುತ್ತಿವೆ.ಬೇಸಿಗೆ ಕಾಲದಲ್ಲಿ ಮರದ ಎಲೆಗಳಿಗಿಂತ ಹೂವುಗಳೇ ಹೆಚ್ಚು ಕಾಣುವಷ್ಟು ಅರಳಿರುವ ಗುಲ್ ಮೊಹರ್ ಮರಗಳು ಪರಿಸರಕ್ಕೆ ಹೊಸ ಜೀವ ತುಂಬಿವೆ. ಪಟ್ಟಣದ ಹೆಸರೂರು ರಸ್ತೆಯಲ್ಲಿರುವ ಕರ್ನಾಟಕ ಗೃಹ ಮಂಡಳಿ ಪ್ರದೇಶಕ್ಕೆ ಬಂದರೆ ಸಾಕು, ಅಲ್ಲಿ ಸುಮಾರು 40ಕ್ಕೂ ಹೆಚ್ಚು ಗುಲ್ ಮೊಹರ್ ಗಿಡಗಳು ಬೆಳೆದು ನಿಂತಿದ್ದು, ನಿತ್ಯ ಬೆಳಗ್ಗೆ ಹಾಗೂ ಸಂಜೆ ವಾಯುವಿಹಾರಕ್ಕೆ ಬರುವ ನೂರಾರು ಜನ ಹಿರಿಯ ನಾಗರಿಕರು, ಯುವಕ, ಯುವತಿಯರು, ವಿದ್ಯಾರ್ಥಿಗಳನ್ನು ತನ್ನತ್ತ ಆಕರ್ಷಿಸಿಕೊಳ್ಳುತ್ತಿವೆ. ಪ್ರತಿಯೊಬ್ಬರೂ ಈ ಹೂವಿನ ಅಂದವನ್ನು ನೋಡಿ ಕಣ್ತುಂಬಿಕೊಳ್ಳುತ್ತಿರುವುದು ಕಂಡುಬರುತ್ತಿದೆ.
ಪಟ್ಟಣದ ನ್ಯಾಯಾಲಯದ ಆವರಣ, ತೋಟಗಾರಿಕಾ ಇಲಾಖೆ ಆವರಣ, ಬ್ಯಾಲವಾಡಗಿ ಸಮೀಪದ ಕೈಗಾರಿಕಾ ವಸಾಹತು ಪ್ರದೇಶ, ಅನ್ನದಾನೀಶ್ವರ ಕ್ರೀಡಾಂಗಣದ ಹತ್ತಿರವಿರುವ ಜಗದ್ಗುರು ಅನ್ನದಾನೀಶ್ವರ ಬಿಇಡಿ ಕಾಲೇಜಿನ ಮುಂದೆ ಸುಮಾರು 15ರಿಂದ 20 ಮರಗಳಿವೆ.ಜಲಮಂಡಳಿ ಆವರಣ, ಎಸ್.ಎಸ್. ಪಾಟೀಲ ನಗರದ ರಸ್ತೆ, ಗದಗ ಮುಂಡರಗಿ ರಸ್ತೆ, ಬರದೂರು, ಮೇವುಂಡಿ, ಡಂಬಳ, ಕಲಕೇರಿ, ಕೊರ್ಲಹಳ್ಳಿ, ಹಮ್ಮಿಗಿ ಸೇರಿದಂತೆ ರಸ್ತೆಯುದ್ದಕ್ಕೂ ಗುಲ್ ಮೊಹರ್ ಮರಗಳನ್ನು ಕಾಣಬಹುದು. ಇದೀಗ ಸಂಪೂರ್ಣವಾಗಿ ಒಂದೇ ಒಂದು ಹಸಿರು ಎಲೆಗಳಿಲ್ಲದೇ ಎಲ್ಲವೂ ಕೆಂಪು ಬಣ್ಣದಿಂದ ಕೂಡಿದ್ದರಿಂದಾಗಿ ನೋಡುಗರನ್ನು ತನ್ನತ್ತ ಸೆಳೆಯುತ್ತಿವೆ. ಏಪ್ರಿಲ್ ಕೊನೆಯಿಂದ ಜೂನ್‌ವರೆಗೆ ಈ ಗುಲ್ ಮೊಹರ್ಹೂವು ಅರಳುತ್ತವೆ. 5 ದಳಗಳುಳ್ಳ ಈ ಹೂವು 4 ದಳ ಕೆಂಪು, ಕಿತ್ತಳೆಯಿಂದ ಕೂಡಿದ್ದರೆ ಒಂದು ದಳ ಬಿಳಿ, ಹಳದಿ ವಿಶ್ರಿತ ಚುಕ್ಕೆಗಳಿಂದ ಕೂಡಿರುತ್ತದೆ. ಹೂವು ಉದುರಿದಾಗ ಸಂಪೂರ್ಣವಾಗಿ ನೆಲಕ್ಕೆ ಕೆಂಪು ಹಾಸಿಗೆ ಹಾಸಿದಂತೆ ಕಾಣುತ್ತವೆ. ಈ ಹೂವು ಉದುರಿನ ನಂತರ ಖಡ್ಗದಂತೆ ಕಂದು ಬಣ್ಣದ ಕಾಯಿ ಬಿಡುತ್ತದೆ. ಈ ಮರವು ಅಗಲವಾಗಿ ಬೆಳೆಯುವುದರಿಂದ ಇವು ಹೆಚ್ಚಿನ ಪ್ರಮಾಣಗಲ್ಲಿ ತಂಪಾದ ನೆರಳು ನೀಡುತ್ತವೆ. ಹೀಗಾಗಿಯೇ ಅರಣ್ಯ ಇಲಾಖೆಯವರು ಇವುಗಳನ್ನು ರಸ್ತೆಯಲ್ಲಿ, ವಿವಿಧ ಸರ್ಕಾರಿ ಕಚೇರಿಗಳ ಆವರಣದಲ್ಲಿ. ಶಾಲಾ- ಕಾಲೇಜುಗಳಲ್ಲಿ ನೆಡುತ್ತಾರೆ.
ಮೇ ಫ್ಲವರ್: ಬೇಸಿಗೆಯ ಸಂದರ್ಭದಲ್ಲಿ ಇಡೀ ಮರದಲ್ಲಿ ಒಂದೇ ಒಂದು ಎಲೆ ಇರದೇ ಸಂಪೂರ್ಣವಾಗಿ ಹೂವು ತುಂಬಿತ್ತದೆ. ಇದರಲ್ಲಿ ರಾಜಾ, ರಾಣಿ ಎಂಬ ಎರಡು ಬಗೆಯ ಹೂವುಗಳಿರುತ್ತವೆ. ಹೂವೆ ನೆರಳನ್ನು ನೀಡುವುದು ಈ ಮರದ ವಿಶೇಷ. ಇದಕ್ಕೆ ಮೇ ಫ್ಲವರ್ ಎಂದು ಸಹ ಕರೆಯುತ್ತಾರೆ. ಬೇಸಿಗೆಯಲ್ಲಿ ಜನತೆಗೆ ಹೆಚ್ಚು ಆಕರ್ಷಕವಾಗುವುದರ ಜತೆಗೆ ಮನಸ್ಸಿಗೆ ಮುದ ನೀಡುತ್ತದೆ. ಇದು ಪರಿಸರಕ್ಕೆ ಪೂರಕವಾದ ಮರವಾಗಿದೆ. ಹೀಗಾಗಿ ಒಂದು ಪಟ್ಟಣದ ಸಿಂಗಾರಕ್ಕಾಗಿ ಅರಣ್ಯ ಇಲಾಖೆ ಈ ಮರಗಳನ್ನು ಹೆಚ್ಚು ಬೆಳೆಸುವುದು ಸೂಕ್ತವಾಗಿದೆ ಎಂದು ಪರಿಸರವಾದಿ ಪ್ರೊ. ಸಿ.ಎಸ್. ಅರಸನಾಳ ತಿಳಿಸಿದರು.