16ಕ್ಕೆ ಗವಿಮಠ ಸಾಹಿತ್ಯ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಸಮಾರಂಭ

| Published : Feb 11 2025, 12:47 AM IST

16ಕ್ಕೆ ಗವಿಮಠ ಸಾಹಿತ್ಯ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಸಮಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಾ.ಬಿ.ಎಸ್.ಗವಿಮಠ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಹಾಗೂ ಸಮಾಜಭೂಷಣ ಡಾ.ಪ್ರಭಾಕರ ಕೋರೆ ಅಭಿನಂದನ ಗ್ರಂಥದ ದ್ವಿತೀಯ ಮುದ್ರಣ ಲೋಕಾರ್ಪಣೆ ಸಮಾರಂಭ ಫೆ.16 ರಂದು ಬೆಳಗ್ಗೆ 10.30ಕ್ಕೆ ಬೆಳಗಾವಿಯ ನೆಹರೂ ನಗರದ ಕನ್ನಡ ಭವನದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಎಲ್‌.ವಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪ್ರಾ.ಬಿ.ಎಸ್.ಗವಿಮಠ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಹಾಗೂ ಸಮಾಜಭೂಷಣ ಡಾ.ಪ್ರಭಾಕರ ಕೋರೆ ಅಭಿನಂದನ ಗ್ರಂಥದ ದ್ವಿತೀಯ ಮುದ್ರಣ ಲೋಕಾರ್ಪಣೆ ಸಮಾರಂಭ ಫೆ.16 ರಂದು ಬೆಳಗ್ಗೆ 10.30ಕ್ಕೆ ಬೆಳಗಾವಿಯ ನೆಹರೂ ನಗರದ ಕನ್ನಡ ಭವನದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಎಲ್‌.ವಿ.ಪಾಟೀಲ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಷ್ಠಾನದ 2025ರ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಚಿಕ್ಕೋಡಿಯ ಖ್ಯಾತ ವೈದ್ಯ, ಸಾಹಿತಿ ಡಾ.ದಯಾನಂದ ನೂಲಿ ಅವರಿಗೆ ಶರಣ ಸಾಹಿತ್ಯಸಿರಿ ಪ್ರಶಸ್ತಿ, ಸಾಹಿತಿ ಡಾ.ಗುರುದೇವಿ ಹುಲೆಪ್ಪನವರಮಠ ಅವರಿಗೆ ಮಾಜಿ ಶಾಸಕ ದಿ.ಹೊನ್ನಪ್ಪಣ್ಣ ನೂಲಿ ಅವರ ಸ್ಮರಣಾರ್ಥ ಡಾ.ದಯಾನಂದ ನೂಲಿ ಕೊಡಮಾಡಿದ ದತ್ತಿ ಪ್ರಶಸ್ತಿ ಸಾಹಿತ್ಯಸಿರಿ ಪ್ರಶಸ್ತಿ, ಸವದತ್ತಿಯ ನಾಟಕ ಕಲಾವಿದ ಝಕೀರ ನದಾಫ. ಅವರಿಗೆ ಪ್ರಾ.ಬಿ.ಎಸ್.ಗವಿಮಠ ಅವರು ರಂಗಭೂಮಿ ಸಾಧಕರಿಗೆ ಕೊಡಮಾಡಿದ ರಂಗಚೇತನ ಪ್ರಶಸ್ತಿ ಹಾಗೂ ಹುಕ್ಕೇರಿ ತಾಲೂಕಿನ ಇಸ್ಲಾಮಪುರ ಗ್ರಾಮದ ಕವಿ, ಪ್ರಾಧ್ಯಾಪಕ ಡಾ.ಸಂತೋಷ ನಾಯಿಕ ಅವರಿಗೆ ಪ್ರೊ.ಎಂ.ಎಸ್.ಇಂಚಲ ಅವರು ಉದಯೋನ್ಮುಖ ಕವಿಗಳಿಗಾಗಿ ಕೊಡಮಾಡಿದ ಕಾವ್ಯಸಿರಿ ದತ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಿಡಸೋಸಿ ಸಿದ್ಧಸಂಸ್ಥಾನಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅಧ್ಯಕ್ಷತೆಯನ್ನು ಪ್ರೊ.ಎಲ್.ವಿ.ಪಾಟೀಲ ವಹಿಸಲಿದ್ದು, ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರು ಉದ್ಘಾಟಿಸಲಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಶರಣ ಸಾಹಿತ್ಯ ಪರಿಷತು ಅಧ್ಯಕ್ಷ ಡಾ. ಸಿ. ಸೋಮಶೇಖರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಡಾ. ಗುರುಪಾದ ಮರಿಗುದ್ದಿ, ಡಾ.ವಿ.ಎಸ್.ಮಾಳಿ ಅಭಿನಂದನ ನುಡಿ ಆಡಲಿದ್ದಾರೆ ಎಂದು ತಿಳಿಸಿದರು.ಗೋಷ್ಠಿಯಲ್ಲಿ ಪ್ರಾ.ಬಿ.ಎಸ್‌.ಗವಿಮಠಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯದರ್ಶಿ ಅಕಬರ ಸನದಿ, ಪ್ರಾ.ಬಿ.ಎಸ್‌.ಗವಿಮಠ, ಯ.ರು.ಪಾಟೀಲ, ಬಸವರಾಜ ಗಾರ್ಗಿ, ವಿಶ್ವನಾಥ ನೇಸರಿ, ಮಹೇಶ ಗುರುನಗೌಡರ ಮತ್ತಿತರರು ಉಪಸ್ಥಿತರಿದ್ದರು.

ಹಿರಿಯ ಸಾಹಿತಿ ಪ್ರಾ.ಬಿ.ಎಸ್‌.ಗವಿಮಠ ಅವರ 50 ವರ್ಷದ ಸಾಹಿತ್ಯಿಕ ಸೇವೆ, ವಿವಿಧ ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ರಂಗಕರ್ಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇವರ ಸುದೀರ್ಘ ಕನ್ನಡ ನಾಡುನುಡಿಗಳ ಸೇವೆಯನ್ನು ಗಮನಿಸಿ ಕೆಎಲ್‌ಇ ಸಂಸ್ಥೆ ಮತ್ತು ಇವರ ಆಪ್ತ ಮಿತ್ರರು ಸೇರಿ ಅಭಿನಂದನ ಸಮಾರಂಭದಲ್ಲಿ ಸಾಹಿತ್ಯಭೂಷಣ ಅಭಿನಂದನ ಗ್ರಂಥ ಸಮರ್ಪಿಸಿದ್ದಾರೆ. ಇತ್ತೀಚಿಗೆ ಶ್ರೀಯುತರ ಹೆಸರಿನಲ್ಲಿ ಸಂಕೇಶ್ವರದ ಆಪ್ತಮಿತ್ರರು ಸೇರಿ ಬಿ.ಎಸ್.ಗವಿಮಠ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಸ್ಥಾಪಿಸಿದ್ದಾರೆ. ಈ ಪ್ರತಿಷ್ಠಾನದ ಮೊದಲ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೆಳಗಾವಿ ಜಿಲ್ಲೆಯ ನಾಲ್ವರು ಸಾಧಕರನ್ನು ಗೌರವಿಸಲಾಗುತ್ತಿದೆ. ಗಡಿಭಾಗಗಳಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ವಿಸ್ತರಿಸಲು ನಿರ್ಧರಿಸಲಾಗಿದೆ.

-ಪ್ರೊ.ಎಲ್‌.ವಿ.ಪಾಟೀಲ,

ಅಧ್ಯಕ್ಷರು, ಪ್ರಾ.ಬಿ.ಎಸ್.ಗವಿಮಠ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ.